
ರಾಜ್ಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದಂತಹ ಭರವಸೆಗಳನ್ನ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಹೇಳಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು.
ರೈತರ ನೆರವಿಗೆ ಬಾರದ ಸರ್ಕಾರದ ವಿರುದ್ಧ ಸೆ.26 ರಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅರಸಿಕೆರೆಯಿಂದ ಪ್ರತಿಭಟನಾ ಪಾದಯಾತ್ರೆ ಪ್ರಾರಂಭ ಮಾಡಿ ಅ.4ರಂದು ವಿಧಾನ ಸೌಧ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯ ರ್ಕಾರ ಚುನಾವಣಾ ಪೂರ್ವದಲ್ಲಿ ರೈತರ ಪರವಾಗಿ ನೀಡಿದ್ದ ಎಲ್ಲಾ ಭರವಸೆಗಳು ಈಗ ಸುಳ್ಳಾಗುತ್ತಿವೆ. ಅಧಿಕಾರಕ್ಕೆ ಬಂದ ಕೂಡಲೇ ಎಪಿಎಂಸಿ ಕಾಯ್ದೆ ರದ್ದು, ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯಗಳ ಖರೀದಿಗೆ ಆವರ್ತ ನಿಧಿ ಸ್ವಾವನೆ ಮಾಡುವ ಭರವಸೆ ನೀಡಲಾಗಿತ್ತು. ಆದರೆ ಈಗ ಕಾಯ್ದೆ ವಾಪಸ್ ಪಡೆಯಲು ಕುಂಟು ನೆಪಗಳನ್ನು ಹೇಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರ ಇಲ್ಲದ ಸಂದರ್ಭದಲ್ಲಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು, ಅಧಿಕಾರಕ್ಕೆ ಬಂದ ನಂತರ ಮೇಕೆದಾಟು, ಮಹಾದಾಯಿ ಯೋಜನೆ ಎಲ್ಲವನ್ನೂ ಮರೆತು ಹೋಗಿದ್ದಾರೆ ಎಂದು ಗುಡುಗಿದರು.
ಸರ್ಕಾರ ನೀಡಿದಂತಹ ಭರವಸೆಗಳನ್ನು ಈಡೇರಿಸಿ ರೈತರ ಹಿತ ಕಾಪಾಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಈ ವೇಳೆ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಚಪ್ಪಗೌಡ, ದೇವನಹಳ್ಳಿ ತಾಲೂಕು ಘಟಕದ ಅಧ್ಯಕ್ಷ ರಮೇಶ್ ಮುಖಂಡರಾದ ಬಚ್ಚಹಳ್ಳಿಸತೀಶ್, ನಾರಾಯಣಸ್ವಾಮಿ, ವಾಸುದೇವ ಇದ್ದರು.