
ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಪರ ಕೆಲಸ ಮಾಡದೇ ಕುರ್ಚಿ ಉಳಿಸಿಕೊಳ್ಳಲು ನಿರತವಾಗಿದೆ ಎಂದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಕಿಡಿಕಾರಿದರು.
ದೊಡ್ಡಬಳ್ಳಾಪುರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ರೈತರ ಪರ ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು, ರೈತರ ವೋಟ್ ಪಡೆದು ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಯ್ತು, ಆದರೆ, ಇದೂವರೆಗೂ ರೈತರ ಪರ ಯಾವೊಂದು ಯೋಜನೆ ಜಾರಿಗೆ ತಂದಿಲ್ಲ ಎಂದರು.
ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಲೋನ್ ಕೊಡುತ್ತೇವೆ ಎಂದು ಹೇಳಿದ್ದರು. ರಾಜ್ಯದಲ್ಲಿ ಅತಿವೃಷ್ಟಿ ಅನಾವೃಷ್ಟಿಯಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕೃಷಿ ಆಧಾರಿತ ಕರ್ನಾಟಕದಲ್ಲಿ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸಿಗುತ್ತಿಲ್ಲ. ಎಸ್ ಸಿ, ಎಸ್ ಟಿ ಜನರಿಗೆ ಉಚಿತವಾಗಿ ಯಾವ ಸೌಲಭ್ಯಗಳನ್ನು ನೀಡುತ್ತಿಲ್ಲ. ಎಸ್ ಸಿ, ಎಸ್ ಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗ ಮಾಡಲಾಗುತ್ತಿದೆ. ಕೈಗಾರಿಕೆ ಸ್ಥಾಪನೆಗೆ ಸಾವಿರಾರು ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಇದೂವರೆಗೂ ಸೂಕ್ತ ಪರಿಹಾರ ನಿಗದಿ ಮಾಡದೇ ಮೀನಾಮೇಷ ಎಣಿಸುತ್ತದೆ. ಸರ್ಕಾರ ಹಾಗೂ ಅಧಿಕಾರಿಗಳು ದಲ್ಲಾಳಿ ಕೆಲಸ ಮಾಡುತ್ತಿದೆ…
ಪ್ರಕೃತಿ ವಿಕೋಪದಿಂದ ರೈತರು ಕಂಗಾಲಾಗಿದ್ದಾರೆ. ಬೆಳೆ ಹಾನಿ, ಮನೆ ಹಾನಿ ಸೇರಿದಂತೆ ಇತರೆ ಹಾನಿಗಳ ಪರಿಶೀಲನೆ ಕೃಷಿ ಸಚಿವ, ತೋಟಗಾರಿಕೆ ಸಚಿವರು ತೆರಳಿಲ್ಲ. ಸಚಿವರು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.
30 ಸಾವಿರ ಕೋಟಿ ಹಣವನ್ನು ನೀರಾವರಿ ಯೋಜನೆಗೆ ಮೀಸಲು ಇಟ್ಟಿದ್ದೇವೆ ಎಂದಿದ್ದರು. ಆದರೆ ಹಣ ಎಲ್ಲಿ ಹೋಯ್ತು…ಕೃಷ್ಣ ಮೇಲ್ದಂಡೆ, ಕಳಸಬಂಡೂರಿ, ಮೇಕೆದಾಟು, ಎತ್ತಿನಹೊಳೆ ಯೋಜನೆ ಸೇರಿದಂತೆ ಇತರೆ ಯೋಜನೆಗಳು ಹಳ್ಳ ಹಿಡಿದಿವೆ..
ರಾಜ್ಯದ ಹಿತಾಸಕ್ತಿ ಮರೆತು ಕುರ್ಚಿ ಉಳಿಸಿಕೊಳ್ಳಲು ಸರ್ಕಾರ ಸರ್ಕಸ್ ಮಾಡುತ್ತಿದೆ. ಪ್ರಕೃತಿ ವಿಕೋಪದ ಪರಿಹಾರಕ್ಕಾಗಿ 10 ಕೋಟಿ ಟೆಂಡರ್ ಮಾಡಿತ್ತು, ಆದರೆ ಹಣ ಬಿಡುಗಡೆ ಮಾಡಿಲ್ಲ.
ಬೆಂಬಲ ಬೆಲೆಯನ್ನು ರಾಜ್ಯ ಸರ್ಕಾರ ಏರಿಕೆ ಮಾಡಿಲ್ಲ. ಎಲ್ಲವನ್ನು ಕೇಂದ್ರದ ಕಡೆ ಬೊಟ್ಟು ಮಾಡಿ ಕುಳಿತಿದೆ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ಎರಡು ಮೂರು ವರ್ಷವಾದರೂ ವಿದ್ಯುತ್, ಪಂಪ್, ಮೋಟರ್, ಪೈಪ್ ಸೇರಿದಂತೆ ಯಾವ ಸೌಲಭ್ಯ ನೀಡಿಲ್ಲ. ಇದರಿಂದ ರೈತ ಕಂಗಾಲಾಗಿದ್ದಾರೆ. ಕಬ್ಬಿನ ಬೆಳೆಗಾರರು ಇನ್ನೂ ಹೋರಾಟ ಮಾಡುತ್ತಿದ್ದಾರೆ. ಭೂ ಸ್ವಾಧೀನ ಪರಿಹಾರ ಹಣಕ್ಕಾಗಿ ದಲ್ಲಾಳಿಗಳಿಗೆ ಹಣ ನೀಡಬೇಕು. ಅಧಿಕಾರಿಗಳೇ ದಲ್ಲಾಳಿಗಳಾಗುತ್ತಿದ್ದಾರೆ.
ಎತ್ತಿನಹೊಳೆ ಯೋಜನೆ ಇನ್ನೂ ಜಾರಿಯಾಗಿಲ್ಲ. 20 ಸಾವಿರ ಕೋಟಿ ಖರ್ಚು ಮಾಡಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಶ್ಯಬ್ಧವಾಗಿದ್ದಾರೆ. ಖುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹೋರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುತ್ತಾರೆ. ರೈತರ ವೋಟ್ ಬೇಕು, ರೈತರ ಹಿತ ಕಾಯಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರನ್ನು ದಬ್ಬಾಳಕೆ ಮಾಡುತ್ತಿರಯವ ಸರ್ಕಾರ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು…
ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ರಾಜ್ಯದ 51 ಲಕ್ಷ ರೈತರಿಗೆ ಪ್ರತಿ ಕಂತಲ್ಲಿ 3.7 ಲಕ್ಷ ಕೋಟಿ ಹಣ ಬಿಡುಗಡೆ ಮಾಡಿದೆ. ಮೂರು ಲಕ್ಷ ಇದ್ದ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮೊತ್ತವನ್ನು 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಫಸಲ್ ಭೀಮಾ ಯೋಜನೆಯಡಿಯಲ್ಲಿ 1.75ಲಕ್ಷ ಕೋಟಿ ಹಣವನ್ನು ಕೇಂದ್ರ ಸರ್ಕಾರ ರೈತರಿಗೆ ಪರಿಹಾರ ರೂಪದಲ್ಲಿ ನೀಡಿದೆ. 60ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ರೈತರಿಗೆ ಕಿಸಾನ್ ಮಾರ್ಗ ದತ್ ಯೋಜನೆಯಡಿಯಲ್ಲಿ ಮೂರು ಸಾವಿರ ರೂ. ವೃದ್ಧಾಪ್ಯ ವೇತನ ನೀಡಲಾಗುತ್ತಿದೆ. ಮಣ್ಣು ಪರೀಕ್ಷೆ ಕಾರ್ಡ್ ಗೆ 25 ಕೋಟಿ ಹಣ ಬಿಡುಗಡೆ ಮಾಡಿದೆ. ಹನಿನೀರಾವರಿ ಪ್ರೋತ್ಸಾಹಿಸಲು 93 ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಕಳೆದ ಬಾರಿ ಸಿರಿ ಧಾನ್ಯ ವರ್ಷದಡಿಯಲ್ಲಿ 2,460 ಕೋಟಿ ರೂ. ಬಿಡುಗಡೆ ಮಾಡಿತ್ತು. ಹೀಗೆ ರೈತರ ಬೆನ್ನಿಗೆ ನಿಂತು ಹತ್ತು ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದರು..
ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ಮಕ್ಕಳ ವಿದ್ಯಾನಿಧಿ ಸ್ಕಾಲರ್ ಶಿಪ್ ಹಣವನ್ನು ನಿಲ್ಲಿಸಿದೆ. ರೈತರ ಕಿಸಾನ್ ಸಮ್ಮಾನ್ ಯೋಜನೆಯ 4 ಸಾವಿರ ಹಣ ನಿಲ್ಲಿಸಿದೆ. ಹೀಗೆ ಎಲ್ಲಾ ಯೋಜನೆಗಳ ಹಣ ಬಂದ್ ಮಾಡಿ ಗ್ಯಾರಂಟಿಗಳಿಗೆ ವಿನಿಯೋಗಿಸುತ್ತಿದೆ.
ತಾಲೂಕಿನಲ್ಲಿ ಶೇ.30 ರಾಗಿ ಬೆಳೆ ನಷ್ಟವಾಗಿದೆ. ಇಂದಿನವರೆಗೂ ಪರಿಹಾರ ನೀಡಿಲ್ಲ. ಹೈನುಗಾರಿಕೆಯಲ್ಲಿ ಬಾಕಿ ಉಳಿಸಿಕೊಂಡಿರುವ 620 ಕೋಟಿ ಪ್ರೋತ್ಸಹ ಧನ ಬಿಡುಗಡೆ ಮಾಡಬೇಕು. ಪ್ರತಿ ಲೀಟರ್ ಹಾಲಿನ ಪ್ರೋತ್ಸಾಹ ಧನ 5ರೂ. ದಿಂದ 7 ರೂ.ಗೆ ಹೆಚ್ಚಿಸಬೇಕು. ಬೆಂಬಲ ಬೆಲೆಯಡಿಯಲ್ಲಿ ರಾಗಿ ಖರೀದಿ ಆದ ಮೇಲೆ 30 ದಿನದೊಳಗೆ ಹಣ ನೀಡಬೇಕು.
ಮೂವತ್ತು ಸಾವಿರ ಕೋಟಿ ನೀರಾವರಿ ಯೋಜನೆಗೆ ಮೀಸಲಿಡಬೇಕು. ಆದ್ಯತೆ ಮೇರೆಗೆ ಕುಡಿಯುವ ನೀರನ್ನು ಒದಗಿಸಬೇಕು. ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಗೊತ್ತಿಲ್ಲ. ರೈತರಪರ ಚಿಂತನೆ ಮಾಡುವುದನ್ನು ಬಿಟ್ಟು ಕುರ್ಚಿಯದ್ದೇ ಚಿಂತೆ ನಡೆಸುತ್ತಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಮ್ಯೂಸಿಕಲ್ ಚೇರ್ ಆಟ ಆಡುತ್ತಿದ್ದಾರೆ ಎಂದರು.
ಈ ವೇಳೆ ಮಾಜಿ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ ಹನುಮಂತರಾಯಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬೃಂಗೇಶ್, ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್, ಬಂತಿ ವೆಂಕಟೇಶ್, ಜಿಲ್ಲಾ ವಕ್ತಾರರಾದ ಪುಷ್ಪಾ ಶಿವಶಂಕರ್, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ಗೋವಿಂದರಾಜು, ನಗರಸಭೆ ಸದಸ್ಯ ಲಕ್ಷ್ಮೀಪತಿ, ಜಿಲ್ಲಾ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಜೆ.ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು…