ರೈತರ ಸಾಲಮನ್ನಾದಿಂದ ದೇಶಕ್ಕೆ ಯಾವುದೇ ಉಪಯೋಗವಿಲ್ಲವೆಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿರುವುದನ್ನು ಖಂಡಿಸಿ ಮತ್ತು ಕೂಡಲೇ ದೇಶದ ರೈತರಿಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ನಗರದ ತಾಲ್ಲೂಕು ಕಛೇರಿ ಮುಂದೆ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಮುಖೇನ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಮಾತನಾಡಿ, ದೇಶದ ಬೆನ್ನೆಲುಬಾದ ರೈತರ ಕುರಿತು ಕೀಳಾಗಿ ಮಾತನಾಡಿರುವುದು ಸಂಸದ ತೇಜಸ್ವಿ ಸೂರ್ಯ ಅವರಿಗೆ ಶೋಭೆ ತರುವುದಿಲ್ಲ. ರೈತರು ಸಾಲಸೋಲ ಮಾಡಿ ಬೆಳೆದ ಬೆಳೆಯನ್ನು ಅರ್ಧ ಬೆಲೆಗೆ ಮಾರಾಟ ಮಾಡಿ, ದೇಶದ 140 ಕೋಟಿ ಜನರ ಹೊಟ್ಟೆ ತುಂಬಿಸುತ್ತಿದ್ದಾರೆ. ರೈತರ ಸಾಲಮನ್ನಾ ವಿಚಾರವಾಗಿ ಹಿಂದೆ-ಮುಂದೆ ಯೋಚಿಸದೇ ಮಾತನಾಡುವ ಜನಪ್ರತಿನಿಧಿಗಳು ರೈತರ ಬೆಳೆಗೆ ಸೂಕ್ತ ಬೆಲೆ ಕೊಡಿಸಲು ಆಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ಬಿಜೆಪಿ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಸರಿಯಾಗಿ ಈಡೇರಿಸದೇ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳನ್ನು ತಮ್ಮದೆಂದು ಹೇಳಿಕೊಂಡು ತಿರುಗುತ್ತಿರುವ ಬಿಜೆಪಿ ಸಂಸದರಿಗೆ ಇದು ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬೆಳೆಗೆ ಬೆಂಬಲ ಬೆಲೆ ಕೊಡದ ಸರ್ಕಾರಗಳು, ರೈತರನ್ನು ಸಾಲದ ಸುಳಿಗೆ ನೂಕುತ್ತಿವೆ. ರೈತರ ಸಂಕಷ್ಟ ಅರಿಯದ ಒಬ್ಬ ಜವಾಬ್ದಾರಿಯುತ ಸಂಸದ ಆಡಿರುವ ಮಾತು ಖಂಡನೀಯ. ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ತಾಲ್ಲೂಕು ಅಧ್ಯಕ್ಷರು ಹನುಮೇಗೌಡ,ರೈತ ಮುಖಂಡರು ಮುನಿನಾರಾಯಣಪ್ಪ, ಕೆಂಪೇಗೌಡ, ಮಹದೇವಣ್ಣ ಇತರರು ಇದ್ದರು.