ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರೂ ಇಂದಿಗೂ ರೈತರ ಬದುಕು ಹಸನಾಗಿಲ್ಲ. ರೈತರು ಬೆಳೆದಿರುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗದೇ ಹೋರಾಟದ ಹಾದಿ ತುಳಿಯಬೇಕಾದ ಸನ್ನಿವೇಶ ಸೃಷ್ಟಿಯಾಗಿರುವುದು ಬೇಸರ ಸಂಗತಿ, ರೈತರ ಸಾಧನೆಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್‌ಗೌಡ ಹೇಳಿದರು.
ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕನ್ನಡ ಜಾಗೃತ ಭವನ ಸಭಾಂಗಣದಲ್ಲಿ ವಿಜಯ ಕರ್ನಾಟಕ ಪತ್ರಿಕೆ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸೂಪರ್ ಸ್ಟಾರ್ ರೈತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ರೈತ ವಿರೋಧಿ ನೀತಿಗಳಿಂದಾಗಿ ಕೃಷಿಕರಿಗೆ ಅನ್ಯಾಯವಾಗಿದೆ. ಯಾವುದೇ ಪಕ್ಷಗಳನ್ನು ದೂರುವುದಿಲ್ಲ. ಆದರೆ ಅನೇಕ ವರ್ಷಗಳಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರ ಪರವಾಗಿ ಕಾನೂನು ತರಲು ವಿಫಲವಾಗಿವೆ. ರಾಜ್ಯದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ, ಕೈಗಾರೀಕರಣದಿಂದ ಕೃಷಿಕರ ಸಂಖ್ಯೆ ಕಡಿಮೆ ಆಗಿದೆ. ರೈತರ ಅಳಿದುಳಿದ ಫಲವತ್ತಾದ ಭೂಮಿಯನ್ನು ಕೈಗಾರಿಕೆ ಸ್ಥಾಪನೆ ಹೆಸರಲ್ಲಿ ಕಸಿದುಕೊಂಡರೆ ರೈತರ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಂತಾಗುತ್ತದೆ. ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಕೆಐಎಡಿಬಿ ಭೂಸ್ವಾಧೀನದ ವಿರುದ್ಧ ರೈತರು 35 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ರೈತರ ಭೂಮಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿಲ್ಲ. ಸಾಸಲು ಹೋಬಳಿಯಲ್ಲಿ ರೈತರೊಬ್ಬರ ರೇಷ್ಮೆ ಮನೆಗೆ ಬೆಂಕಿ ತಗುಲಿ ಸುಟ್ಟು ಹೋಗಿದೆ. ಆ ರೈತನಿಗೆ ಸರಕಾರ ಸ್ಪಂದಿಸಿಲ್ಲ ಎಂದು ದೂರಿದರು.
ರೈತರಿಗೆ ಪ್ರೋತ್ಸಾಹ ಸಿಗಲಿ ರೈತರು ಬೆಳೆಗಳನ್ನು ಬೆಳೆಯಲು ಸಾಕಷ್ಟು ಶ್ರಮವಹಿಸುತ್ತಾರೆ. ಪೆಟ್ರೋಲ್ , ಡಿಸೇಲ್ ಹಾಕಿಸಿದರೆ ತಕ್ಷಣ ಹಣ ಸಿಗುತ್ತದೆ. ಆದರೆ ರೈತರು ರಾಗಿ ಹಾಕಿದರೆ ಹಣ ಸಿಗಲು ವರ್ಷ ಕಾಯಬೇಕಾಗುತ್ತದೆ. ಜಿಲ್ಲೆಯಲ್ಲಿ ಶೇ.15- 20ರಷ್ಟು ರೈತರು ಮಾತ್ರ ಉಳಿದುಕೊಂಡಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ ಏರುತ್ತಿದೆ. ಆದರೆ, ಹಾಲಿನ ಬೆಲೆ ಮಾತ್ರ ಏರಿಕೆಯಾಗಿಲ್ಲ. ರೈತರಿಗೆ ಸಿಗಬೇಕಾದ ಪ್ರೋತ್ಸಾಹಧನವೂ ವಿಳಂಬವಾಗಿದೆ. ವಿಜಯಕರ್ನಾಟಕ ರೈತರನ್ನು ಗುರುತಿಸುತ್ತಿರುವುದಕ್ಕೆ ಧನ್ಯವಾದಗಳು. ರೈತರ ಸಾಧನೆಗಳಿಗೆ ಮತ್ತಷ್ಟು ಪ್ರೋತ್ಸಾಹ ಸಿಗುವಂತಾಗಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಕೆ.ಎನ್. ಅನುರಾಧ ಮಾತನಾಡಿ, ರೈತರ ಕೃಷಿ ಸಾಧನೆ, ಶ್ರಮದ ಮುಂದೆ ನಮ್ಮ ಸನ್ಮಾನಗಳೆಲ್ಲ ಚಿಕ್ಕದು. ಇಂದು ಬರ ಸೇರಿದಂತೆ ನಾನಾ ಕಾರಣಗಳಿಂದ ರೈತರು ಕೃಷಿ ಕಾರ್ಯದಿಂದ ದೂರು ಉಳಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಕೂಡ ಸಾಕಷ್ಟು ಶ್ರಮವಹಿಸಿ ಹೊಲದಲ್ಲಿ ದುಡಿದು ಕೃಷಿಯಲ್ಲಿ ಸಾಧನೆ ಮಾಡಿರುವುದು ಹೆಮ್ಮೆ ವಿಚಾರ ಎಂದರು.
ಮೌಲ್ಯವರ್ಧನೆಗೂ ಇಲಾಖೆ ನೆರವು ಕೃಷಿ ಇಲಾಖೆಯಲ್ಲಿ ರೈತರಿಗೆ ಸಾಕಷ್ಟು ಸೌಲಭ್ಯಗಳಿವೆ. ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ, ಮಣ್ಣಿನ ಸವಕಳಿತಡೆಯಲು ಬದು ನಿರ್ಮಾಣ ಮಾಡಬೇಕು ಇದಕ್ಕೂ ಸಹಾಯಧನ ನೀಡಲಾಗುವುದು. ನೀರಿನ ಸದ್ಬಲಕೆ ರೈತರು ಮಾಡಬೇಕು. ಕೃಷಿಯಲ್ಲಿ ಕೊಟ್ಟಿಗೆ ಗೊಬ್ಬರ ಬಳಸಿ, ನಂತರ ರಾಸಾಯನಿಕ ಗೊಬ್ಬರ ಬಳಸಬೇಕು. ಮೌಲ್ಯವರ್ಧನೆ ಮಾಡಲು ಕೂಡ ಸಹಾಯಧನ ನೀಡಲಾಗುವುದು. ಫ್ರೂಟ್ಸ್ ಐಡಿ ಮೂಲಕ ರೇಷ್ಮೆ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಸವಲತ್ತು ಪಡೆಯಬಹುದಾಗಿದೆ. ಸೂಪರ್ ಸ್ಟಾರ್ ರೈತ ಕಾರ್ಯಕ್ರಮ ಶ್ರೇಷ್ಠ ಕಾರ್ಯಕ್ರಮವಾಗಿದೆ. ರೈತರನ್ನು ಗುರುತಿಸಿ ಸನ್ಮಾನಿಸುವುದರಿಂದ ಬೇರೊಬ್ಬರಿಗೆ ಪ್ರೇರಣೆ ಆಗಲಿದೆ. ಹಾಗೂ ಕೃಷಿ ಇಲಾಖೆ ನಾನಾ ಬಗೆಯ ಯೋಜನೆಗಳನ್ನು ಕೃಷಿ ಇಲಾಖೆ ಉಪನಿರ್ದೇಶಕ ಗಾಯತ್ರಿ ರೈತರಿಗೆ ತಿಳಿಸಿದರು.
ಬೆಂಗಳೂರಿಗೆ ಹತ್ತಿರ ಇರುವ ತೋಟಗಾರಿಕೆ ಬೆಳೆಗಳು ಹೆಚ್ಚಾಗಿ ಬೆಳೆಯಲಾಗುತ್ತದೆ. ದೊಡ್ಡಬಳ್ಳಾಪುರದಲ್ಲಿ ಹೆಚ್ಚು ಪಾಲಿಹೌಸ್ ಮಾಡಿ ಬೆಳೆ ಬೆಳೆಯಲಾಗುತ್ತದೆ. ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ. ಇಲಾಖೆ ಸಹಾಯಧನ. ರಾಷ್ಟೀಯ ತೋಟಗಾರಿಕಾ ಮಿಷನ್ ಯೋಜನೆ ಸೇರಿದಂತೆ ತೋಟಗಾರಿಕಾ ಇಲಾಖೆಯಲ್ಲಿ ರೈತರಿಗೆ ವಿವಿಧ ಯೋಜನೆಗಳ ಮೂಲಕ ಸಹಾಯಧನ ನೀಡಲಾಗುತ್ತಿದೆ. ಮನರೇಗದಲ್ಲಿ ಬಹು ವಾರ್ಷಿಕ ಬೆಳೆಗಳಿಗೆ ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸೋಲಾರ್ ಪಂಪ್ಸೆಟ್ ನೀಡಲಾಗುತ್ತಿದೆ ಇದನ್ನು ಅಳವಡಿಸಲು ಸಬ್ಸಿಡಿ ಇದೆ. ರೈತರು ಇಲಾಖೆಯಿಂದ ಸಿಗುವ ಸೌಲಭ್ಯ ಪಡೆದುಕೊಳ್ಳಬೇಕು. ರೈತರಿಗೆ ಯಾವುದೇ ಬೆಳೆಗೆ ಸಂಬಂಧಿಸಿದಂತೆ ಮಾಹಿತಿ ಕೊರತೆ ಇದ್ದಲ್ಲಿ ಸ್ಥಳೀಯವಾಗಿ ಇಲಾಖೆ ಭೇಟಿ ಮಾಹಿತಿ ಪಡೆಯಬಹುದು. ಹೋಬಳಿ ವ್ಯಾಪ್ತಿಯಲ್ಲಿ ಸಹಾಯಕ ತೋಟಗಾರಿಕೆ ಇಲಾಖೆಗಳಿಗೆ ಹೋಗಿ ಮಾಹಿತಿ ಪಡೆಯಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ್ ತಿಳಿಸಿದರು.
ರೇಷ್ಮೆ ಇಲಾಖೆ ಉಪನಿರ್ದೇಶಕ ಪ್ರಭಾಕರ್ ರೈತರಿಗೆ ಹಲವಾರು ರೇಷ್ಮೆ ಇಲಾಖೆಯಲ್ಲಿ ದೊರೆಯುವ ಇಲಾಖೆ ಸೌಲಭ್ಯಗಳ ಬಗ್ಗೆ ವಿವರಿಸಿದರು. ಮಾರುಕಟ್ಟೆ, ಪಾರದರ್ಶಕ ಧಾರಣೆ ತೂಕ, ಕಳೆದ ಐದಾರು ವರ್ಷಗಳಿಂದ ಮಾರುಕಟ್ಟೆ ಸುಧಾರಣೆ ಆಗಿದೆ. ಚಳಿ ಇರುವ ಪ್ರದೇಶಗಳಲ್ಲಿ ರೇಷ್ಮೆಗೆ ಬಹಳ ಬೇಡಿಕೆ ಇದೆ. ಉತ್ಪಾದನೆ ಕಡಿಮೆ ಇದೆ. ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ರೇಷ್ಮೆ ಬೆಳೆ ಬಗ್ಗೆ ಮಾಹಿತಿ ನೀಡಲು ಇಲಾಖೆ ಅಧಿಕಾರಿಗಳು ಲಭ್ಯವಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವೇಳೆ ರೈತರು ಸೇರಿದಂತೆ ಇತರರು ಉಪಸ್ಥಿತರಿದ್ದರು.