ರೈತರ ಶಕ್ತಿಯೇ ದೇಶದ ಶಕ್ತಿ, ರೈತರು, ಯುವಕರ ಪರ ಕಾಂಗ್ರೆಸ್ ಪಕ್ಷ ಕೆಲಸ ಮಾಡಲಿದೆ. ನಿಮ್ಮ ನಿರಂತರ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡಿ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಮನವಿ ಮಾಡಿದರು.
2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ತಾಲೂಕಿನ ತೂಬಗೆರೆ ಹೋಬಳಿಯಲ್ಲಿ ಮತಯಾಚನೆ ಮಾಡಿ, ಕಾರ್ಯಕರ್ತರು, ಮತದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಹತ್ತು ವರ್ಷಗಳಿಂದ ನರೇಂದ್ರ ಮೋದಿ ಅವರು ಆಡಳಿತ ನಡೆಸುತ್ತಿದ್ದಾರೆ. ಇವರಿಂದ ರೈತರಿಗೆ, ಯುವಕರಿಗೆ ಯಾವ ಪ್ರಯೋಜನ ಆಗಿಲ್ಲ, ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿ ಮಾಡಿಲ್ಲ, ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ, ಅಪರಾಧ ಚಟುವಟಿಕೆ ಹೆಚ್ಚಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಗುವುದು, ಯುವಕರು, ಮಹಿಳೆಯರಿಗೆ 1 ಲಕ್ಷ ಹಣವನ್ನ ಖಾತೆಗೆ ಹಾಕಲಾಗುವುದು, ಕಾಂಗ್ರೆಸ್ ಪಕ್ಷ ಎಂದರೆ ನುಡಿದಂತೆ ನಡೆಯುವ ಪಕ್ಷ ಎಂದು ಹೇಳಿದರು.
ಬಿಜೆಪಿಗೆ ಬಹುಮತ ಬಂದರೆ ಸಂವಿಧಾನ ಬದಲಾವಣೆ ಮಾಡಲಾಗುವುದು ಎಂದು ಬಿಜೆಪಿಯ ಕೆಲ ನಾಯಕರು ಹೇಳಿದ್ದಾರೆ. ರೈತರ ಸಮಸ್ಯೆಗಳು, ಹೋರಾಟಗಳಿಗೆ ಸ್ಪಂದಿಸಿದೇ ಬಿಜೆಪಿ ಸರ್ಕಾರ ಬೇಜವಾಬ್ದಾರಿ ಮೆರೆಯಲಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನ ರಕ್ಷಣೆ ಮಾಡಲಾಗುವುದು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿ ಜನಪರ ಆಡಳಿತ ನಡೆಸುತ್ತಿದೆ. ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕಾಗಿ ಮತದಾರರಲ್ಲಿ ಕೋರಿದರು.
ನಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ರಕ್ಷಾ ರಾಮಯ್ಯ ನವರ ಕುಟುಂಬ ಸಮಾಜಸೇವೆ ಮಾಡುತ್ತಾ ಬಂದಿದೆ. ಸರಳ ಸಜ್ಜನಿಕೆ ಯುವಕನಿಗೆ ಈ ಬಾರಿ ನೀವು ಆರ್ಶೀವಾದ ಮಾಡಬೇಕು. ಪ್ರತಿ ಬೂತ್ ನಲ್ಲಿ 100 ವೋಟ್ ಹೆಚ್ಚಿಗೆ ಬರಬೇಕು, ತೂಬಗೆರೆ ಹೋಬಳಿಯಿಂದ 10 ಸಾವಿರ ಲೀಡ್ ಕೊಡಬೇಕು ಎಂದು ಮನವಿ ಮಾಡಿದರು.
ನನಗೆ ಆರ್ಶೀವಾದ ಮಾಡಿದಾಗೆ ರಕ್ಷಾ ರಾಮಯ್ಯನವರಿಗೂ ಆಶೀರ್ವಾದ ಮಾಡಬೇಕು, ಜಿಲ್ಲೆಯ ಕೆರೆಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನ ತರುವೆ, ರಸ್ತೆ ಅಭಿವೃದ್ಧಿ, ಶಾಲಾ ಕಟ್ಟಡ ದುರಸ್ತಿ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ಲೋಕಸಭೆ ಚುನಾವಣೆ ಮುಗಿದ ಬಳಿಕ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಜಿಲ್ಲಾ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷ ಮುನಿಕೃಷ್ಣ, ಕೆಪಿಸಿಸಿ ಸದಸ್ಯ ಎಸ್. ಆರ್.ಮುನಿರಾಜ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎನ್.ಅರವಿಂದ್, ಶ್ರೀಧರ್, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿಸಿದ್ದಪ್ಪ, ಕಾಂಗ್ರೆಸ್ ಮುಖಂಡ ಕಿಟ್ಟಿ, ವೆಂಕಟರಮಣಪ್ಪ, ಮುರಳಿ, ತೂಬಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ನಂಜಮ್ಮ ನರಸಿಂಹಮೂರ್ತಿ, ಮಾಜಿ ಅಧ್ಯಕ್ಷ ಟಿ.ವಿ. ವೆಂಕಟೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು