ರೈತರ ಜಮೀನಿನಲ್ಲಿ ಹೈಬ್ರಿಡ್ ಕಾಡು ಬೆಕ್ಕು ಪ್ರತ್ಯಕ್ಷ

ದೊಡ್ಡಬಳ್ಳಾಪುರ: ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿ ಮರಳಕುಂಟೆ ಗ್ರಾಮದ ಹಂಚಕಲ್ಲುಗುಟ್ಟೆ ಒಳಗೊಂಡಂತೆ ಇರುವ ರೈತರ ಜಮೀನಿನಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಹೈಬ್ರಿಡ್ ತಳಿಯ ಕಾಡು ಬೆಕ್ಕು ಪತ್ತೆ ಮಾಡಲಾಗಿದೆ ಎಂದು ಜೀವವೈವಿಧ್ಯ ಸಂಶೋಧಕ ತಂಡದ ಮಂಜುನಾಥ ಎಸ್.ನಾಯಕ, ಎಸ್.ಸುನೀಲ್ ಕುಮಾರ್, ಸಿ.ರಘುಕುಮಾರ್, ಸಿ.ಕುಲದೀಪ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ತಂಡದ ಸದಸ್ಯರು, ಅಳಿವಿನ ಅಂಚಿನಲ್ಲಿರುವ ವಿವಿಧ ಕಾಡು ಬೆಕ್ಕು ತಳಿಗಳ ಪೈಕಿ ಇದು ಸಹ ಒಂದಾಗಿದೆ. ಕಾಡು ಬೆಕ್ಕುಗಳು ವಿಶಿಷ್ಟ ನಡವಳಿಕೆಯ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ. ಇವು ಸಂಪೂರ್ಣ ನಿಶಾಚರಿಗಳಾಗಿದ್ದು, ರಾತ್ರಿ ಸಮಯದಲ್ಲಿ ಸಕ್ರಿಯವಾಗಿರುತ್ತವೆ. ಇವುಗಳು ಏಕಾಂತವನ್ನು ಬಯಸುತ್ತವೆ ಮತ್ತು ಸಾಮಾನ್ಯವಾಗಿ ಮಾನವರಿಗೆ ಗೊಚರಿಸುವುದು ತೀರಾ ವಿರಳ ಎಂದಿದ್ದಾರೆ.

ಮರಳಕುಂಟೆ ಸುತ್ತಮುತ್ತ ವನ್ಯಜೀವಿಗಳ ವೈವಿಧ್ಯತೆ ಶ್ರೀಮಂತಿಕೆಯಿಂದ ಕೂಡಿದೆ. ನರಿ, ಜಿಂಕೆ ಸೇರಿದಂತೆ ಹಲವಾರು ಜಾತಿಯ ಪಕ್ಷಿಗಳು ಇಲ್ಲಿ ವಾಸ ಇರುವುದನ್ನು ದಾಖಲಿಸಲಾಗಿದೆ. ಕಾಡು ಬೆಕ್ಕುಗಳಿಗೆ ಸೂಕ್ತ ವಾಸ ಸ್ಥಾನವಾಗಿರುವ ಹಂಚಕಲ್ಲುಗುಟ್ಟೆ ಪ್ರದೇಶದಲ್ಲಿ ರಾಜ್ಯ ಸರ್ಕಾರ ಗಣಿಗಾರಿಕೆಗೆ ಅನುಮತಿ ಕೊಟ್ಟಿರುವುದು ವಿಪರ್ಯಾಸ. ಈ ಭಾಗದಲ್ಲಿ ಕಾಡು ಬೇಕ್ಕುಗಳು ರಸ್ತೆ ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿವೆ ಎಂದು ತಿಳಿಸಿದ್ದಾರೆ.

ಇಲ್ಲಿನ ಕಾಡುಬೆಕ್ಕಿನ ಮೈಮೇಲಿನ ಪಟ್ಟೆಗಳು ವಿಭಿನ್ನವಾಗಿವೆ. ಕಾಲುಗಳ ಒಳಭಾಗ, ಮುಖದ ಕೇಳಭಾಗದಲ್ಲಿ ಬಿಳಿ ಪಟ್ಟೆಗಳನ್ನು ಕಾಣಬಹುದು. ಕಾಡಂಚಿನಲ್ಲಿರುವ ಬೀದಿನಾಯಿಗಳು,ಸಾಕುಬೆಕ್ಕುಗಳು ಇಲ್ಲಿನ ವನ್ಯಜೀವಿಗಳಿಗೆ ಮಾರಕವಾಗಿವೆ. ಇವುಗಳಿಂದ ಹೈಬ್ರಿಡ್ ತಳಿಗಳು ಜನನವಾಗುವುದಲ್ಲದೆ ವನ್ಯಜೀವಿಗಳಿಗೆ ಅನೇಕ ಮಾರಣಾಂತಿಕ ರೋಗಗಳನ್ನು ಹರಡುವ ರೋಗವಾಹಕಗಳಾಗಿವೆ. ಇವುಗಳಿಂದ ತೋಳ,ನರಿ ಮತ್ತು ಕಾಡು ಬೆಕ್ಕುಗಳ ಮೂಲ ತಳಿಗಳಿಗೆ ಧಕ್ಕೆಯಾಗುತ್ತಿದೆ.
-ಮಂಜುನಾಥ ಎಸ್.ನಾಯಕ, ಜೀವವೈವಿಧ್ಯ ಸಂಶೋಧಕರು,ಬೆಂಗಳೂರು.

Leave a Reply

Your email address will not be published. Required fields are marked *