ತಾಲೂಕಿನ ಕೊನಘಟ್ಟ, ಕೋಡಿಹಳ್ಳಿ, ನಾಗದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ ಗ್ರಾಮಗಳಲ್ಲಿ ರೈತರ ಕೃಷಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಕೆಐಎಡಿಬಿ ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ವಿರೋಧಿಸಿ, ಸುಮಾರು 236 ದಿನಗಳಿಂದ ತಾಲೂಕಿನ ಕಡ್ಡಿಪುಡಿ ಕಾರ್ಖಾನೆ ರಸ್ತೆಯ ಕೊನಘಟ್ಟ ಸಮೀಪದ ಕಾಮನಬಂಡೆ ಬಳಿ ಅನಿರ್ದಿಷ್ಟಾವಧಿ ಧರಣಿಯನ್ನು ರೈತರು ಕೈಗೊಂಡಿದ್ದಾರೆ.
ಇಂದು ಗಣೇಶ ಹಬ್ಬ ಹಿನ್ನೆಲೆ, ಧರಣಿ ಸ್ಥಳದಲ್ಲೇ ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪಿಸಿ ತಮಗೆ ಎದುರಾಗಿರುವ ವಿಘ್ನ ನಿವಾರಣೆ ಮಾಡುವಂತೆ ವಿಘ್ನ ನಿವಾರಕ ಗಣಪತಿಯ ಮೊರೆ ಹೋಗಿದ್ದಾರೆ.
ಜಮೀನು ವಶಪಡಿಸಿಕೊಳ್ಳುವ ಪ್ರದೇಶದಲ್ಲಿ ಭೂಮಿಯ ಬೆಲೆ ಎಕರೆಗೆ 3.5ಯಿಂದ 4 ಕೋಟಿ ರೂ.ವರೆಗೆ ಇದೆ. ಸರ್ಕಾರಿ ಬೆಲೆಯೇ 70 ಲಕ್ಷ ರೂ ವರೆಗೆ ಇದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ವಶ ಪಡಿಸಿಕೊಂಡರೆ ಆ ಭೂಮಿಗೆ ಪ್ರತಿ ಎಕರೆಗೆ 1:4 ಕೊಡಬೇಕು ಎಂಬ ನಿಯಮವಿದೆ. ಅದರಂತೆ ರೈತರ ಭೂಮಿಗೆ ಪ್ರತಿ ಎಕರೆಗೆ ಬೆಲೆ ನಿಗದಿ ಮಾಡಿದರೆ 2.70 ಕೋಟಿ ನೀಡಬೇಕಾಗುತ್ತದೆ. ಇದನ್ನು ಅನುಸರಿಸದೇ ಬಿಡುಗಾಸು ಕೊಟ್ಟು ನಮ್ಮಿಂದ ಭೂಮಿ ಕಬಳಿಸಲು ಮುಂದಾಗಿರುವುದು ಖಂಡನೀಯ. ಸೂಕ್ತ ಬೆಲೆ ನಿಗದಿ ಮಾಡುವವರೆಗೂ ನಮ್ಮ ಧರಣಿ ಮುಂದುವರಿಯುತ್ತದೆ ಎಂದು ಧರಣಿನಿರತ ರೈತ ರಾಮಾನಂಜಿನಪ್ಪ ಹೇಳಿದ್ದಾರೆ.
ಈಗ ನಡೆಯುತ್ತಿರುವ 981 ಎಕರೆ ಭೂಸ್ವಾಧೀನದಿಂದ ನಾಲ್ಕು ಗ್ರಾಮಗಳ 704 ಕುಟುಂಬಗಳು ಭೂಮಿ ಕಳೆದುಕೊಳ್ಳಲಿವೆ. ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ವೈಜ್ಞಾನಿಕ ಪರಿಹಾರವಾದರು ದೊರೆತರೆ ಬೇರೆಡೆ ನೆಲೆ ಕಂಡುಕೊಳ್ಳಲು ಸಹಕಾರಿಯಾಗಲಿದೆ. ಇಲ್ಲವಾದರೆ ಈ ಎಲ್ಲಾ ಕುಟುಂಬಗಳು ಕನಿಷ್ಠ ಬೆಲೆಗೆ ಭೂಮಿ ಕಳೆದುಕೊಂಡು ಬೀದಿಪಾಲಾಗಲಿವೆ ಎಂದರು.
ರೈತ ದೇಶದ ಅಭಿವೃದ್ಧಿಗಾಗಿ ತನ್ನ ಕರ್ಮ ಭೂಮಿ ಬಿಟ್ಟುಕೊಡುತ್ತಿದ್ದೇನೆ. ನೂರಾರು ದಿನಗಳ ಹೋರಾಟ ತಮಾಷೆಯಲ್ಲ. ಭೂಮಿ ಬಿಟ್ಟುಕೊಡುವುದು ರೈತನ ಬದುಕಿಗೆ ಕೊನೆಯ ಮೊಳೆ ಹೊಡೆದಂತೆ. ರೈತನಿಗೆ ಅನ್ಯಾಯ ಮಾಡಬಾರದು. ವೈಜ್ಞಾನಿಕ ಬೆಲೆ ನಿಗದಿ ಮಾಡಿ ಭೂಮಿ ಖರೀದಿಸಿ ಎಂದರು.
ಈ ವೇಳೆ ರಮೇಶ್, ಎಂ.ಆನಂದ್, ಸಿ. ಕೆ.ನರಸಿಂಹಮೂರ್ತಿ, ನಾಗರಾಜ್. ಮೋಪರಹಳ್ಳಿ ಶ್ರೀನಿವಾಸಗೌಡ, ನಾಗದೇನಹಳ್ಳಿ ಪಾಪೆಗೌಡ, ಶಿವಕುಮಾರ್, ಹರೀಶ್, ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.