ತಾಲೂಕಿನ ಕೊನಘಟ್ಟ, ಕೋಡಿಹಳ್ಳಿ, ನಾಗದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ ಗ್ರಾಮಗಳಲ್ಲಿ ರೈತರ ಕೃಷಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಕೆಐಎಡಿಬಿ ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದು, ಈ ಹಿನ್ನೆಲೆ 176 ದಿನಗಳಿಂದ ನಡೆಯುತ್ತಿರುವ ಹೋರಾಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಈ ದಿಸೆಯಲ್ಲಿ ಕೈಗಾರಿಕೆಗಳಿಗೆ ಭೂಮಿ ನೀಡುತ್ತಿರುವ ರೈತರ ತ್ಯಾಗವನ್ನು ಅರ್ಥಮಾಡಿಕೊಂಡು ಜಮೀನಿನ ಬೆಲೆಗಳನ್ನು ಪುನರ್ ಪರಿಶೀಲನೆ ನಡೆಸಬೇಕಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಸ್.ಎಂ.ಹರೀಶ್ ಗೌಡ ಒತ್ತಾಯಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ, ಕೋಡಿಹಳ್ಳಿ, ನಾಗದೇನಹಳ್ಳಿ, ಆದಿನಾರಾಯಣಹೊಸಹಳ್ಳಿ ಗ್ರಾಮಗಳಲ್ಲಿ ರೈತರ ಕೃಷಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಕೆಐಎಡಿಬಿಯ ರೈತರ ಜಮೀನುಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸದ ಕಾರಣ ಕಳೆದ 176 ದಿನಗಳಿಂದ ಅನಿರ್ದಿಷ್ಟಾವದಿ ಧರಣಿ ನಡೆಸುತ್ತಿರುವ ರೈತರು ಇಂದು ಕೊನಘಟ್ಟ ಗ್ರಾಮದಿಂದ ಟ್ರ್ಯಾಕ್ಟರ್ ಹಾಗೂ ಎತ್ತಿನ ಗಾಡಿ ಮೂಲಕ ತಾಲೂಕು ಕಚೇರಿಯವರಿಗೆ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರ ಜಮೀನು ವಶಪಡಿಸಿಕೊಳ್ಳುವ ಪ್ರದೇಶದಲ್ಲಿ ಭೂಮಿಯ ಬೆಲೆ ಎಕರೆಗೆ 3.5ಯಿಂದ 4 ಕೋಟಿ ರೂ.ವರೆಗೆ ಇದೆ. ಸರ್ಕಾರಿ ಬೆಲೆಯೇ 70 ಲಕ್ಷ ರೂ. ವರೆಗೆ ಇದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ವಶ ಪಡಿಸಿಕೊಂಡರೆ ಆ ಭೂಮಿಗೆ ಪ್ರತಿ ಎಕರೆಗೆ 1:4 ಕೊಡಬೇಕು ಎಂಬ ನಿಯಮವಿದೆ. ಅದರಂತೆ ರೈತರ ಭೂಮಿಗೆ ಪ್ರತಿ ಎಕರೆಗೆ ಅದರಂತೆ ಬೆಲೆ ನಿಗದಿ ಮಾಡಬೇಕು ಎಂದರು.
ರೈತ ದೇಶದ ಅಭಿವೃದ್ಧಿಗಾಗಿ ತನ್ನ ಕರ್ಮ ಭೂಮಿ ಬಿಟ್ಟುಕೊಡುತ್ತಿದ್ದೇನೆ. ನೂರಾರು ದಿನಗಳ ಹೋರಾಟ ತಮಾಷೆಯಲ್ಲ. ಭೂಮಿ ಬಿಟ್ಟುಕೊಡುವುದು ರೈತನ ಬದುಕಿಗೆ ಕೊನೆಯ ಮೊಳೆ ಹೊಡೆದಂತೆ. ರೈತನಿಗೆ ಅನ್ಯಾಯ ಮಾಡಬಾರದು. ವೈಜ್ಞಾನಿಕ ಬೆಲೆ ನಿಗದಿ ಮಾಡಿ ಭೂಮಿ ಖರೀದಿಸಿ ಎಂದರು.
ಈಗ ನಡೆಯುತ್ತಿರುವ 971 ಎಕರೆ ಭೂಸ್ವಾಧೀನದಿಂದ ನಾಲ್ಕು ಗ್ರಾಮಗಳ 600 ಕುಟುಂಬಗಳು ಭೂಮಿ ಕಳೆದುಕೊಳ್ಳಲಿವೆ. ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ವೈಜ್ಞಾನಿಕ ಪರಿಹಾರವಾದರು ದೊರೆತರೆ ಬೇರೆಡೆ ನೆಲೆ ಕಂಡುಕೊಳ್ಳಲು ಸಹಕಾರಿಯಾಗಲಿದೆ. ಇಲ್ಲವಾದರೆ ಈ ಎಲ್ಲಾ ಕುಟುಂಬಗಳು ಕನಿಷ್ಠ ಬೆಲೆಗೆ ಭೂಮಿ ಕಳೆದುಕೊಂಡು ಬೀದಿಪಾಲಾಗಲಿವೆ ಎಂದರು.
ಪ್ರತಿಭಟನೆಯಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ಗ್ರಾಮಗಳ ರೈತ ಮುಖಂಡರಾದ ಆನಂದ್, ಕೋಡಿಹಳ್ಳಿ ಕೃಷ್ಣಪ್ಪ, ಕೊನಘಟ್ಟ ನರಸಿಂಹಮೂರ್ತಿ, ರಮೇಶ್,ನಾಗದೇನಹಳ್ಳಿ ಶ್ರೀನಿವಾಸಮೂರ್ತಿ, ಸೊಣ್ಣಪನಹಳ್ಳಿ ಚಿಕ್ಕನರಸಪ್ಪ, ಮೋಪರಹಳ್ಳಿನಾಗರಾಜ್, ಕೋಡಿಹಳ್ಳಿ ಶಿವಕುಮಾರ್, ನಾಗದೇನಹಳ್ಳಿ ಆನಂದ್ ಗೌಡ, ಸೇರಿದಂತೆ ಇತರರು ಇದ್ದರು.