ತಾಲೂಕಿನ ಕೊನಘಟ್ಟ, ಕೋಡಿಹಳ್ಳಿ, ನಾಗದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ ಗ್ರಾಮಗಳಲ್ಲಿ ರೈತರ ಕೃಷಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಕೆಐಎಡಿಬಿ ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದು, ಈ ಹಿನ್ನೆಲೆ 165 ದಿನಗಳಿಂದ ನಡೆಯುತ್ತಿರುವ ಹೋರಾಟ ಅಕಾರಿಗಳ ನಿರ್ಲಕ್ಷ್ಯದಿಂದ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಈ ದಿಸೆಯಲ್ಲಿ ಕೈಗಾರಿಕೆಗಳಿಗೆ ಭೂಮಿ ನೀಡುತ್ತಿರುವ ರೈತರ ತ್ಯಾಗವನ್ನು ಅರ್ಥಮಾಡಿಕೊಂಡು ಜಮೀನಿನ ಬೆಲೆಗಳನ್ನು ಪುನರ್ ಪರಿಶೀಲನೆ ನಡೆಸಬೇಕಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಸ್.ಎಂ.ಹರೀಶ್ ಗೌಡ ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀನು ವಶಪಡಿಸಿಕೊಳ್ಳುವ ಪ್ರದೇಶದಲ್ಲಿ ಭೂಮಿಯ ಬೆಲೆ ಎಕರೆಗೆ 3.5ಯಿಂದ 4 ಕೋಟಿ ರೂವರೆಗೆ ಇದೆ. ಸರ್ಕಾರಿ ಬೆಲೆಯೇ 70 ಲಕ್ಷ ರೂ ವರೆಗೆ ಇದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ವಶ ಪಡಿಸಿಕೊಂಡರೆ ಆ ಭೂಮಿಗೆ ಪ್ರತಿ ಎಕರೆಗೆ 1:4 ಕೊಡಬೇಕು ಎಂಬ ನಿಯಮವಿದೆ. ಅದರಂತೆ ರೈತರ ಭೂಮಿಗೆ ಪ್ರತಿ ಎಕರೆಗೆ ಅದರಂತೆ ಬೆಲೆ ನಿಗದಿ ಮಾಡಿದರೆ ಪ್ರತಿ ಎಕರೆಗೆ 2.80 ಕೋಟಿ ನೀಡಬೇಕಾಗುತ್ತದೆ ಎಂದರು.
ಬೆಂಗಳೂರು ಎಕ್ಸ್ಪ್ರೆ ಸ್ ಕಾರಿಡಾರ್ ಭೂಸ್ವಾಧೀನದಲ್ಲಿ ಅಂದು ಎಚ್.ಡಿ.ಕುಮಾರಸ್ವಾಮಿ ಸೂಕ್ತ ಪರಿಹಾರ ದೊರಕಿಸಿಕೊಟ್ಟಿದ್ದರು. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಹಾಗೂ ಸೂಕ್ತ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಇಂತಹ ಸನ್ನಿವೇಶದಲ್ಲಿ ರೈತರು ಭೂಮಿ ಕೊಡುವುದು ಒಂದು ತ್ಯಾಗ ಎಂದರೆ ತಪ್ಪಾಗಲಾರದು. ರೈತ ದೇಶದ ಅಭಿವೃದ್ಧಿಗಾಗಿ ತನ್ನ ಕರ್ಮ ಭೂಮಿ ಬಿಟ್ಟುಕೊಡುತ್ತಿದ್ದೇನೆ. ನೂರಾರು ದಿನಗಳ ಹೋರಾಟ ತಮಾಷೆಯಲ್ಲ, ಒಂದು ದಿನದ ಕೆಲಸದ ಅವ ಪ್ರತಿ ರೈತನಿಗೂ ಮುಖ್ಯ. ಭೂಮಿ ಬಿಟ್ಟುಕೊಡುವುದು ರೈತನ ಬದುಕಿಗೆ ಕೊನೆಯ ಮೊಳೆ ಹೊಡೆದಂತೆ ಎಂದರು.
ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಮಂತ್ರಿಗಳಾದ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಕ್ಕಾಗಿ ಸುಮಾರು 30 ಲಕ್ಷ ಏರಿಕೆ ಮಾಡುವ ಭರವಸೆ ಸಿಕ್ಕಿದೆ. ಭೂಮಿಯ ಬೆಲೆ ಗಗನಕ್ಕೆ ಏರಿದೆ. ರೈತ ಭೂಮಿ ಬಿಟ್ಟುಕೊಟ್ಟ ನಂತರ ಮತ್ತೆ ಜಮೀನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ ಪ್ರಸ್ತುತ ಅಂತರಾಷ್ಟ್ರೀಯ ವಿಮಾನ ನಿಮ್ದಾಣದ ಸಮೀಪ ಎಕರೆಗೆ 4ರಿಂದ 5 ಕೋಟಿ ರೂ ಇದೆ. ಈ ಹಿಂದಿನ ಬೆಲೆಯಂತೆ 2.20 ಕೋಟಿ ನಿಗದಿ ಮಾಡಬೇಕಾಗುತ್ತದೆ.ರಾಷ್ಟ್ರೀಯ ಹೆದ್ದಾರಿ ಪ್ರಾಕಾರ, ಎತ್ತಿನ ಹೊಳೆ ಯೋಜನೆಗಳಂತೆ ಸರ್ಕಾರ ನ್ಯಾಯಯುತ ಬೆಲೆ ಕೊಡಬೇಕು ಎಂದು ಒತ್ತಾಯಿಸಿದರು.
ಟಿಎಪಿಎಂಸಿಎಸ್ ನಿರ್ದೇಶಕ ಆನಂದ್ ಮಾತನಾಡಿ, ಕಳೆದ 165 ದಿನದಿಂದ ಪ್ರತಿಭಟನೆ ಮಾಡಿಕೊಂಡು ಬಂದಿದ್ದೇವೆ. ಧರಣಿಯನ್ನು ಯಶಸ್ವಿಗೊಳಿಸಲು ಒಂದು ನಾಟಕ ಕಲಿತು ಪ್ರದರ್ಶನ ಮಾಡಿದ್ದೇವೆ. 1.50 ಕೋಟಿ ರೂ ಬೆಲೆ ನಿಗದಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಜಿಲ್ಲಾಧಿಕಾರಿ ಎಂದಾಗ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಂ.ಬಿ.ಪಾಟೀಲ್ ಸೇರಿದಂತೆ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ್ದರು. ನಾಲ್ಕು ಸಭೆಗಳನ್ನು ಮಾಡಿದ್ದರು, ಈ ಮಧ್ಯೆ ಚುನಾವಣೆ ನಿಗದಿಯಾಯಿತು. ಕುಮಾರಸ್ವಾಮಿ ಅವರ ಪ್ರಯತ್ನದಿಂದ ಮೊನ್ನೆ ಸಭೆ ನಡೆಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೆಲ್ವ ಕುಮಾರ್ ಅವರು ಪ್ರತಿ ಎಕರೆಗೆ 20 ಲಕ್ಷ ಹೆಚ್ಚಿಸಿದ್ದೇವೆ ಎಂದರು. ಆದರೆ, ನಾವು ಒಪ್ಪಲಿಲ್ಲ. ಸಭೆಯಲ್ಲಿ ಮುಖಂಡರನ್ನು ದಿಕ್ಕು ತಪ್ಪಿಸುವ ಕೆಲಸವಾಯಿತು. ನಂತರ ಕುಮಾರಸ್ವಾಮಿ ಅವರು ಹದಿನೈದು ದಿನದ ಒಳಗೆ ಕೈಗಾರಿಕಾ ಸಚಿವರೊಂದಿಗೆ ಮತ್ತೊಮ್ಮೆ ಸಭೆ ಕರೆದು ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ರೈತ ಮುಖಂಡ ಸಿ.ಕೃಷ್ಣಪ್ಪ ಮಾತನಾಡಿ, 165 ದಿನಗಳು ಹೋರಾಟ ಮಾಡಿದ ಪ್ರತಿಫಲವಾಗಿ ಅಕಾರಿಗಳು ಈಗ ಪ್ರತಿ ಎಕರೆಗೆ 1.80 ಕೋಟಿ ನಿಗದಿ ಮಾಡಲು ಮುಂದಾಗಿದ್ದು, ನಾವು ನಮ್ಮ ಹೋರಾಟವನ್ನು ಮುಂದುವರೆಸಿದರೆ ಸರ್ಕಾರದ ನಿಯಮದಂತೆ 1:4 ಬೆಲೆ ಸಿಗುವ ವಿಶ್ವಾಸವಿದೆ ಎಂದರು.
ಸಭೆಯಲ್ಲಿ ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅಪ್ಪಯ್ಯಣ್ಣ, ಎ.ನರಸಿಂಹಯ್ಯ, ಮುಖಂಡರಾದ ರಾ.ಬೈರೇಗೌಡ, ಚಂದ್ರಣ್ಣ, ಅಶ್ವತ್ಥನಾರಾಯಣ, ಸೇರಿದಂತೆ ಭೂಸ್ವಾಧೀನಕ್ಕೊಳಪಡುವ ಗ್ರಾಮಗಳ ರೈತರು ಭಾಗವಹಿಸಿದ್ದರು.