ಕೋಲಾರ: ಮುಂಬರುವ ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಸ್ವಾಮಿನಾಥನ್ ಶಿಫಾರಸ್ಸಿನಂತೆ ಸಿ2 ಪ್ಲಸ್ 50 ಆಧಾರದ ಮೇಲೆ ಆದಾಯ ಖಾತ್ರಿಗೊಳಿಸಬೇಕು ಹಾಗೂ ದೇಶಾದ್ಯಂತ ಎಲ್ಲಾ ರೈತರ ಸಾಲ ಮನ್ನಾ ಮಾಡಿ ಋಣಮುಕ್ತರನ್ನಾಗಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಆಗ್ರಹಿಸಿದರು.
ತಾಲೂಕಿನ ಆರಾಭಿಕೊತ್ತನೂರು ಗ್ರಾಮದ ಶ್ರೀ ಸೋಮನಾಥೇಶ್ವರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೋದಿ ನೇತೃತ್ವದ ಕೇಂದ್ರ ಸರಕಾರವು ಎಂ.ಎಸ್.ಸ್ವಾಮಿನಾಥನ್‌ರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ, ಆದರೆ, ಅದಕ್ಕಿಂತಲೂ ಹೆಚ್ಚಾಗಿ ಕೃಷಿಗೆ ಹೂಡಿರುವ ಬಂಡವಾಳದ ಜೊತೆಗೆ ಶೇ.50 ರಷ್ಟು ಸೇರಿಸಿ ಆದಾಯ ಖಾತ್ರಿಗೊಳಿಸುವ ಶಿಫಾರಸನ್ನು ಜಾರಿಗೆ ತಂದರೆ ಅವರಿಗೆ ಮತ್ತಷ್ಟು ಗೌರವ ನೀಡಿದಂತಾಗುತ್ತದೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ 250 ಕುಟುಂಬಗಳಿಗೆ ಸೇರಿದ 17 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿರುವ ಮೋದಿ ಸಾರಥ್ಯದ ಕೇಂದ್ರ ಸರಕಾರವು ಮುಂದಿನ ಬಜೆಟ್‌ನಲ್ಲಿ ಒಮ್ಮೆಗೆ ದೇಶದ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಿ ಋಣಮುಕ್ತ ಕಾಯ್ದೆ ಜಾರಿಗೆ ತಂದು ರೈತರು ನೆಮ್ಮದಿಯಿಂದ ಕೃಷಿಯಲ್ಲಿ ತೊಡಗುವಂತೆ ಮಾಡಬೇಕೆಂದು ಒತ್ತಾಯಿಸಿದರು.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶಾದ್ಯಂತ 1.25 ಲಕ್ಷ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೃಷಿ ಆದಾಯಕ್ಕೆ ಬದಲು ಉತ್ಪಾದನಾ ವೆಚ್ಛ ದುಪ್ಪಟ್ಟಾಗಿದೆ, ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತಿಲ್ಲ, ಇಂತ ದುಸ್ಥಿತಿಯೇ ರೈತರ ಆತ್ಮಹತ್ಯೆಗೆ ಕಾರಣವಾಗಿದ್ದು, ಎಲ್ಲಾ ರೈತರನ್ನು ಋಣಮುಕ್ತರನ್ನಾಗಿಸಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬೇಕೆಂದು ಮನವಿ ಮಾಡಿದರು.
ರೈತಾಪಿ ಕೃಷಿಯನ್ನು ಕಾರ್ಪೋರೇಟ್ ಕೃಷಿಯನ್ನಾಗಿಸಲು ಕೇಂದ್ರ ಸರಕಾರ ಶ್ರಮಿಸುತ್ತಿದ್ದು, ಬದಲಾವಣೆಯ ಆಶಯದೊಂದಿಗೆ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರಕಾರ ವಾಲ್ಮೀಕಿ ನಿಗಮದ ಮತ್ತು ಮುಡಾ ಹಗರಣಗಳ ಮೂಲಕ ಸದ್ದು ಮಾಡುತ್ತಿದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು 840 ದಿನಗಳಿಂದಲೂ ಭೂಸ್ವಾನ ವಿರುದ್ಧ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರಕಾರ ಕನಿಷ್ಠ ಸ್ಪಂದಿಸುತ್ತಿಲ್ಲವೆಂದು ಟೀಕಿಸಿದರು.
ದೇಶವನ್ನು ಆಹಾರ ಸ್ವಾವಲಂಬನೆಯನ್ನಾಗಿ ಮಾಡಬೇಕಾದರೆ ದೇಶವು ರೈತಾಪಿ ಕೃಷಿಯ ಮೇಲೆ ಅವಂಬಿತವಾಗಬೇಕು, ಕೃಷಿ ರಂಗವನ್ನು ಮತ್ತು ರೈತ, ಕೃಷಿ ಕೂಲಿ ಕಾರ್ಮಿಕರ ಹಿತ ಕಾಪಾಡಲು ಕರ್ನಾಟಕ ಪ್ರಾಂತ ರೈತ ಸಂಘ ನಿರಂತರ ಹೋರಾಟ ನಡೆಸುತ್ತಿದೆ ಎಂದರು.
ಹೈಕೋರ್ಟ್ ವಕೀಲ ಎಂ.ಶಿವಪ್ರಕಾಶ್ ಮಾತನಾಡಿ, ರೈತರು ತಮ್ಮ ಬೇಡಿಕೆಗಳ ಹೋರಾಟದ ಜೊತೆಗೆ ಕೃಷಿ ಉತ್ಪನ್ನಗಳ ಸಾಗಿಸುವ ಯಾವುದೇ ವಾಹನಕ್ಕೆ ಟೋಲ್‌ನಲ್ಲಿ ವಿನಾಯ್ತಿ ನೀಡುವಂತೆ ಹಾಗೂ ನಾಯಿ ಕೊಡೆಗಳಂತೆ ಪ್ರತಿ ಗ್ರಾಮದಲ್ಲಿಯೂ ಆರಂಭವಾಗುತ್ತಿರುವ ಮದ್ಯದಂಗಡಿಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಬೇಕು, ಇದಕ್ಕಾಗಿ ಯಾವುದೇ ಕಾನೂನು ಹೋರಾಟಕ್ಕೆ ತಮ್ಮ ಬೆಂಬಲ ಇರುತ್ತದೆ ಎಂದರು.
ಹಿರಿಯ ಪತ್ರಕರ್ತ ಕೆ.ಎಸ್.ಗಣೇಶ್ ಮಾತನಾಡಿ, ಬಹುರಾಷ್ಟ್ರೀಯ ಕಂಪನಿಗಳು ಆರೋಗ್ಯ ಮತ್ತು ಕೃಷಿ ಕ್ಷೇತ್ರವನ್ನು ತಮ್ಮ ಪ್ರಯೋಗಶಾಲೆಯನ್ನಾಗಿಸಿ ರೈತರು ಮತ್ತು ಜನರ ಹಿತ ಬಲಿಕೊಡುತ್ತಿದೆ, ಹೋರಾಟಗಳು ಕ್ಷೀಣಿಸುತ್ತಿರುವ ಈ ಹೊತ್ತಿನಲ್ಲಿಯೂ ದೆಹಲಿ ರೈತರ ಹೋರಾಟ ದೇಶದಲ್ಲಿ ಹೋರಾಟಗಳು ಸತ್ತಿಲ್ಲ ಎಂಬ ಸಂದೇಶ ರವಾನಿಸಿದೆ, ಕೃಷಿ ಕ್ಷೇತ್ರ ಉಳಿವಿಗಾಗಿ ದೊಡ್ಡ ಮಟ್ಟದ ಸಂಘಟಿತ ಹೋರಾಟ ಅಗತ್ಯ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ್‌ಬಾಬು, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ರವಿಕುಮಾರ್ ಮತ್ತು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಬೈರೇಗೌಡ ತಮ್ಮ ಇಲಾಖೆಗಳ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಕೆಪಿಆರ್ ಎಸ್ ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್‌ವಹಿಸಿದ್ದರು. ಪ್ರಾಸ್ತಾವಿಕವಾಗಿ ಕೆಪಿಆರ್ ಎಸ್ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್‌ಕುಮಾರ್ ಮಾತನಾಡಿದರು.
ವೇದಿಕೆಯಲ್ಲಿ ಕೆಪಿ ಆರ್ ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ರಾಜ್ಯ ಸಮಿತಿ ಸದಸ್ಯೆ ಗಂಗಮ್ಮ, ತಾಲೂಕು ಪ್ರಧಾನ ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ತಾಲೂಕು ಅಧ್ಯಕ್ಷ ಆಲಹಳ್ಳಿ ವೆಂಕಟೇಶಪ್ಪ, ಎನ್.ಎನ್ ಶ್ರೀರಾಮ್, ಇತರರು ಹಾಜರಿದ್ದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕೆಪಿಆರ್‌ಎಸ್ ಸದಸ್ಯರು ಅಧ್ಯಯನ ಶಿಬಿರದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ್ದರು.