ರೈತರು ವ್ಯವಸಾಯ ಮಾಡುವ ಜಾಗದಲ್ಲಿ ವಸತಿ ಯೋಜನೆ ರೂಪಿಸಲು ನಿರ್ಧಾರ- ರೈತ ಲಕ್ಷ್ಮೀಗೌಡ ಆರೋಪ

ಸ್ಥಳೀಯ ಅಧಿಕಾರಿಗಳು ಬೇಕಂತಲೇ ನಮ್ಮನ್ನು ಒಕ್ಕಲೆಬ್ಬಿಸುವ ಸಲುವಾಗಿ ವಸತಿ ಯೋಜನೆಯನ್ನು ರೂಪಿಸಿದ್ದು, ಕೂಡಲೇ ಯೋಜನೆ ರದ್ದುಗೊಳಿಸಿ ಸದರಿ ಜಾಗದಲ್ಲಿ ರೈತರು ವ್ಯವಸಾಯ ಮಾಡಲು ಅನುವು ಮಾಡಿಕೊಡಬೇಕೆಂದು ಕೂಗೋನಹಳ್ಳಿ ಗ್ರಾಮದ ರೈತ ಲಕ್ಷ್ಮೀಗೌಡ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಗೋನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ. 67ರ ಗೋಮಾಳ ಜಮೀನಿನಲ್ಲಿ ನಾವುಗಳು ಸುಮಾರು 25 ವರ್ಷಗಳಿಂದ ರಾಗಿ, ಜೋಳ, ಅವರೆ, ಇತ್ಯಾದಿ ಬೆಳೆಗಳನ್ನು ಬೆಳೆದುಕೊಂಡು ಬರುತ್ತಿದ್ದು, ಫಾರಂ-57ರ ಅಡಿಯಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿಯನ್ನು ಸಹ ಸಲ್ಲಿಸಿರುತ್ತೇವೆ. ಗ್ರಾಮ ಲೆಕ್ಕಾಧಿಕಾರಿಗಳು, ರೆವಿನ್ಯೂ ಇನ್ಸ್‌ಪೆಕ್ಟರ್ ಜಮೀನು ಸರ್ವೆ ಮಾಡಲು ಅನುಮತಿ ಪತ್ರವನ್ನು ನೀಡಿರುತ್ತಾರೆ. ಆದರೆ, ನಮಗೆ ಗೊತ್ತಿಲ್ಲದೆ ನಮ್ಮ ಜಮೀನನ್ನು ರಾಜೀವ್ ಗಾಂದಿ ವಸತಿ ಯೋಜನೆಗೆ ಪಹಣಿ ಮಾಡಲಾಗಿದೆ. ಆದರೆ, ಈ ಜಮೀನಿನಲ್ಲಿ ಬೃಹತ್ ವಿದ್ಯುತ್ ತಂತಿಗಳು ಹಾಗೂ ಕಂಬ ಇರುವ ಕಾರಣ ಸದರಿ ಸ್ಥಳವು ಯಾವುದೇ ವಸತಿ ಯೋಜನೆಗೆ ಲಾಯಕ್ಕಾದ ಜಮೀನು ಅಲ್ಲ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ತಿಳಿಸಿದೆ ಎಂದರು.

ವಸತಿ ಯೋಜನೆಗೆ ಸೂಕ್ತವಲ್ಲದ ಜಮೀನಿನಲ್ಲಿ ನಾವು ವ್ಯವಸಾಯ ಮಾಡುತ್ತಿದ್ದು, ಜಮೀನಿನಲ್ಲಿ ಬೃಹತ್ ವಿದ್ಯುತ್ ಲೈನ್ ಗಳು ಹಾಗೂ ಕಂಬವಿರುವುದರಿಂದ ಸದರಿ ಜಾಗವು ವಸತಿ ಯೋಜನೆಗೆ ಸೂಕ್ತವಾಗಿರುವುದಿಲ್ಲ, ವಿದ್ಯುತ್ ನಿಯಮ 2010ರ ಅನುಬಂದದ ಪ್ರಕಾರ ಪ್ರಸ್ತುತ ಓವರ್ ಹೆಡ್ ವಿದ್ಯುತ್ ತಂತಿಗಳ ಕೆಳಗೆ ಯಾವುದೇ ಕಟ್ಟಡ ಲೇಔಟ್, ಶಾಲೆಗಳು ದೇವಸ್ಥಾನಗಳು, ವಾಸಕ್ಕೆ ಸುರಕ್ಷಿತವಾದ ಸ್ಥಳಗಳಾಗಿರುವುದಿಲ್ಲ. ವ್ಯವಸಾಯವನ್ನು ಬಿಟ್ಟು ಯಾವುದೇ ರೀತಿಯ ಲೇಔಟ್ ವಸತಿ ಯೋಜನೆಗೆ ರೂಪಿಸಿದರೆ ಅದು ಕಾನೂನು ಬಾಹಿರವಾಗಿರುತ್ತದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ತಿಳಿಸಿದೆ, ನಾವು ವ್ಯವಸಾಯ ಮಾಡುತ್ತಿರುವ ಜಮೀನಿನಲ್ಲಿ ಯಾವುದೇ ರೀತಿಯ ಕಟ್ಟಡ ಲೇಔಟ್ ಮಾಡಲು ವಿದ್ಯುತ್ ಬೃಹತ್ ಲೈನ್‌ಗಳು ಮತ್ತು ಕಂಬವಿರುವುದರಿಂದ ವಸತಿ ಯೋಜನೆಗೆ ರೂಪಿಸಿರುವ ಯೋಜನೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ನಾವು ಸ್ವಾಧೀನದಲ್ಲಿರುವ ಜಮೀನಿನ ಮೇಲೆ ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ ಈ ಪ್ರಕರಣ ಬಾಕಿ ಇದ್ದರೂ ಸಹ ಸಾರ್ವಜನಿಕರಿಗೆ ನಿವೇಶನ ಹಂಚಲು ಸ್ಥಳೀಯ ಅಧಿಕಾರಿಗಳು ಹೊರಟಿದ್ದಾರೆ,ಸದರಿ ಜಮೀನಿನಲ್ಲಿ ನಾವು ವ್ಯವಸಾಯ ಮಾಡುತ್ತಿರುವುದನ್ನು ವಕ್ಕಲೆಬ್ಬಿಸದೆ ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ಯಾವುದೇ ನಿವೇಶನಗಳ ಹಂಚಿಕೆ ಚಟುವಟಿಕೆ ನಡೆಸದಂತೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *