ರೈತರು ಮತ್ತು ಕಾರ್ಮಿಕರು ದೇಶವನ್ನು ನಿರ್ಮಿಸುತ್ತಾರೆ. ದೇಶದಲ್ಲಿ ಉತ್ಪಾದನೆ ಮಾಡುತ್ತಾರೆ, ಸಂಪತ್ತು ಸೃಷ್ಟಿಸುತ್ತಾರೆ. ಬೆವರಿನ ಸಂಸ್ಕೃತಿಯ ಶ್ರಮಿಕರು ದೇಶದ ಸಂಪತ್ತನ್ನು ಸೃಷ್ಟಿಸುತ್ತಾರೆ. ಬಡವರ ಶ್ರಮದಿಂದ ಸೃಷ್ಟಿಯಾಗಿರುವ ದೇಶದ ಸಂಪತ್ತಿನಲ್ಲಿ ಶೇ.90 ರಷ್ಟು ಕೇವಲ 10 ಜನರ ಕೈಯಲ್ಲಿದೆ. ಇದು ತಪ್ಪು. ಶ್ರಮಿಕರ ದುಡಿಮೆಯ ಸಂಪತ್ತು ಎಲ್ಲರಲ್ಲೂ ಸಮಾನವಾಗಿ ಹಂಚಿಕೆಯಾಗಬೇಕು ಎನ್ನುವ ದೃಷ್ಟಿಯಿಂದ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಜಿಲ್ಲೆಯ 525 ವಿಶೇಷ ಚೇತನ ಮಕ್ಕಳಿಗೆ ತ್ರಿಚಕ್ರ ವಾಹನ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿ, ಗಿಗ್ ಕಾರ್ಮಿಕರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ಒಂದು ಕೋಟಿ ಮೂವತ್ತು ಲಕ್ಷ ಕುಟುಂಬಗಳಿಗೆ ಪ್ರತೀ ವರ್ಷ 50 ರಿಂದ 60 ಸಾವಿರ ರೂಪಾಯಿ ನೇರವಾಗಿ ತಲುಪುವ ವ್ಯವಸ್ಥೆಯನ್ನು ನಮ್ಮ ಸರ್ಕಾರ ಮಾಡಿದೆ. ಇದರಿಂದ ನಾಡಿನ 4 ಕೋಟಿ ರೈತರು, ಕಾರ್ಮಿಕರು, ಬಡವರಿಗೆ ಅನುಕೂಲ ಆಗುತ್ತಿದೆ ಎಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರದ್ದು ಕಷ್ಟಕ್ಕೆ, ಬಡತನಕ್ಕೆ ಮಿಡಿಯುವ ಹೃದಯ. ಈ ಕಾರಣಕ್ಕೇ ಇವರಿಗೆ ಕಾರ್ಮಿಕ ಇಲಾಖೆ ಸಚಿವರನ್ನಾಗಿ ಮಾಡಿದ್ದೇನೆ. ಸಂತೋಷ್ ಲಾಡ್ ಅವರ ಕಾಳಜಿಯಿಂದ CSR ನಿಧಿ ಮತ್ತು ಕಾರ್ಮಿಕ ಇಲಾಖೆ ಮೂಲಕ 525 ವಿಶೇಷ ಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದ್ದಾರೆ. ಇದು ನನಗೆ ಬಹಳ ಸಂತೋಷ ತಂದಿದೆ ಎಂದು ಹೇಳಿದರು.
ಬಸವಾದಿ ಶರಣರು ಕಾಯಕ, ದಾಸೋಹ ಎಂದು ಕರೆದದ್ದು ಇದನ್ನೇ. ಉತ್ಪಾದನೆಯ ಸಮಾನ ಹಂಚಿಕೆಯೇ ಕಾಯಕ ಮತ್ತು ದಾಸೋಹ. ಇದರಿಂದ ಆರ್ಥಿಕ, ಸಾಮಾಜಿಕ ಅಸಮಾನತೆ ಅಳಿಸಬಹುದು. ಅಂಬೇಡ್ಕರ್ ಅವರೂ ಆರ್ಥಿಕ, ಸಾಮಾಜಿಕ ಅಸಮಾನತೆ ತೊಡೆಯಲು ಹೋರಾಡಿದ್ದರು. ಅಸಮಾನತೆಗೆ ಸಿಲುಕಿದವರು ಪ್ರಜಾಪ್ರಭುತ್ವದ ಸೌಧವನ್ನು ನಾಶಮಾಡಬಹುದು ಎನ್ನುವ ಎಚ್ಚರಿಕೆಯನ್ನು ಅಂಬೇಡ್ಕರ್ ನೀಡಿದ್ದರು ಎಂದರು.
ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು, ಶ್ರಮಿಕರಿಗೆ ಅನುಕೂಲ ಕಲ್ಪಿಸಬೇಕು ಎನ್ನುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ ಎಂದು ತಿಳಿಸಿದರು.