Categories: ಮಂಡ್ಯ

ರೈತರಿಗೆ ನೋವಾಗುವ ಯಾವುದೇ ತೀರ್ಮಾನ ಇಲ್ಲ; ಕಾವೇರಿ ಬಿಕ್ಕಟ್ಟಿಗೆ ಮೇಕೆದಾಟು ಒಂದೇ ಶಾಶ್ವತ ಪರಿಹಾರ- ಸಚಿವ ಚಲುವರಾಯಸ್ವಾಮಿ

ರೈತರಿಗೆ ನೋವಾಗುವ ಯಾವುದೇ ತೀರ್ಮಾನಗಳನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ. ರೈತರ ಸಹಕಾರವಿದ್ದರೆ, ಅವರಿಗೆ ಅಗತ್ಯವಿರುವ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ ಎಂದು ಜಿಲ್ಲಾ ಉಸ್ತುವಾರೂ ಆದ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ರೈತರ ಕುಂದುಕೊರತೆ, ಬರ ಪರಿಸ್ಥಿತಿ ಹಾಗೂ 6ನೇ ಹಂತದ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ರೈತ ಮುಖಂಡರ ಸಭೆಯಲ್ಲಿ ಸಚಿವರು ಮಾತನಾಡಿದರು.

6ನೇ ಹಂತದ ಕುಡಿಯುವ ನೀರಿನ ಯೋಜನೆ ಕುರಿತು ಮಾತನಾಡಿದ ಸಚಿವರು, “ಮೇಕೆದಾಟು ಯೋಜನೆಯೊಂದೇ ಕಾವೇರಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ. 6ನೇ ಹಂತದ ಯೋಜನೆಯನ್ನು ಕೇವಲ ಕುಡಿಯುವ ನೀರು ಪೂರೈಸುವುದಕ್ಕಾಗಿ ರೂಪಿಸಲಾಗಿದೆ. ಈ ಸಂಬಂಧ ಅಗತ್ಯವಿದ್ದರೆ ನೀರಾವರಿ ತಜ್ಞರೊಂದಿಗೆ ಚರ್ಚಿಸಿ ರಾಜಧಾನಿಯಲ್ಲಿ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಮಂಡ್ಯದ ರೈತರೂ ಭಾಗವಹಿಸಿ ಸಲಹೆಗಳನ್ನು ನೀಡಬಹುದು” ಎಂದರು.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ಬಗ್ಗೆ ಪ್ರತಿಕ್ರಿಯಿಸಿ, “ಈ ಹಿಂದೆ ತಮಿಳುನಾಡಿಗೆ ಹರಿಸಲಾಗಿದ್ದ ನೀರಿಗಿಂತ ಈ ಬಾರಿ ಅತ್ಯಂತ ಕಡಿಮೆ ನೀರು ಹರಿಸಲಾಗಿದೆ. ರಾಜ್ಯದ ಬರ ಹಾಗೂ ನಮ್ಮ ಜಲಾಶಯಗಳ ನೀರಿನ ವಾಸ್ತವ ಸ್ಥಿತಿಗತಿಯ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮೇಕೆದಾಟು ಯೋಜನೆಗೆ ಪರ್ಯಾಯವಾಗಿ 13 ಜಿಲ್ಲೆಗಳಲ್ಲಿ ಭೂಮಿ ನೀಡಬೇಕಿದೆ. ಮಾರ್ಚ್‌ ಒಳಗೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಬೇಕೆಂಬ ದೃಢ ಸಂಕಲ್ಪ ನಮ್ಮದು. ಆದರೆ, ಮೇಕೆದಾಟು ಯೋಜನೆಗೆ ಪರ್ಯಾಯ ಭೂಮಿ ನೀಡಲು ಜಿಲ್ಲೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ರೈತರೇ ಸೂಕ್ತ ಉತ್ತರ ನೀಡಬೇಕು. ತಾಂತ್ರಿಕ ಹಾಗೂ ಕಾನೂನಾತ್ಮಕವಾಗಿ ಮೇಕೆದಾಟು ಯೋಜನೆಗೆ ಎಲ್ಲ ರೀತಿಯ ಸಿದ್ದತೆ ನಡೆಸಲಾಗಿದೆ. ನಮ್ಮ ಅವಧಿಯಲ್ಲಿಯೇ ಈ ಯೋಜನೆ ಜಾರಿಗೊಳಿಸಿಯೇ ತೀರುತ್ತೇವೆ. ಈಗಾಗಲೇ ಕೇಂದ್ರ ಜಲಶಕ್ತಿ ಆಯೋಗಕ್ಕೆ ಮನವಿ ಸಲ್ಲಿಸಲಾಗಿದ್ದು, ದೆಹಲಿಯಲ್ಲಿ ನಮ್ಮ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆ. ಮೇಕೆದಾಟು ಯೋಜನೆ ಕಾರ್ಯಗತಗೊಂಡರೆ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಅಲ್ಲಿಯವರೆಗೂ ರೈತರು ಸಮಾಧಾನದಿಂದ ವರ್ತಿಸಬೇಕು” ಎಂದು ಮನವಿ ಮಾಡಿದರು.

ನೂಗು ಜಲಾಶಯದ ಬಳಿ ಹಾಗೂ ತಣ್ಣೂರು ಕೆರೆಯಲ್ಲಿ ರಿಸರ್ವಾಯರ್ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಇದರಿಂದ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮನ್‌ಮುಲ್ ಹಗರಣದ ಬಗ್ಗೆ ಮಾತನಾಡಿದ ಸಚಿವರು, “ಹಗರಣ ಬೆಳಕಿಗೆ ಬಂದ 24 ಗಂಟೆಯೊಳಗೆ ಕಾನೂನು ಕ್ರಮ ಜರುಗಿಸುವಂತೆ ನಾನೇ ಸೂಚನೆ ನೀಡಿದ್ದೆ. ನನಗೆ ಜಿಲ್ಲೆಯ ಪೊಲೀಸರ ಮೇಲೆ ಪೂರ್ಣ ವಿಶ್ವಾಸವಿದೆ. ಅವರೇ ಇಡೀ ಪ್ರಕರಣದ ತನಿಖೆ ನಡೆಸಲಿದ್ದಾರೆ. ಅಗತ್ಯಬಿದ್ದರೆ ಉನ್ನತ ಮಟ್ಟದ ತನಿಖೆಗೂ ವಹಿಸಲಾಗುವುದು. ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ಯಾರ ಪರವಾಗಿಯೂ ನಿಂತಿಲ್ಲ. ಮನ್‌ಮುಲ್ ಹಗರಣದಲ್ಲಿ ಆರೋಪಿಯಾಗಿರುವವರು ನನ್ನ ಆಪ್ತರು ಎಂದು ಕೆಲವರು ಹೇಳುತ್ತಿದ್ದಾರೆ. ಅವರು ನಮ್ಮ ಮನೆಯವರೇ ಆಗಿದ್ದರು ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಿದ್ದು, ಯಾರಿಗೂ ಕೃಪಾಶೀರ್ವಾದ ಇಲ್ಲ. ಆರೋಪಿಗಳಿಗೆ ಶಿಕ್ಷೆಯಾಗಬೇಕಷ್ಟೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅಗತ್ಯ ಬಿದ್ದರೆ ಇಡೀ ಆಡಳಿತ ಮಂಡಳಿಯನ್ನೇ ಸೂಪರ್‌ಸೀಡ್ ಮಾಡಲಾಗುವುದು” ಎಂದರು.

ಹಾಲಿನ ದರ ಹೆಚ್ಚಳದ ಕುರಿತು ಪ್ರಸ್ತಾಪಿಸಿ, “ಕೆಲವು ಜಿಲ್ಲೆಗಳಲ್ಲಿ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಆಯೋಗ ಅನುಮೋದನೆ ನೀಡಿದರೆ ಕೂಡಲೇ ದರ ಹೆಚ್ಚಿಸಲಾಗುವುದು, ಇಲ್ಲವಾದರೆ ಚುನಾವಣೆ ಮುಗಿದ ಬಳಿಕ ಏರಿಕೆ ಮಾಡಲಾಗುವುದು. ಸರ್ಕಾರ ಸದಾ ರೈತರ ಪರವಾಗಿ ನಿಲ್ಲಲಿದೆ” ಎಂದು ಅಭಯ ನೀಡಿದರು.

ಬರ ಪರಿಹಾರ ಹೆಚ್ಚಿಸಬೇಕೆಂಬ ರೈತರ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, “ಸೆಪ್ಟೆಂಬರ್ ಅಂತ್ಯದವರೆಗೂ ಕೇಂದ್ರ ಸರ್ಕಾರ ಬರಗಾಲ ಘೋಷಿಸುವುದಿಲ್ಲ. ಪ್ರಸ್ತುತ ಕೇಂದ್ರ ಅಧ್ಯಯನ ತಂಡ ಪರಿಶೀಲನೆ ನಡೆಸುತ್ತಿದೆ. ಈಗ ರಾಜ್ಯ ಸರ್ಕಾರ ಘೋಷಿಸಿರುವ ಪ್ರತಿ ಎಕರೆಗೆ 2,500 ರೂ., ಕೇವಲ ತಾತ್ಕಾಲಿಕ ಪರಿಹಾರವಷ್ಟೇ. ಇನ್ನೆರಡು ದಿನಗಳಲ್ಲಿ ಈ ಮೊತ್ತ ರೈತರ ಖಾತೆಗೆ ಜಮೆಯಾಗಲಿದೆ. ಹಿಂದಿನ ಬರಗಾಲದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಕೇವಲ 6,000 ಕೋಟಿ ಪರಿಹಾರ ನೀಡಿತ್ತು. ಆದರೆ ಇತರ ರಾಜ್ಯಗಳಿಗೆ 36,000 ಕೋಟಿವರೆಗೂ ನೀಡಿತ್ತು. ಕೇಂದ್ರ ಸರ್ಕಾರ ಯಾವುದೇ ನೆರವು ನೀಡದಿದ್ದರೂ, ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದೆ” ಎಂದು ವಿವರಿಸಿದರು.

ಕ್ಯಾನ್ಸರ್ ಆಸ್ಪತ್ರೆ ಆರಂಭಕ್ಕೆ ಮೂರು ವರ್ಷ ವಿಳಂಬವಾಗಿದೆ ಎಂಬ ರೈತರ ಅಸಮಾಧಾನಕ್ಕೆ ಉತ್ತರಿಸಿ, “ಮುಂದಿನ ವಾರದೊಳಗೆ ಕ್ಯಾನ್ಸರ್ ಆಸ್ಪತ್ರೆಗೆ ಕಾಯಕಲ್ಪ ನೀಡಲಾಗುವುದು. ಜೊತೆಗೆ ವೈದ್ಯಕೀಯ ಕಾಲೇಜಿಗೆ ಸೇರಿದ ಜಾಗದ ಒತ್ತುವರಿ ತೆರವುಗೊಳಿಸಲು ಪ್ರತ್ಯೇಕ ಸಮಿತಿ ರಚಿಸಲಾಗಿದೆ” ಎಂದರು.

“ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಈ ಹಿಂದೆ ಬಿಜೆಪಿ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚಿಸಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ಖಾಸಗೀಕರಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತು. ರೈತರಿಗೆ 14 ದಿನಗಳ ಕಬ್ಬಿನ ಬಾಕಿ ಹಣ ಪಾವತಿಸಬೇಕಿದೆ. ಖಾಸಗಿ ಕಂಪನಿಗಳು ಸೇರಿದಂತೆ ರಾಜ್ಯದ 81 ಸಕ್ಕರೆ ಕಾರ್ಖಾನೆಗಳ ಬಾಕಿ ಹಣವನ್ನು ಅಕ್ಟೋಬರ್ 15ರೊಳಗೆ ಬಿಡುಗಡೆ ಮಾಡಲಾಗುವುದು. ಕಾರ್ಖಾನೆಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಂದಿನ ವಾರ ಪ್ರತ್ಯೇಕ ಸಭೆ ಕರೆಯಲಾಗುವುದು. ಮುಂದಿನ ಒಂದು ವರ್ಷದೊಳಗೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದೇ ನನ್ನ ಗುರಿ” ಎಂದರು.

ಬರಗಾಲದ ಹಿನ್ನಲೆಯಲ್ಲಿ ಕಾವೇರಿ ಆರತಿ ಸ್ಥಗಿತಗೊಳಿಸಬೇಕೆಂಬ ಬೇಡಿಕೆಗೆ ಸ್ಪಷ್ಟನೆ ನೀಡಿದ ಸಚಿವರು, “ಕಾವೇರಿ ಒಡಲಿನಲ್ಲಿ ಸರಳವಾಗಿ ಪೂಜೆ ಸಲ್ಲಿಸಿ ಆರತಿ ಬೆಳಗುವ ಕೆಲಸವನ್ನಷ್ಟೇ ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ಹಿಂದೆ ಕೃಷಿ ಸಚಿವನಾಗಿದ್ದಾಗ ಮಂಡ್ಯಕ್ಕೆ ಮಂಜೂರು ಮಾಡಿದ್ದ ಕೃಷಿ ವಿಶ್ವವಿದ್ಯಾಲಯದಲ್ಲಿ, ಪಶುಸಂಗೋಪನೆ ಹಾಗೂ ತೋಟಗಾರಿಕೆ ವಿಭಾಗಗಳನ್ನು ಸೇರ್ಪಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ನಮ್ಮದೇ ಜಿಲ್ಲೆಯವರಾದ ಹಾಲಿ ಕೃಷಿ ಸಚಿವರೊಂದಿಗೂ ಚರ್ಚಿಸಿದ್ದು, ಶೀಘ್ರದಲ್ಲೇ ಸರ್ಕಾರದ ಮುಂದೆ ಪ್ರಸ್ತಾವನೆ ಇಡಲಾಗುವುದು” ಎಂದರು.

*ರೈತರ ಸಮಸ್ಯೆಗಳಿಗೆ ಸ್ಪಂದಿಸಿದ ಸಚಿವರು*
ಸತತ ಎರಡು ಗಂಟೆಗಳ ಕಾಲ ರೈತರ ಮನವಿಗಳನ್ನು ಆಲಿಸಿದ ಸಚಿವರು, ಎಲ್ಲ ಬೇಡಿಕೆಗಳಿಗೂ ಸಮಾಧಾನದಿಂದ ಉತ್ತರಿಸಿದರು. ಈ ವೇಳೆ ಭಾವುಕರಾಗಿ ಮಾತನಾಡಿದ ಅವರು, “ನಾನು ಸಚಿವನಾಗುವ ಮುನ್ನವೇ ರೈತರ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದೆ. ನಾನೂ ಕಾವೇರಿ ಅಚ್ಚುಕಟ್ಟು ಪ್ರದೇಶದವನೇ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ನೆರೆಯ ಜಿಲ್ಲೆಯವರೇ ಆಗಿದ್ದಾರೆ. ಸರ್ಕಾರ ನಮಗೆ ಅಧಿಕಾರ ನೀಡಲಿ ಬಿಡಲಿ, ನಾನು ಈ ಮಣ್ಣಿನ ಮಗ ಎಂಬುದನ್ನು ಎಂದಿಗೂ ಮರೆಯುವುದಿಲ್ಲ. ರೈತರ ನೋವು-ನಲಿವುಗಳ ಸ್ಪಷ್ಟ ಅರಿವು ನನಗಿದೆ. ಸಾರ್ವಜನಿಕರೂ ಸರ್ಕಾರದ ಆಡಳಿತದಲ್ಲಿ ಭಾಗಿಗಳಾಗಬೇಕು. ಎಲ್ಲಿ ತಪ್ಪಾದರೂ ನೇರವಾಗಿ ಪ್ರಶ್ನಿಸಬೇಕು. ನಿಮ್ಮ ಮಾರ್ಗದರ್ಶನದಲ್ಲೇ ಆಡಳಿತ ನಡೆಸುತ್ತೇವೆ. ಯಾರ ಮೇಲೂ ಆರೋಪ ಮಾಡದೆ, ಪ್ರಾಮಾಣಿಕವಾಗಿ ಜನಹಿತಕ್ಕಾಗಿ ದುಡಿಯುತ್ತೇನೆ” ಎಂದರು.

ಇದೇ ವೇಳೆ ರೈತ ಸಂಘಟನೆಗಳು ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದವು.

*ಸಭೆಯಲ್ಲಿ ಚರ್ಚೆಯಾದ ಇತರೆ ಪ್ರಮುಖ ಅಂಶಗಳು*
ಮೇಕೆದಾಟು ಯೋಜನೆಯನ್ನು ಆದಷ್ಟು ಶೀಘ್ರ ಅನುಷ್ಠಾನಗೊಳಿಸುವುದು.
ಬರಪೀಡಿತ ಜಿಲ್ಲೆಯ ರೈತರಿಗೆ ಪ್ರತಿ ಎಕರೆಗೆ 30,000 ರೂ.,ಪರಿಹಾರ ಒದಗಿಸುವುದು.
ವೃದ್ಧಾಪ್ಯ ವೇತನವನ್ನು 3,000 ರೂಗಳಿಗೆ ಹೆಚ್ಚಿಸುವುದು.
ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು.
ಬ್ಲಫ್‌ನಲ್ಲಿ ನೀರನ್ನು ಶುದ್ಧೀಕರಿಸಿ ಹರಿಸುವುದು ಹಾಗೂ ಕೆರೆಗಳ ಒತ್ತುವರಿ ತೆರವುಗೊಳಿಸುವುದು.
ಜಿಲ್ಲೆಯ ಈ ಎಲ್ಲಾ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಶೀಘ್ರದಲ್ಲೇ ರಾಜ್ಯಮಟ್ಟದ ಸಭೆ ಕರೆಯಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದವರು ಒತ್ತಾಯಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಎಚ್.ಡಿ. ಮಂಜು, ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಪಂ ಸಿಇಒ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶೋಭಾರಾಣಿ ಸೇರಿದಂತೆ ಹಲವು ರೈತ ಮುಖಂಡರು, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ramesh Babu

Journalist

Recent Posts

ಒಂದೇ ದಿನ ಪ್ರತ್ಯೇಕ ಘಟನೆ: ಮೂವರು ಬಜರಂಗದಳ ಕಾರ್ಯಕರ್ತರು ಸಾವು

ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…

3 hours ago

ಒಂದೇ ದಿನ ಪ್ರತ್ಯೇಕ ಘಟನೆ: ಮೂವರು ಬಜರಂಗದಳ ಕಾರ್ಯಕರ್ತರು ಸಾವು

ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…

3 hours ago

ಎಸ್ ಐ ಆರ್…..

ನಾವು ಅಕ್ರಮ ವಲಸಿಗರಲ್ಲ, ವಂಚಕರಲ್ಲ, ಈ ಮಣ್ಣಿನ ಮೂಲ ನಿವಾಸಿಗಳು. ದಯವಿಟ್ಟು ನಮ್ಮ ಅಸ್ತಿತ್ವವನ್ನು, ಸ್ವಾಭಿಮಾನವನ್ನು ಪ್ರಶ್ನಿಸಬೇಡಿ. ನಾವು ಭಾರತೀಯರು......…

10 hours ago

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

21 hours ago

ಪೊಲೀಸರೆಂದು ನಂಬಿಸಿ ವೃದ್ಧ ದಂಪತಿಗೆ ಚಿನ್ನಾಭರಣ ವಂಚನೆ: ಇಬ್ಬರು ಆರೋಪಿಗಳು ವಶಕ್ಕೆ: ದೂರುದಾರರಿಗೆ ಚಿನ್ನಾಭರಣ ಹಸ್ತಾಂತರ

ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…

1 day ago

ಮಳೆ ಕೊರತೆ; ಮತ್ಸ್ಯ ಕೃಷಿಗೂ ಹೊಡೆತ!

ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…

1 day ago