ರೈತನಿಗೆ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಮೋಸ: ಎಟಿಎಂ ಕಾರ್ಡ್ ಬದಲಿಸಿ ದೋಖಾ: ರೈತನ ಎಟಿಎಂ ಕಾರ್ಡ್ ಬಳಸಿ ಚಿನ್ನ ಖರೀದಿ ಮಾಡಿದ್ದ ಭೂಪ

ಕೆಲವರಿಗೆ ಇನ್ನೂ ಎಟಿಎಂಗಳಲ್ಲಿ ಎಟಿಎಂ ಬಳಸಿ ಹಣ ಡ್ರಾ ಮಾಡಲು ಬರುವುದಿಲ್ಲ. ಎಟಿಎಂನಲ್ಲಿ ಹಣ ಪಡೆಯಲು ಬೇರೊಬ್ಬರ ಸಹಾಯ ಪಡೆಯಲು ಹೋದಾಗ ದೊಡ್ಡ‌ ದೋಖಾ ನಡೆದು ಹೋಗಿರುತ್ತದೆ.

ಎಟಿಎಂನಲ್ಲಿ ಹಣ‌ ಪಡೆಯಲು ಬಾರದೇ ಪರದಾಡುವವರನ್ನ ಟಾರ್ಗೆಟ್ ಮಾಡಿಕೊಂಡು ಎಟಿಎಂ ಕಾರ್ಡಗಳನ್ನೇ ಬದಲಿಸಿ ಸಾವಿರಾರು ರೂಪಾಯಿ ಹಣ ಎಗರಿಸುಲು ಖದೀಮರು ಕಾದುಕುಳಿತಿರುತ್ತಾರೆ.

ಇಂತಹದ್ದೇ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ. ಖದೀಮರ ಮಾಯಾಜಾಲಕ್ಕೆ ಸಿಲುಕಿ ಎಟಿಎಂ ಜೊತೆಗೆ ಹಣ ಕಳೆದುಕೊಂಡಿದ್ದಾನೆ.

ಎಟಿಎಂ ಬಳಿ ಹಣ ಡ್ರಾ ಮಾಡಲು ಬಾರದವರು ಯಾರಾದರು ಬರುತ್ತಾರ ಅಂತ ಖದೀಮನೊಬ್ಬ ನೋಡುತ್ತಾ ಕಾದು ಕುಳಿತಿದ್ದ. ಇದೇ ವೇಳೆ ರಾಜಣ್ಣ ಅನ್ನೂ ರೇಷ್ಮೆ ಬೆಳೆಯುವ ಈ ರೈತ ಗೂಡು ಮಾರಿದ ಹಣ ಡ್ರಾ ಮಾಡೋಕ್ಕೆ ಅಂತ ಎಟಿಎಂಗೆ ಬಂದು ಹಣ ಡ್ರಾ ಮಾಡಲಾಗದೆ ಪರದಾಡಿದ್ದಾನೆ. ಹೀಗಾಗಿ ರಾಜಣ್ಣನ ಸಹಾಯಕ್ಕೆ ಬರುವಂತೆ ಬಂದ ಭೂಪ ಮೊದಲಿಗೆ ರೈತನಿಗೆ ಹಣ ಡ್ರಾ ಮಾಡಿಕೊಟ್ಟಿದ್ದು ನಂತರ ರೈತನ ಕಾರ್ಡ್ ಪಡೆದು ಬೇರೋಂದು ಕಾರ್ಡ್ ನೀಡಿ ಎಸ್ಕೇಪ್ ಆಗಿದ್ದಾನೆ. ಜೊತೆಗೆ ವಿಜಯಪುರ ಪಟ್ಟಣದ ಚಿನ್ನದಂಗಡಿ ಒಂದಕ್ಕೆ ಹೋಗಿದ್ದ ಭೂಪ ಅಲ್ಲಿ ಇದೇ ರೈತನ ಕಾರ್ಡ್ ಬಳಸಿ ಚಿನ್ನದ ಉಂಗುರ ಖರೀದಿಸಿ ಎಸ್ಕೇಪ್ ಆಗಿದ್ದಾನೆ.

ಚಿನ್ನದಂಗಡಿಯಲ್ಲಿ ಉಂಗುರ ಖರೀದಿಸಿದ್ದಕ್ಕೆ ಹಣ ಪಾವತಿ ಮಾಡಿದ ಸಂದೇಶ ರೈತನ ಮೊಬೈಲ್ ಗೆ ಬಂದ ಹಿನ್ನೆಲೆಯಲ್ಲಿ ವಿಜಯಪುರ ಪೊಲೀಸ್ ಠಾಣೆಯಲ್ಲಿ ರೈತ ರಾಜಣ್ಣ ದೂರು ನೀಡಿದ್ದ. ಹೀಗಾಗಿ ದೂರು ಪಡೆದು ತನಿಖೆ ನಡೆಸಿದ ಪೊಲೀಸರು ಚಿಂತಾಮಣಿ ಮೂಲದ ಗುರುಮೂರ್ತಿ ಅನ್ನೋ ಈ ವಂಚಕನನ್ನ ಪತ್ತೆ ಮಾಡಿ ಬಂಧಿಸಿದ್ದಾರೆ.

ಜೊತೆಗೆ ಅರೊಪಿ ಗುರುಮೂರ್ತಿ ಇದೇ ರೀತಿ ಚಿಂತಾಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಕಾರ್ಡ್ ಬದಲಿಸಿ ಕೆಲವರಿಗೆ ವಂಚನೆ ಮಾಡಿ ಜೈಲುವಾಸ ಸಹ ಅನುಭವಿಸಿದ್ದಾನೆ. ಕಳೆದ ಜನವರಿಯಲ್ಲಿ ಜೈಲಿಂದ ಬಿಡುಗಡೆಯಾಗಿ ಈಚೆ ಬಂದಿದ್ದಾನೆ. ಆದರೆ ಜೈಲಿಂದ ಬಂದರೂ ಬುದ್ದಿ ಕಲಿಯದ ಭೂಪ ಮತ್ತದೆ ಕೆಲಸ ಮಾಡಲು ಹೋಗಿ ಇದೀಗ ಪೊಲೀಸರ ಕೈಗೆ ಲಾಕ್ ಆಗಿದ್ದಾ‌ನೆ.

ಇನ್ನು, ಪೊಲೀಸರು ಆರೋಪಿಯಿಂದ ಎರಡು ಚಿನ್ನದ ಉಂಗುರ ಎಟಿಎಂ ಕಾರ್ಡ್ಗಳನ್ನ ವಶಕ್ಕೆ ಪಡೆದು ಬಡ ರೈತನಿಗೆ ವಾಪಸ್ ನೀಡಿದ್ದಾರೆ.

ಒಟ್ಟಾರೆ ಮೋಸ ಹೋಗುವವರು ಎಲ್ಲಿವರೆಗೂ ಇರ್ತಾರೋ ಅಲ್ಲಿ ವರೆಗೂ ವಂಚಕರು‌ ಇದ್ದೇ ಇರ್ತಾರೆ ಅನ್ನುವ ಹಾಗೆ ಬಡ ರೈತರನ್ನೆ ಟಾರ್ಗೆಟ್ ಮಾಡಿ ಮಜಾ ಮಾಡ್ತಿದ್ದ ಭೂಪ ಮತ್ತೆ ಮುದ್ದೆ ಮುರಿಯಲು ಜೈಲು ಸೇರಿದ್ದಾನೆ.

ಇನ್ನಾದರು ಎಟಿಎಂ ಬಳಿ ಹಣ ಡ್ರಾ ಮಾಡಲು ಹೋಗುವ ರೈತರು ಸ್ವಲ್ಪ ಎಚ್ಚರದಿಂದ ಇದ್ದರೆ ಒಳ್ಳೆಯದು. ಒಂದು ವೇಳೆ ಎಟಿಎಂನಲ್ಲಿ ಪಡೆಯಲು ಪರಿಚಯಸ್ಥರು, ನಂಬಿಕಸ್ಥರ ಸಹಾಯ ಪಡೆದುಕೊಂಡರೆ ಒಳ್ಳೆಯದು.

Leave a Reply

Your email address will not be published. Required fields are marked *