ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ ರಾಮೇಶ್ವರ ಗೇಟ್ ಸಮೀಪ ಇರುವ ‘ದಿ ಡಾರ್ಕ್ ಫ್ಯಾಮಿಲಿ ರೆಸ್ಟೋರೆಂಟ್’ ಮೇಲೆ ದಾಳಿ ನಡೆಸಿದ ಪೊಲೀಸರು 90 ಲೀ. ಅಕ್ರಮ ಮದ್ಯ ಜಪ್ತಿ ಮಾಡಿದ್ದಾರೆ.
ದೊಡ್ಡಬಳ್ಳಾಪುರ ದಾಬಸ್ ಪೇಟೆಯ ರಾಷ್ಟ್ರೀಯ ಹೆದ್ದಾರಿಯ ರಾಮೇಶ್ವರ ಗೇಟ್ ಬಳಿಯ ರೆಸ್ಟೋರೆಂಟ್ ನಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಗಲಾಟೆ ನಿಯಂತ್ರಿಸಿದ್ದಾರೆ.
ಗಲಾಟೆ ನಿಯಂತ್ರಣ ಮಾಡಿ ರೆಸ್ಟೋರೆಂಟ್ ಒಳಗೆ ಭೇಟಿ ನೀಡಿ ಪರಿಶೀಲಿಸಿದಾಗ ಬಿಯರ್, ಹಾಟ್ ಡ್ರಿಂಕ್ಸ್ ಸೇರಿದಂತೆ 15 ಬಾಕ್ಸ್ ಗಳಲ್ಲಿ ಸಂಗ್ರಹಿಸಿಟ್ಟಿದ್ದ ಒಟ್ಟು 90 ಲೀಟರ್ ಅಕ್ರಮ ಮದ್ಯ ಕಂಡುಬಂದಿದೆ.
ಕೂಡಲೇ ಅಕ್ರಮ ಮದ್ಯ ವಶಕ್ಕೆ ಪಡೆದು, ರೆಸ್ಟೋರೆಂಟ್ ವ್ಯವಸ್ಥಾಪಕರನ್ನು ವಿಚಾರಣೆ ಮಾಡಿದಾಗ ಪರವಾನಗಿ ಇಲ್ಲದೇ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.