ರೆಸ್ಟೋರೆಂಟ್ ಜನರಲ್ ಲೈಸನ್ಸ್ ನವೀಕರಣಕ್ಕೆ 5 ಲಕ್ಷಕ್ಕೆ ಬೇಡಿಕೆ ಇಟ್ಟ ಪಿಡಿಒ: 3.5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ

ರೆಸ್ಟೋರೆಂಟ್ ಜನರಲ್ ಲೈಸನ್ಸ್ ನವೀಕರಿಸಿಕೊಡಲು 5 ಲಕ್ಷಕ್ಕೆ ಬೇಡಿಕೆ ಇಟ್ಟು, 3.5 ಲಕ್ಷ ಲಂಚ ಪಡೆಯುವಾಗ ಅರಳುಮಲ್ಲಿಗೆ ಗ್ರಾಮ ಪಂಚಾಯಿತಿ ಪಿಡಿಒ ಎಂ.ಜಿ.ನಿರಂಜನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಅರಳುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೆಸ್ಟೋರೆಂಟ್ ಜನರಲ್ ಲೈಸನ್ಸ್ ಹೊಂದಿರುವ ನರಸಿಂಹಮೂರ್ತಿ ಎಂಬುವವರು ಪರವಾನಗಿ ನವೀಕರಣಕ್ಕೆ ಪಿಡಿಒ ಬಳಿ ಹೋಗಿದ್ದರು.

ಪರವಾನಗಿ ನವೀಕರಿಸಿಕೊಡಲು 5 ಲಕ್ಷ ಲಂಚದ ಹಣಕ್ಕೆ ಪಿಡಿಒ ಬೇಡಿಕೆ ಇಟ್ಟಿದ್ದರು. ಕೊನೆಗೂ 3.5ಲಕ್ಷಕ್ಕೆ ಮಾತುಕತೆಯಾಗಿತ್ತು. ಈ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ನರಸಿಂಹಮೂರ್ತಿ. ಅವರು ನೀಡಿದ ದೂರಿನ‌ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳವಾರ ಪಿಡಿಒ ನಿರಂಜನ್ ಅವರು ದೊಡ್ಡಬಳ್ಳಾಪುರ ತಾಲೂಕು ಪಂಚಾಯ್ತಿ ಆವರಣದಲ್ಲಿರುವ ಉದ್ಯೋಗ ಖಾತ್ರಿ ಯೋಜನೆ ಸಹಾಯಕ‌ ನಿರ್ದೇಶಕರ ಕೊಠಡಿಯಲ್ಲಿ 3.5ಲಕ್ಷ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಅಧಿಕಾರಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಪವನ್ ನೆಜ್ಜೂರು, ಡಿಎಸ್ಪಿಗಳಾದ ಟಿ.ಸಿ. ವೆಂಕಟೇಶ್, ಗಿರೀಶ್ ರೋಡಕರ್, ಚಂದ್ರಕಾಂತ್, ವೆಂಕಟೇಶ್, ನಂದಕುಮಾರ್, ರಮೇಶ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *