“ರೆಕಾರ್ಡ್ ಮಾಡಲು ನೀಡಿದ ಒಪ್ಪಿಗೆಯು ಪ್ರಸಾರ ಮಾಡಲು ನೀಡಿದ ಒಪ್ಪಿಗೆಯಲ್ಲ” – ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಪ್ರತೀಕಾರಾತ್ಮಕ ಅಶ್ಲೀಲತೆ , ಸೆಕ್ಸ್‌ಟಾರ್ಷನ್ ಹಾಗೂ ಬ್ಲ್ಯಾಕ್‌ಮೇಲ್ ವಿಡಿಯೋಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕ ಪೊಲೀಸ್ ಇಲಾಖೆ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಖಾಸಗಿ ಫೋಟೋಗಳು ಹಾಗೂ ವಿಡಿಯೋಗಳನ್ನು ಅನುಮತಿಯಿಲ್ಲದೆ ಪ್ರಕಟಿಸುವುದು, ಹಂಚಿಕೊಳ್ಳುವುದು ಅಥವಾ ಪ್ರಸಾರ ಮಾಡುವ ಪ್ರಕರಣಗಳಲ್ಲಿ ಕಠಿಣ ಮತ್ತು ತ್ವರಿತ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದೆ ಎಂದರು.

ಈ ಆದೇಶದಲ್ಲಿ, ಯಾವುದೇ ಫೋಟೋ ಅಥವಾ ವಿಡಿಯೋವನ್ನು ಸೆರೆಹಿಡಿಯಲು ಅಥವಾ ದಾಖಲಿಸಲು ನೀಡಿದ ಒಪ್ಪಿಗೆಯು ಅದನ್ನು ಇತರರಿಗೆ ಹಂಚಿಕೊಳ್ಳಲು ಅಥವಾ ಪ್ರಸಾರ ಮಾಡಲು ನೀಡಿದ ಒಪ್ಪಿಗೆಯೆಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಂತಹ ವಿಷಯವನ್ನು ಸಂಬಂಧಿತ ವ್ಯಕ್ತಿಯ ಅನುಮತಿಯಿಲ್ಲದೆ ಹಂಚುವುದು, ಪ್ರಕಟಿಸುವುದು, ಫಾರ್ವರ್ಡ್ ಮಾಡುವುದು ಅಥವಾ ಪ್ರಸಾರ ಮಾಡುವುದು ಸಂಜ್ಞೇಯ (Cognizable) ಅಪರಾಧವಾಗಿದ್ದು, ಮೂಲತಃ ಅದು ಒಪ್ಪಿಗೆಯೊಂದಿಗೆ ದಾಖಲಾಗಿದ್ದರೂ ಸಹ ಅಪರಾಧವೇ ಆಗಿರುತ್ತದೆ ಎಂದು ತಿಳಿಸಿದ್ದಾರೆ.

ಅನುಮತಿಯಿಲ್ಲದೆ ಖಾಸಗಿ ವಿಷಯಗಳನ್ನು ಹಂಚುವ ಪ್ರಕರಣಗಳು, ಸಾಮಾನ್ಯವಾಗಿ ‘ರಿವೆಂಜ್ ಪೋರ್ನೋಗ್ರಫಿ’, ‘ಸೆಕ್ಸ್‌ಟಾರ್ಷನ್’ ಹಾಗೂ ‘ಬ್ಲ್ಯಾಕ್‌ಮೇಲ್ ವಿಡಿಯೋ’ ಎಂದು ಕರೆಯಲ್ಪಡುವ ಪ್ರಕರಣಗಳಲ್ಲಿ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಅನ್ವಯವಾಗುವಂತೆ ಭಾರತೀಯ ನ್ಯಾಯ ಸಂಹಿತೆ (BNS), 2023 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act), 2000ರ ಸಂಬಂಧಿತ ವಿಧಿಗಳಡಿ, ಅಗತ್ಯವಿದ್ದಲ್ಲಿ BNSನ ಸೆಕ್ಷನ್ 77 ಹಾಗೂ IT Actನ ಸೆಕ್ಷನ್ 66E, 67 ಮತ್ತು 67A ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.

ಈ ಸ್ಥಾಯಿ ಆದೇಶವು, ವಿಡಿಯೋ ಅಥವಾ ಫೋಟೋ ದಾಖಲಿಸಲು ಹಿಂದೆ ಒಪ್ಪಿಗೆ ನೀಡಲಾಗಿತ್ತು ಎಂಬ ಕಾರಣವನ್ನು ಉಲ್ಲೇಖಿಸಿ ದೂರು ದಾಖಲಿಸಲು ನಿರಾಕರಿಸುವುದು ಅಥವಾ ವಿಳಂಬ ಮಾಡುವುದು ಸಂಪೂರ್ಣವಾಗಿ ಅಸಂಗತ ಎಂದು ತಿಳಿಸಿದೆ. ಬೆದರಿಕೆ, ಸುಲಿಗೆ, ಲೈಂಗಿಕ ಅನುಕೂಲತೆಗಳ ಬೇಡಿಕೆ ಅಥವಾ ಇತರೆ ಒತ್ತಡದ ಸಂದರ್ಭಗಳಲ್ಲಿ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆಗಳಿಗೆ ಸಂಬಂಧಿಸಿದ ಹೆಚ್ಚುವರಿ ವಿಧಿಗಳನ್ನೂ ಅನ್ವಯಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಘಟನೆ ನಡೆದ ಪ್ರದೇಶದ ವ್ಯಾಪ್ತಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಸಂಬಂಧಿತ ಪೊಲೀಸ್ ಠಾಣೆಗಳು ಮೊದಲು ‘ಜೀರೋ-ಎಫ್‌ಐಆರ್’ ದಾಖಲಿಸಿ, ನಂತರ ವಿಳಂಬವಿಲ್ಲದೆ ಸೂಕ್ತ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು ಎಂದು ಹೇಳಿದ್ದಾರೆ.

ಅಧಿಕಾರಿಗಳಿಗೆ ಆಕ್ಷೇಪಾರ್ಹ ವಿಷಯವನ್ನು ತಕ್ಷಣ ತೆಗೆದುಹಾಕಲು ಅಥವಾ ನಿರ್ಬಂಧಿಸಲು ಕ್ರಮ ಕೈಗೊಳ್ಳುವುದು, ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸಂರಕ್ಷಿಸುವುದು ಹಾಗೂ ತಾಂತ್ರಿಕ ತನಿಖೆಗಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಗಳು ಮತ್ತು ಸಿಐಡಿ ಸೈಬರ್ ವಿಭಾಗದೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಲಾಗಿದೆ ಎಂದರು.

ಈ ಆದೇಶವು ಸಂತ್ರಸ್ತರನ್ನು ಗೌರವ ಮತ್ತು ಸಂವೇದನಾಶೀಲತೆಯಿಂದ ನಡೆಸಿಕೊಳ್ಳಬೇಕೆಂದು ಒತ್ತಿ ಹೇಳುತ್ತದೆ. ಅವರ ಗುರುತನ್ನು ಗೌಪ್ಯವಾಗಿಡಬೇಕು, ಸಂತ್ರಸ್ತರನ್ನೇ ದೂಷಿಸುವ ವರ್ತನೆ ತಪ್ಪಿಸಬೇಕು ಮತ್ತು ಸಾಧ್ಯವಾದಲ್ಲಿ ಮಹಿಳಾ ಸಂತ್ರಸ್ತರ ದೂರುಗಳನ್ನು ಮಹಿಳಾ ಅಧಿಕಾರಿಗಳೇ ದಾಖಲಿಸಬೇಕು ಎಂದು ತಿಳಿಸಿದೆ ಎಂದು ಹೇಳಿದ್ದಾರೆ.

‘ಹಿಂದೆ ಒಪ್ಪಿಗೆ ನೀಡಲಾಗಿತ್ತು’ ಎಂಬ ತಪ್ಪು ಕಾರಣವನ್ನು ನೀಡಿ ಎಫ್‌ಐಆರ್ ದಾಖಲಿಸಲು ವಿಫಲವಾದರೆ ಅಥವಾ ವಿಳಂಬ ಮಾಡಿದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಬಹುದು ಎಂದು ಎಚ್ಚರಿಸಲಾಗಿದೆ ಎಂದರು‌.

ಈ ನಿರ್ದೇಶನವು ಸಂವಿಧಾನಬದ್ಧ ಖಾಸಗಿತನದ ಹಕ್ಕನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಕರ್ನಾಟಕದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಂತ್ರಸ್ತರ ಪರ, ಕಾನೂನುಬದ್ಧ ಹಾಗೂ ಏಕರೂಪದ ಕ್ರಮವನ್ನು ಖಚಿತಪಡಿಸುತ್ತದೆ ಎಂದರು‌.

Ramesh Babu

Journalist

Recent Posts

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

2 hours ago

ಸರ್ಕಾರಿ ಗೋಮಾಳ ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಕ್ರಮ: ನಕಲಿ ಭೂದಾಖಲೆ ಸೃಷ್ಟಿ ಹಾಗೂ ಅಕ್ರಮ ಖಾತೆ ಬದಲಾವಣೆ ಕಂಡುಬಂದರೆ ಕಠಿಣ ಕ್ರಮ- ಕಂದಾಯ ಸಚಿವ ಡಾ.ಜಿ ಪರಮೇಶ್ವರ್

ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ…

4 hours ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಅ.07-10-2026: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ, ಚೆಕ್‌-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 942 ಗ್ರಾಂ…

7 hours ago

ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಸಚಿವ ಜಿ. ಪರಮೇಶ್ವರ್ ದಿಢೀರ್ ಭೇಟಿ

ದೇವನಹಳ್ಳಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ…

8 hours ago

ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ರೈಲಿಗೆ ಸಿಲುಕಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…

15 hours ago

ದಸರಾ….

ಮೈಸೂರು ದಸರಾ, ಮಹಿಷಾ ದಸರಾ, ಚಾಮುಂಡಿ ದಸರಾ..... ವಿಜಯ ದಶಮಿ - ಆಯುಧ ಪೂಜೆ..... ದುಷ್ಟ ಶಕ್ತಿಗಳ ವಿರುದ್ಧ ವಿಜಯದ…

15 hours ago