
ರುಪೀ ಫಾರ್ ಹ್ಯುಮಾನಿಟಿ ಸಂಸ್ಥೆ ವತಿಯಿಂದ ದೊಡ್ಡಬಳ್ಳಾಪುರ ನಗರದ ಶ್ರೀ ಮುತ್ಯಾಲಮ್ಮ ದೇವಾಲಯ ಸಮೀಪವಿರುವ ಸರ್ಕಾರಿ ಅನುದಾನಿತ ಶ್ರೀ ಚೇತನ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ಲೇಖನಿ, ಪುಸ್ತಕ, ಪೆನ್ಸಿಲ್, ಪ್ರೊಜೆಕ್ಟರ್ ಜೊತೆಗೆ ಮಕ್ಕಳು ಆರಾಮಧಾಯಕವಾಗಿ ಕುಳಿತು ಪಾಠ ಕೇಳಲು ಡೆಸ್ಕ್ (ಆಸನ) ಗಳನ್ನು ನೀಡಿ ಅನುಕೂಲ ಮಾಡಿಕೊಟ್ಟಿದೆ.

ಈ ವೇಳೆ ಮಾಧ್ಯಮದವರೊಂದಿಗೆ ರುಪೀ ಫಾರ್ ಹ್ಯುಮಾನಿಟಿ ಸಂಸ್ಥೆ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ರುಪೀ ಫಾರ್ ಹ್ಯುಮಾನಿಟಿ ಸಂಸ್ಥೆ ವತಿಯಿಂದ ಈ ಶಾಲೆಗೆ ಕಳೆದ ಮೂರು ವರ್ಷಗಳಿಂದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೇಕಾಗುವ ಸಲಕರಣೆಗಳನ್ನು ನೀಡಿ ಮಕ್ಕಳು ಗೌರವದಿಂದ ಅಕ್ಷರ ಕಲಿಯುವಂತಹ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ. ಇಂದು ಸುಮಾರು 20 ಡೆಸ್ಕ್ ಗಳನ್ನು ನೀಡಿದ್ದೇವೆ. ಇದನ್ನು ಸೂಕ್ತ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಮುಂಬರುವ ವಿದ್ಯಾರ್ಥಿಗಳ ಬಳಕೆಗೆ ಅನುವು ಮಾಡಿಕೊಡಬೇಕು ಎಂದರು.

ಡೆಸ್ಕ್ ಪಡೆದ ಶಾಲೆಯ ವಿದ್ಯಾರ್ಥಿಗಳು ಖುಷಿಯಿಂದ ಡೆಸ್ಕ್ ಮೇಲೆ ಕುಳಿತು ಪಾಠ ಕೇಳುವಂತಾಗಿದೆ. ಇದರಿಂದ ಮಕ್ಕಳಿಗೆ ಬರೆಯಲು ಅನುಕೂಲವಾಗಿದೆ. ಜತೆಗೆ, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದಲೂ ಡೆಸ್ಕ್ ವಿತರಣೆ ಮಾಡಿರುವ ಕಾರ್ಯಕ್ಕೆ ಶ್ಲಾಘನೆಯೂ ವ್ಯಕ್ತವಾಗಿದೆ ಎಂದು ಹೇಳಿದರು.

ಪ್ರತೀ ವರ್ಷ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್, ಪೆನ್, ಪೆನ್ಸಿಲ್, ಜಾಮಿಟ್ರಿ ಬಾಕ್ಸ್, ಸಮವಸ್ತ್ರ, ಶೂ, ಕ್ರೀಡಾ ಜರ್ಸಿ, ಪ್ರೊಜೆಕ್ಟರ್ ನೀಡಿ ಡಿಜಿಟಲ್ ತರಗತಿಯನ್ನಾಗಿ ಮಾರ್ಪಾಡು ಮಾಡಲಾಯಿತು. ನಂತರ ತಿಂಡಿ ನೀಡಿ ಮಕ್ಕಳ ಜೊತೆ ಬೆರೆತು ಕೆಲವೊಂದು ಆಟಗಳನ್ನು ಆಡಿ ಹೋಗುತ್ತಿದ್ದೆವು. ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದ ಈ ಶಾಲೆಯ ಮಕ್ಕಳಿಗೆ ಇಂದು ನಮ್ಮ ಸಂಸ್ಥೆಯು ಡೆಸ್ಕ್‌ಗಳನ್ನು ನೀಡಿ ಅನುಕೂಲ ಮಾಡಿಕೊಟ್ಟಿರುವುದು ನಮಗೆ ಸಂತಸ ತಂದಿದೆ ಎಂದು ಹೇಳಿದರು…

2013ರಲ್ಲಿ ರುಪೀ ಫಾರ್ ಹ್ಯುಮಾನಿಟಿ ಸಂಸ್ಥೆ ಪ್ರಾರಂಭವಾಯಿತು. ಸಂಸ್ಥೆಯಲ್ಲಿ ಸುಮಾರು 200 ಮಂದಿ ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ. ಬಡವರಿಗೆ ನೆರವಾಗುವ ಕೆಲಸಗಳು, ಪರಿಸರ ಉಳಿಸುವುದಕ್ಕಾಗಿ ಗಿಡಗಳನ್ನು ನೆಡುವುದು, ಪರಿಸರದ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವುದು, ಸಾಕ್ಷರತೆ ಹೆಚ್ಚಿಸಲು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವಂತ ಕೆಲಸ ಮಾಡುತ್ತಿದ್ದೇವೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಸಂಸ್ಥೆ ವತಿಯಿಂದ ಉಚಿತ ಶಿಕ್ಷಣ ಕೊಡಿಸುವುದು, ಕೋವಿಡ್ ಸಮಯದಲ್ಲಿ ದಿನಸಿ ಕಿಟ್ ಗಳನ್ನು ನೀಡಿದ್ದೇವೆ. ಇನ್ನೂ ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡುವ ಯೋಚನೆ ಇದೆ. ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದರು….

ನಂತರ ಉಪಾಧ್ಯಕ್ಷೆ ದೀಪ್ತಿ ಮಾತನಾಡಿ, ಸರ್ಕಾರಿ ಅನುದಾನಿತ ಶ್ರೀ ಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಧುನಿಕವಾಗಿ ಬದಲಾವಣೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ದಾನಿಗಳ ಸಹಕಾರದಿಂದ ಪ್ರೊಜೆಕ್ಟರ್, ಡೆಸ್ಕ್ ಸೇರಿದಂತೆ ಇತರೆ ವಸ್ತುಗಳನ್ನು ನೀಡುತ್ತಿದ್ದೇವೆ. ಪಾಠ ಕೇಳುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗಬಾರದು. ಶಾಲಾ ತರಗತಿಗಳಲ್ಲಿ ಮೂಲಭೂತ ಸೌಕರ್ಯಗಳು ಇರಬೇಕು. ಖಾಸಗಿ ಶಾಲೆಗಳ ಮಕ್ಕಳಗಿಂತ ಸರ್ಕಾರಿ ಶಾಲೆಗಳ ಮಕ್ಕಳ ಬುದ್ಧಿಮಟ್ಟ ಹೆಚ್ಚಿರುತ್ತದೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿ ಬೇಕಾಗಿದೆ ಎಂದರು…

ಮುಖ್ಯ ಶಿಕ್ಷಕ ರಾಮಚಂದ್ರಪ್ಪ ಮಾತನಾಡಿ, ನಾನು ಮೊದಲಿಗೆ ಮಾಗಡಿಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ. ಅಲ್ಲಿಂದ ದೊಡ್ಡಬಳ್ಳಾಪುರದ ಸರ್ಕಾರಿ ಅನುದಾನಿತ ಶ್ರೀ ಚೇತನ ಹಿರಿಯ ಪ್ರಾಥಮಿಕ ಶಾಲೆಗೆ ಬಂದು ಮುಖ್ಯ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಶಾಲೆಗೆ ರುಪೀ ಫಾರ್ ಹ್ಯುಮಾನಿಟಿ ಸಂಸ್ಥೆಯವರು ಸಾಕಷ್ಟು ಸಹಾಯ ಮಾಡುತ್ತಿದ್ದಾರೆ… ಈ ಶಾಲೆಯಲ್ಲಿ ಹೆಚ್ಚಾಗಿ ಉತ್ತರ ಕರ್ನಾಟಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಲ್ಲಾ ಮಕ್ಕಳಿಗೂ ಸಮವಸ್ತ್ರದ ಕೊರತೆ ಇತ್ತು, ಈ ಕುರಿತು ರುಪೀ ಫಾರ್ ಹ್ಯುಮಾನಿಟಿ ಸಂಸ್ಥೆ ಬಳಿ ಮಾತನಾಡಿದಾಗ ಕೂಡಲೇ ಅವರು ಮಕ್ಕಳಿಗೆ ಸಮವಸ್ತ್ರ ನೀಡಿದ್ದಾರೆ. ಬ್ಲಾಕ್ ಬೋರ್ಡ್ ನಿಂದ ಹಿಡಿದು ಲ್ಯಾಪ್ ಟಾಪ್, ಪ್ರೊಜೆಕ್ಟರ್ ವರೆಗೂ ದಾನ ಮಾಡಿದ್ದಾರೆ. ಮಕ್ಕಳು ಬೆಂಚ್ ಮೇಲೆ ಕುಳಿತು ಪಾಠ ಕೇಳಲು ಸುಮಾರು 20 ಡೆಸ್ಕ್ ನೀಡಿದ್ದಾರೆ. ಇದರಿಂದ ಮಕ್ಕಳಿಗೆ ತುಂಬಾ ಅನುಕೂಲವಾಗಿದೆ ಎಂದರು…

ಈ ವೇಳೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಕೋಕಿಲಾ ಚವ್ಹಾಣ್, ರುಪೀ ಫಾರ್ ಹ್ಯುಮಾನಿಟಿ ಸಂಸ್ಥೆಯ ಖಜಾಂಚಿ ಶ್ರೀಪಾದ್, ಚಂದನಾ, ರಮ್ಯಾ, ಸೂಫಿಯಾ, ಯಾಸಿನ್, ಸುಪ್ರಿಯಾ, ಅಶ್ರಫ್, ಗುರುತೀರ್ಥ, ಆದಿತ್ಯ, ಹಿಮಾ, ಧನ್ವಿತ್, ದೈವಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು….