
ರಾಮರಾಜ್ಯ ಮತ್ತು ಭೀಮರಾಜ್ಯ( ಸಂವಿಧಾನ ) ,…….
ಸಮನ್ವಯ ಅಥವಾ ಸಂಘರ್ಷ………
ನಮ್ಮ ಆಯ್ಕೆ ಯಾವುದು…..
ನವೆಂಬರ್ 26ರ ಸಂವಿಧಾನ ದಿನದಂದೇ ಅಯೋಧ್ಯೆಯಲ್ಲಿ ಹಾರಾಡಿದ ಧರ್ಮ ಧ್ವಜ…..
ಅಲ್ಲಿ ಸಾರ್ವಜನಿಕವಾಗಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಭಾರತದ ಪುನರುತ್ಥಾನದ ಧ್ವಜ ಎಂಬುದಾಗಿ ಹೇಳಿದರು ಹಾಗೂ ಮೆಕಾಲೆ ಶಿಕ್ಷಣವನ್ನು ಇತ್ತೀಚಿನ ದಿನಗಳಲ್ಲಿ ಎರಡನೆಯ ಬಾರಿಗೆ ಗುಲಾಮಿ ಮನೋಭಾವದ ಸೃಷ್ಟಿಸುವ ಶಿಕ್ಷಣ ಎಂಬುದಾಗಿ ಹೀಗಳೆದರು.
ರಾಮನ ಆದರ್ಶ, ರಾಮ ರಾಜ್ಯದ ಆಶಯ, ಎಲ್ಲವನ್ನೂ ಮಾದರಿ ಆಡಳಿತ ವ್ಯವಸ್ಥೆಯ ಉದಾಹರಣೆಯಾಗಿ ನೀಡಿದರು.

ಕಳೆದ 11 ವರ್ಷಗಳ ಶ್ರೀ ನರೇಂದ್ರ ಮೋದಿಯವರ ಆಡಳಿತದ ಕಾರ್ಯವೈಖರಿಯಲ್ಲಿ ಭಾರತದ ಇತಿಹಾಸ ಮೊಗ್ಗಲು ಬದಲಾಯಿಸಿದಂತೆ ಹೊರಳು ಹಾದಿಯಲ್ಲಿರುವುದು ನಿಜ. ಸ್ವಾತಂತ್ರ ನಂತರದ ಸುಮಾರು 65/66 ವರ್ಷಗಳ ಭಾರತ ಸಾಗುತ್ತಿದ್ದ ಹಾದಿಯ ದಿಕ್ಕು ಸ್ವಲ್ಪಮಟ್ಟಿಗೆ ಬದಲಾಗಿ ಈ 11 ವರ್ಷಗಳಲ್ಲಿ ವೇಗವಾಗಿಯೇ ಹೆಚ್ಚು ಕಡಿಮೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ. ಅಂದರೆ ಇಲ್ಲಿಯವರೆಗೆ ಭಾರತ ಅಧ್ಯಾತ್ಮದ ತವರೂರು ಎಂದು ಹೆಸರಾಗಿದ್ದು ಅಲ್ಲಲ್ಲಿ ಧಾರ್ಮಿಕ ಚಳುವಳಿಯ ಪ್ರಭಾವ ಸ್ವಲ್ಪಮಟ್ಟಿಗೆ ಇತ್ತು. ಆದರೆ ಮೋದಿಯವರ ಆಡಳಿತದಲ್ಲಿ ಧರ್ಮ ಮತ್ತು ರಾಜಕೀಯ ಬಹುತೇಕ ಒಂದಾಗಿಯೇ ಆಡಳಿತ ವ್ಯವಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದೆ. ಅದಕ್ಕೆ ತಕ್ಕಂತೆ ಅದರ ಜನಪ್ರಿಯತೆ ಚುನಾವಣಾ ರಾಜಕೀಯದಲ್ಲಿ ಹೆಚ್ಚುತ್ತಾ ಹೋಗಿ, ಬಹುತೇಕ ಅದೇ ಚಿಂತನೆಯ ವ್ಯಕ್ತಿಗಳು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾಗಿ, ಧರ್ಮ ಮತ್ತು ಆಡಳಿತವನ್ನು ಒಟ್ಟಿಗೇ ತೆಗೆದುಕೊಂಡು ಹೋಗುತ್ತಿದ್ದಾರೆ….
ಹಾಗಾದರೆ ಭಾರತದ ಮುಂದಿನ ಭವಿಷ್ಯವೇನು ? ಹಿಂದುತ್ವದ ರಾಷ್ಟ್ರವಾಗಿ ಸನಾತನ ಧರ್ಮದ ಆಧಾರದಲ್ಲಿ ಶಾಂತಿ, ನೆಮ್ಮದಿ, ಸುಖ ಸಮೃದ್ಧಿಯಾಗಿ ಭಾರತ ಭವಿಷ್ಯವನ್ನು ಕಾಣಬಹುದೇ ಅಥವಾ ಅದಕ್ಕೆ ವಿರುದ್ಧವಾಗಿ ಕೋಮು ಸಂಘರ್ಷ, ಮತಾಂಧತೆ ಹೆಚ್ಚಾಗಿ ಮಧ್ಯಪ್ರಾಚ್ಯದ ದೇಶಗಳಂತೆ ರಕ್ತಪಾತದ ದಿನಗಳನ್ನು ಭಾರತ ಮುಂದೆ ನೋಡಬಹುದೇ ? ಭವಿಷ್ಯದ ಸಾಧ್ಯತೆಗಳ ಕುರಿತು ಒಂದಷ್ಟು ಅವಲೋಕನ ಮಾಡಿಕೊಳ್ಳಬೇಕು…..
ಜಗತ್ತಿನ ಮಾನವ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಭೂಪ್ರದೇಶದ ವಿಸ್ತರಣೆ ಮತ್ತು ಧಾರ್ಮಿಕ ಮತಾಂಧತೆ ಅಥವಾ ಅಸಹಿಷ್ಣುತೆಯ ಕಾರಣಕ್ಕಾಗಿಯೇ ಬಹುತೇಕ ಯುದ್ಧಗಳು ನಡೆದು ರಕ್ತ ಹರಿದಿದೆ. ಅಪರೂಪಕ್ಕೆ ಹೆಣ್ಣು ಮತ್ತು ಹೊನ್ನಿಗಾಗಿಯೂ ಒಂದಷ್ಟು ಯುದ್ಧಗಳು ನಡೆದಿದೆ. ಭಾರತದಲ್ಲಿ ಬಹಳಷ್ಟು ಯುದ್ಧಗಳು ಭೂಪ್ರದೇಶದ ವಿಸ್ತರಣೆಗಾಗಿ ಮತ್ತು ಜಾತಿ, ಭಾಷೆಯ ಅಂತ:ಕಲಹಗಳ ಪರಿಣಾಮವಾಗಿ ಯುದ್ಧಗಳಾಗಿವೆ. ಆದರೆ ಸ್ವಾತಂತ್ರ್ಯ ನಂತರ ಭಾರತ ಮತ್ತು ಪಾಕಿಸ್ತಾನ ಧರ್ಮಗಳ ಆಧಾರದ ಮೇಲೆ ವಿಭಜನೆಯಾದ ನಂತರ ಕೋಮು ಘರ್ಷಣೆಗಳು ಈ ಕ್ಷಣಕ್ಕೂ ಬೂದಿ ಮುಚ್ಚಿದ ಕೆಂಡದಂತೆ ಆಗಾಗ ಉಲ್ಬಣಗೊಳ್ಳುತ್ತಾ, ತಣ್ಣಗಾಗುತ್ತಾ ಹೇಗೋ ನಡೆದುಕೊಂಡು ಹೋಗುತ್ತಿದೆ.
ಭಾರತ ಒಂದು ಗಣರಾಜ್ಯಗಳ ಒಕ್ಕೂಟವಾಗಿ ಸಂವಿಧಾನದ ಅಡಿಯಲ್ಲಿ ಭಾಷಾವಾರು ಪ್ರಾಂತ್ಯಗಳಾಗಿ, ಜಾತ್ಯಾತೀತ ದೇಶವಾಗಿ ವಿಶ್ವದಲ್ಲಿ ಗುರುತಿಸಿಕೊಂಡಿದೆ ಮತ್ತು ಆ ನೆಲೆ ಗಟ್ಟಿಯಾಗಿದೆ. ಅದೇ ಬಾಬಾ ಸಾಹೇಬರ ಭೀಮರಾಜ್ಯ….
ಆದರೆ ಮೇಲೆ ಹೇಳಿದಂತೆ ಕಳೆದ 11 ವರ್ಷಗಳ ಅವಧಿಯಲ್ಲಿ ಭಾರತ ಧಾರ್ಮಿಕ ಚಿಂತನೆಗಳತ್ತ, ಆ ಮೂಲಕ ಆಡಳಿತಾತ್ಮಕ ಬದಲಾವಣೆಗಳತ್ತ ಹೆಚ್ಚು ಸಾಗುತ್ತಿದೆ. 1990ರ ಬಾಬರಿ ಮಸೀದಿ ಧ್ವಂಸ ಪ್ರಕರಣದ ನಂತರ ನಿಧಾನವಾಗಿ ಭಾರತದ ಧಾರ್ಮಿಕ ರಾಷ್ಟ್ರೀಯತೆ ಜನರಲ್ಲಿ ಜಾಗೃತಗೊಳ್ಳುವಂತೆ ಮಾಡಿದ ಪರಿಣಾಮವಾಗಿ ಇದೀಗ ಅಯೋಧ್ಯೆಯ ಧರ್ಮಧ್ವಜ
ಸ್ಥಾಪನೆಯ ಮೂಲಕ ಅದಕ್ಕೊಂದು ಭಾವನಾತ್ಮಕ ದೃಢತೆ ಲಭ್ಯವಾಗಿದೆ….
ಇದು ಹೀಗೆಯೇ ಸಾಗುತ್ತದೆಯೇ ? ಭಾರತ ಮತ್ತೆ ಸನಾತನ ಧರ್ಮಕ್ಕೆ ಮರಳುತ್ತದೆಯೇ ? ಭಗವಾಧ್ವಜ ಅಥವಾ ಕೇಸರಿ ಧ್ವಜ ಭಾರತದ ರಾಷ್ಟ್ರಧ್ವಜವಾಗಿ, ವಂದೇ ಮಾತರಂ ರಾಷ್ಟ್ರಗೀತೆಯಾಗಿ, ಮೆಕಾಲೆ ಶಿಕ್ಷಣಕ್ಕೆ ಬದಲಾಗಿ ಗುರುಕುಲ ಶಿಕ್ಷಣ ಹೀಗೆ ಮುಂದಿನ ದಿನಗಳು ಬದಲಾಗುತ್ತಾ ಸಾಗಬಹುದೇ ? ಅದು ಸರಿಯಾದ ನಡೆಯೇ ?
ಈ ಕ್ಷಣದಲ್ಲಿ ಹೌದು ಎನಿಸಿದರು ಅದು ಖಂಡಿತವಾಗಲೂ ಅಸಾಧ್ಯವಾದ ಮಾತು. ಏಕೆಂದರೆ ಧರ್ಮಗಳು ಸಹ ಆಧ್ಯಾತ್ಮಿಕತೆಯನ್ನು ಮೀರಿ, ಧಾರ್ಮಿಕ ಆಚರಣೆಗಳನ್ನು ಮೀರಿ, ಮತಾಂಧತೆಯಾಗಿ ಪರಿವರ್ತನೆಯಾದಾಗ ಭಾರತದಂತಹ ದೇಶದಲ್ಲಿ ಸಹಜವಾಗಿ ಘರ್ಷಣೆಗಳು ಪ್ರಾರಂಭವಾಗುತ್ತದೆ. ಈ ಧರ್ಮವನ್ನು ಕೆಲವು ಧಾರ್ಮಿಕ, ರಾಜಕೀಯ ನಾಯಕರು, ಮಾಧ್ಯಮಗಳು, ಒಂದು ರಾಷ್ಟ್ರೀಯ ಪಕ್ಷದ ಕಾರ್ಯಕರ್ತರು ಹೇಗೆ ಬೆಂಬಲಿಸುತ್ತಾರೋ ಹಾಗೆಯೇ ಅದಕ್ಕೆ ವಿರುದ್ಧವಾಗಿ ಭಾರತದಲ್ಲಿರುವ ಇತರ ಅಲ್ಪಸಂಖ್ಯಾತ ಧರ್ಮದವರು, ಸಂವಿಧಾನ ಮತ್ತು ಜಾತ್ಯಾತೀತ ನಂಬಿಕೆಯ ಜನರು, ಇನ್ನೊಂದು ರಾಷ್ಟ್ರೀಯ ಪಕ್ಷ ಮತ್ತು ಕೆಲವು ಪ್ರಾದೇಶಿಕ ಪಕ್ಷಗಳು ಅದಕ್ಕೆ ಪ್ರಬಲವಾದ ವಿರೋಧವನ್ನು ವ್ಯಕ್ತಪಡಿಸುತ್ತಾರೆ.
ಈಗಿನ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನವನ್ನು ಯಾವ ಬೆಲೆ ತೆತ್ತಾದರೂ ರಕ್ಷಿಸಿಕೊಳ್ಳಬೇಕೆಂಬ ಜನರು ಒಂದು ಕಡೆಯಾದರೆ, ಭಾರತದ ಸನಾತನ ಧರ್ಮದ ಆಚರಣೆಗಳಿಗೆ ವಿರುದ್ಧವಾಗಿರುವ ಮತ್ತೊಂದು ಅಲ್ಪಸಂಖ್ಯಾತ ಗುಂಪು ಇದರೊಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಸಂಘರ್ಷ ನಡೆಸುತ್ತಲೇ ಇರುತ್ತದೆ. ಈ ಘರ್ಷಣೆಗಳು ಯಾವ ಹಂತಕ್ಕೆ ಹೋಗುತ್ತದೆ ಎಂಬುದರ ಮೇಲೆ ನಾನು ಮೇಲೆ ಹೇಳಿದ ಸಾಧ್ಯತೆಗಳು ನಿರ್ಧಾರವಾಗುತ್ತದೆ…..
ಒಂದೇ ಧರ್ಮದ ಎರಡು ಮೂರು ಒಳ ಪಂಗಡಗಳೇ ಹೇಗೆ ಒಬ್ಬರಿಗೊಬ್ಬರು ಸರ್ವನಾಶ ಮಾಡುವ ಉದ್ದೇಶದ ಘರ್ಷಣೆಗಳಲ್ಲಿ ತೊಡಗಿರುತ್ತಾರೆಂದ ಮೇಲೆ ಎರಡು ವಿಭಿನ್ನ ಧರ್ಮ ಮತ್ತು ಸೈದ್ಧಾಂತಿಕ ಸಂಘರ್ಷಗಳ ನಡುವೆ ದೇಶ ಅಷ್ಟು ಸುಲಭವಾಗಿ ಒಂದು ಕಡೆ ವಾಲುವುದು ಸಾಧ್ಯವಿಲ್ಲ.
ಭಾರತದ ಅಸ್ಮಿತೆ ಉಳಿದಿರುವುದೇ ವೈವಿಧ್ಯಮಯ ಬಹುತ್ವ ಸಂಸ್ಕೃತಿಯಲ್ಲಿ. ಸನಾತನ ಧರ್ಮ ಆ ಬಹುತ್ವ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತದೆಯೇ ? ಕೇವಲ ಒಪ್ಪಿಕೊಳ್ಳುವುದು ಮಾತ್ರವಲ್ಲ ಈ ಆಧುನಿಕ, ತಾಂತ್ರಿಕ, ನಾಗರಿಕ ಸಮಾಜದಲ್ಲಿ ಅಸಮಾನತೆ ಮುಕ್ತ, ಶೋಷಣೆ ಮುಕ್ತ ಸಮ ಸಮಾಜದ ಬಹುತ್ವವನ್ನು ಒಪ್ಪಿಕೊಳ್ಳುತ್ತದೆಯೇ ? ಧರ್ಮ ನಿಷ್ಠ ಆಚರಣೆಯಲ್ಲಿ ಇದು ಅಸಾಧ್ಯ. ಅದು ಸಾಧ್ಯವಿಲ್ಲ ಎನ್ನುವುದಾದರೆ ಘರ್ಷಣೆಗಳು ನಿರಂತರವಾಗಿರುತ್ತವೆ……
ಹಾಗೆಯೇ ಮೆಕಾಲೆ ಶಿಕ್ಷಣ ಗುಲಾಮಿ ಮನಸ್ಥಿತಿಯನ್ನೋ ಅಥವಾ ಆಧುನಿಕ ಕಾಲಕ್ಕೆ ತಕ್ಕಂತೆ ಉದ್ಯೋಗಿಗಳನ್ನೋ ಸೃಷ್ಟಿಸುತ್ತಿದೆಯೇ ಎನ್ನುವುದನ್ನು ವಾಸ್ತವ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಮಾನವೀಯ ಮೌಲ್ಯಗಳು ನಿರಂತರವಾಗಿ ಕುಸಿದು, ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆಯುತ್ತಾ, ವಿದ್ಯಾವಂತರೇ ಭ್ರಷ್ಟಾಚಾರದಲ್ಲಿ, ಮೌಢ್ಯದಲ್ಲಿ, ಜಾತಿ ವ್ಯವಸ್ಥೆಯಲ್ಲಿ ಮುಳುಗೇಳುತ್ತಿರುವಾಗ, ಯುವ ಜನಾಂಗ ದಾರಿ ತಪ್ಪುತ್ತಿರುವಾಗ ಮೆಕಾಲೆ ಶಿಕ್ಷಣದ ಬಗ್ಗೆ ಒಂದಷ್ಟು ಕೋಪ ಬರುವುದು ನಿಜ. ಹಾಗೆಯೇ ಗುರುಕುಲ ಶಿಕ್ಷಣ ಕೇವಲ ಕೆಲವೇ ಸಮುದಾಯಗಳಿಗೆ ಸೀಮಿತವಾಗಿ, ಕೇವಲ ಕೆಲವರು ಮಾತ್ರ ವಿದ್ಯಾವಂತರಾಗಿ, ಮೇಲುಕೀಳಿನ ಶ್ರೇಷ್ಠತೆಯ ವ್ಯಸನವನ್ನು ತುಂಬಿ, ಶಿಕ್ಷಣ ಕೆಲವೇ ವರ್ಗದ ಸೊತ್ತಾಗಿದ್ದ ಕಾರಣಕ್ಕಾಗಿ, ಅಲ್ಲಿ ಸರ್ವತೋಮುಖ ವ್ಯಕ್ತಿತ್ವ ನಿರ್ಮಾಣದ ಸಾಧ್ಯತೆಗಳನ್ನೇ ಇಲ್ಲವಾಗಿಸುತ್ತಿದ್ದ ಕಾರಣಕ್ಕಾಗಿ, ಅದು ತನ್ನ ಅಸ್ತಿತ್ವ ಕಳೆದುಕೊಂಡು ಮೆಕಾಲೆ ಶಿಕ್ಷಣವೇ ಇಡೀ ವಿಶ್ವದ ಶೈಕ್ಷಣಿಕ ಪಠ್ಯಕ್ರಮವಾಗಿರುವಾಗ ಅದನ್ನು ತಿರಸ್ಕರಿಸಿ ಆಧುನಿಕ ಸಮಾಜ ಅಭಿವೃದ್ಧಿಯೆಡೆಗೆ ಸಾಗಲು ಸಾಧ್ಯವೇ ?….
ಹಿಂದಿರುಗಲು ಸಾಧ್ಯವೇ ಇಲ್ಲದಷ್ಟು ಮುಂದೆ ಬಂದಾಗಿದೆ. ಈಗ ಮೆಕಾಲೆ ಶಿಕ್ಷಣದ ಸುಧಾರಿತ ಕ್ರಮಗಳನ್ನು ಮತ್ತು ಆ ಶಿಕ್ಷಣದಲ್ಲಿ ಕೇವಲ ಅಕ್ಷರಗಳನ್ನು ಮಾತ್ರ ಕಲಿಸದೆ ಮಾನವೀಯ ಮೌಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕೆ ಹೊರತು ಅದನ್ನು ಸಂಪೂರ್ಣ ತೊರೆಯಲು ಸಾಧ್ಯವಿಲ್ಲ.
ಮೆಕಾಲೆ ಶಿಕ್ಷಣದಿಂದ ಗುಲಾಮಿ ಮನಸ್ಥಿತಿ ಸೃಷ್ಟಿಯಾದರೆ, ಗುರುಕುಲ ಶಿಕ್ಷಣದಿಂದ ಭಕ್ತಗಣ ಸಂಸ್ಕೃತಿ, ಮತಾಂಧತೆಯ ಸಂಸ್ಕೃತಿ, ಶ್ರೇಷ್ಠತೆಯ ವ್ಯಸನದ ಸಂಸ್ಕೃತಿ, ಮಾನವ ಮತ್ತು ಜೀವ ವಿರೋಧಿ ಸಂಸ್ಕೃತಿ ಸೃಷ್ಟಿಯಾಗುವ ಸಾಧ್ಯತೆಯೂ ಇದೆ. ಮದರಸಾಗಳಂತೆ ಕೇವಲ ಧರ್ಮ ಬೋಧನೆಗಿ ಸೀಮಿತವಾಗಬಹುದು…
ಆದ್ದರಿಂದ ಕಲಿಕೆಯ ರೀತಿ ನೀತಿಯ ಜೊತೆಗೆ ಸಮಾಜದಲ್ಲಿ ತಿಳುವಳಿಕೆ ನಡುವಳಿಕೆಯಾಗುವ ಜೀವಪರ ನಿಲುವುಗಳು ಮುಖ್ಯ ಆದ್ದರಿಂದ ರಾಮರಾಜ್ಯದ ಕೆಲವು ಆದರ್ಶಗಳೇ ಭೀಮ ರಾಜ್ಯದ ಸುಧಾರಿತ ತತ್ವಗಳು. ಅಂದರೆ ಸಂವಿಧಾನ. ಈಗ ಅದನ್ನೇ ಸಮನ್ವಯ ಸಾಧಿಸಿ ದೇಶವನ್ನು ಮುನ್ನಡೆಸಬೇಕೆ ಹೊರತು ಕೇವಲ ಧರ್ಮಧ್ವಜ ಭಾವನಾತ್ಮಕ ನಡೆಯೇ ಹೊರತು ಹೆಚ್ಚೇನು ಅಲ್ಲ…..
ಮೊದಲೇ ಹೇಳಿದಂತೆ ಹಸಿರು ಧ್ವಜದ ಇಸ್ಲಾಮೀಕರಣ, ಭಗವಾಧ್ವಜದ ಕೇಸರೀಕರಣಕ್ಕೆ ತ್ರಿವರ್ಣ ಧ್ವಜದ ಭಾರತೀಕರಣವೇ ಉತ್ತರವಾಗಬೇಕು. ಆಗ ಮಾತ್ರ ಭಾರತ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ. ಬಹುತ್ವ ಭಾರತವೇ ಬಲಿಷ್ಠ ಭಾರತ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ