ರಾಮನಗರ, ಕನಕಪುರಕ್ಕೆ ಮಾತ್ರ ಡಿಕೆಶಿ ಸಿಎಂ – ಆರ್. ಅಶೋಕ್: ‘ಕೈ’ ಸರ್ಕಾರ ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡು ಅಧಿಕಾರ ನಡೆಸುತ್ತಿದೆ – ಬಿ.ವೈ ವಿಜಯೇಂದ್ರ ಆರೋಪ

ದೊಡ್ಡಬಳ್ಳಾಪುರ: ಕನಕಪುರದಲ್ಲಿ ಮಾತ್ರ ರೈತರಿಗೆ ಭೂಮಿಯನ್ನು ಮಾರಾಟ ಮಾಡಬೇಡಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಆದರೆ ಬಿಡದಿ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧೆಡೆ ರೈತರ ಜಮೀನುಗಳನ್ನು ಕೆಐಎಡಿಬಿ ಮೂಲಕ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತರು, ಬಡವರ ಬಗ್ಗೆ ಕಾಳಜಿಯೇ ಇಲ್ಲ. ಕೇವಲ ರಿಯಲ್ ಎಸ್ಟೇಟ್ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶಾಸಕ ಧೀರಜ್ ಮುನಿರಾಜ್ ನಿವಾಸದ ಬಳಿ ಶನಿವಾರ ಆಯೋಜಿಸಿದ್ದ ರೈತ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೈತರಿಂದ ಕಳೆದ 2 ವರ್ಷಗಳಲ್ಲಿ 10 ಸಾವಿರ ಎಕರೆ ಭೂಮಿಯನ್ನು ಕಸಿದುಕೊಂಡಿದ್ದಾರೆ. ರೈತರ ಬಗ್ಗೆ ಕನಿಕರ ಇಲ್ಲ. ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡು ಅಧಿಕಾರ ನಡೆಸುತ್ತಿದ್ದಾರೆ. ರೈತರು ಹೊಲಕ್ಕೆ ಟ್ರಾನ್ಸ್ ಫಾರ್ಮರ್ ಹಾಕಿಸಿಕೊಳ್ಳಲು ಬಿಜೆಪಿ ಸರ್ಕಾರದಲ್ಲಿ 25 ಸಾವಿರ ಇತ್ತು. ಈಗ ಎರಡೂವರೆ ಲಕ್ಷ ಹಣ ಮತ್ತು ಲಂಚ ನೀಡಬೇಕಿದೆ. ರೈತರಿಗೆ ರಾತ್ರಿ ವೇಳೆ ಕರೆಂಟ್ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬದುಕಿದ್ದು ಸತ್ತಂತೆ ಆಗಿದೆ. ನಾವು ಪಾದಯಾತ್ರೆ ಮಾಡಿ ಪ್ರತಿ ಹೆಕ್ಟರ್ ಭೂಮಿಗೆ 50 ಸಾವಿರ ಕೊಡಬೇಕು ಎಂದು ಒತ್ತಾಯ ಮಾಡಲಾಗಿತ್ತು. ಆದರೆ ಸರ್ಕಾರ ರೈತರ ಪರ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಕೇವಲ ಎರಡೂವರೆ ಸಾವಿರ ಬಿಡಿಗಾಸು ಹಣವನ್ನು ಘೋಷಿಸಿದ್ದಾರೆ ಎಂದರು.

ಶಾಸಕ ಧೀರಜ್ ಕಾರ್ಯ ಶ್ಲಾಘನೀಯ:

ಈ ನಾಡಿಗೆ ಅನ್ನ ನೀಡುವ ರೈತರ ಬದುಕು ಹಸನಾಗಲಿ ಎಂಬ ಉದ್ದೇಶದಿಂದ ರೈತ ಸ್ಪಂದನ ಕಾರ್ಯಕ್ರಮ ಆಯೋಜಿಸಿರುವ ಶಾಸಕ ಧೀರಜ್ ಮುನಿರಾಜ್ ಅವರ ಕಾರ್ಯ ಶ್ಲಾಘನೀಯ. ರಾಜ್ಯದ ಯಾವುದೇ ಶಾಸಕರು ಮಾಡದ ಕೆಲಸವನ್ನು ಧೀರಜ್ ಮುನಿರಾಜ್ ಮಾಡಿದ್ದಾರೆ.

ಯೋಧರು ಮತ್ತು ರೈತರು ದೇಶದ ಎರಡು ಕಣ್ಣುಗಳಿದ್ದಂತೆ. ಅವರ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಶಾಸಕ ಧೀರಜ್ ಮುನಿರಾಜ್ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಮುಖ್ಯಮಂತ್ರಿಯಾಗಿದ್ದು, ತಮ್ಮ ಆಡಳಿತಾವಧಿಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಬಸವರಾಜ ಬೊಮ್ಮಾಯಿ ಸರ್ಕಾರ ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರೆಯುವಂತೆ ಕ್ರಮ ಕೈಗೊಂಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷ ರೈತರ ಖಾತೆಗಳಿಗೆ ರೂ. 6,000 ನೇರವಾಗಿ ಜಮೆ ಮಾಡಲಾಗುತ್ತಿದೆ. ಈವರೆಗೆ 23 ಕಂತುಗಳಲ್ಲಿ ರೈತರಿಗೆ ನೆರವು ನೀಡಲಾಗಿದೆ. 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತಿದೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರದ ಯೋಜನೆಗಳಿಗೆ ಅಡ್ಡಿಪಡಿಸಲು ಯತ್ನಿಸುತ್ತಿದ್ದು, ರೈತರ ಪರವಾಗಿ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸದೆ ಕಾಲಹರಣ ಮಾಡುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭೀಕರ ನೆರೆಯಿಂದಾಗಿ ಮನೆ ಕಳೆದುಕೊಂಡವರಿಗೆ ರೂ.5 ಲಕ್ಷ ಪರಿಹಾರ ನೀಡಲಾಗಿತ್ತು. ಈಗಿನ ಸರ್ಕಾರ ಬಡವರಿಗೆ ನಿವೇಶನ ನೀಡುತ್ತಿಲ್ಲ. ವಿಕಲಚೇತನರು, ವೃದ್ಧರು ಹಾಗೂ ವಿಧವೆಯರಿಗೆ ಪಿಂಚಣಿ ನೀಡುವಲ್ಲಿಯೂ ವಿಫಲವಾಗಿದೆ. ವೀರ ಯೋಧರಿಗೆ ಗೌರವಧನ ನೀಡುತ್ತಿಲ್ಲ. ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಿಂದ ರಾಜ್ಯದ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.

ರೈತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲ – ಆರ್. ಅಶೋಕ್

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಶಾಸಕ ಧೀರಜ್ ಮುನಿರಾಜ್ ರೈತರಿಗಾಗಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಇಲ್ಲಿ ಮಾಡೋಕು ಬಿಡಲ್ಲ. ಮಾಡೋದು ಇಲ್ಲ.. ಇದು ಕೇಂದ್ರದ ಸರ್ಕಾರದ ಯೋಜನೆ. ಅಪಪ್ರಚಾರ ಮಾಡಿಕೊಂಡು, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಡ್ಡಿಪಡಿಸಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಧೀರಜ್ ಕಾರ್ಯಕ್ಕೆ ಅಡ್ಡಿಪಡಿಸಿ, ಟೀಕೆ ಮಾಡುವವರು ಮೊದಲು ರೈತರ ಪರವಾಗಿ ಕೆಲಸ ಮಾಡಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ಸವಾಲು ಹಾಕಿದರು.

ಇದು ಫಸಲ್ ಬಿಮಾ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮವಾಗಿದ್ದು, ಇದರಲ್ಲಿ ಕಾಂಗ್ರೆಸ್ ನಾಯಕರ ಪಾತ್ರವೇನು ಎಂದು ಪ್ರಶ್ನಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿಎಂ ಡಿ.ಕೆ. ಶಿವಕುಮಾರ್ ಅವರ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಡಿ.ಕೆ. ಶಿವಕುಮಾರ್ ಕನಕಪುರ ಮತ್ತು ರಾಮನಗರಕ್ಕೆ ಮಾತ್ರ ಸೀಮಿತವಾದ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ಬಿಡದಿಯಲ್ಲಿ ಭೂಸ್ವಾಧೀನಕ್ಕೆ ಎಕರೆಗೆ ರೂ. 3 ಕೋಟಿ ಪರಿಹಾರ ನೀಡಲಾಗುತ್ತಿದೆ ಎನ್ನಲಾಗುತ್ತಿದ್ದರೆ, ವಿಧಾನಸೌಧಕ್ಕೆ ಸಮೀಪದಲ್ಲಿರುವ ದೊಡ್ಡಬಳ್ಳಾಪುರದಲ್ಲಿ ಎಕರೆಗೆ ಕೇವಲ ರೂ. 1.70 ಕೋಟಿ ಪರಿಹಾರ ನೀಡಲಾಗುತ್ತಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವಾಗ ಸಮಾನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ರೈತರ ಸಮಸ್ಯೆಗಳಿಗಿಂತ ಸಿಡಿ ಮತ್ತು ಸ್ಟಿಂಗ್ ಆಪರೇಷನ್ ಸುದ್ದಿಗಳೇ ಹೆಚ್ಚಾಗಿ ಚರ್ಚೆಯಾಗುತ್ತಿವೆ. ರೈತರ ಸಮಸ್ಯೆಗಳಿಗೆ ಆದ್ಯತೆ ನೀಡುವವರೇ ಇಲ್ಲದಂತಾಗಿದೆ. ಕರ್ನಾಟಕದಲ್ಲಿ 3,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ದೇಶದಲ್ಲೇ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂದು ಅವರು ಆರೋಪಿಸಿದರು.

ಸ್ಟಿಂಗ್ ಆಪರೇಷನ್ ನಡೆದಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ತಾವು ತಪ್ಪು ಮಾಡಿಲ್ಲ, ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ನವರೇ ಪರಸ್ಪರ ಸ್ಟಿಂಗ್ ಆಪರೇಷನ್‌ಗಳಲ್ಲಿ ತೊಡಗಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಮುಂದಿನ ಬಜೆಟ್‌ಗೆ ಮತ್ತಷ್ಟು ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದ್ದು, ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಆರೋಪಿಸಿದ ಆರ್. ಅಶೋಕ್, ಕಾಂಗ್ರೆಸ್ ಪಕ್ಷದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು.

ಕೈಲಾಗದವ ಮೈಪರಚಿಕೊಂಡಂತೆ ಅಧಿಕಾರಿಗಳ ಮೂಲಕ ಕಿರುಕುಳ – ಶಾಸಕ ಧೀರಜ್ ಆರೋಪ

ಬರ ಪರಿಸ್ಥಿತಿಯಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ಫಸಲ್ ಭೀಮಾ ಯೋಜನೆಯಡಿ ತಾಲೂಕಿನ ರೈತರ ವಿಮೆಗಾಗಿ ಒಟ್ಟು 30.70 ಲಕ್ಷ ಪಾವತಿಸಿದ್ದೇನೆ ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದರು.

ಒಂದು ಎಕರೆಗೆ ರೂ. 450 ಪ್ರಿಮಿಯಂ ಹಣ ಪಾವತಿಸಿದರೆ ಫಸಲ್ ಭೀಮಾ ಯೋಜನೆಯಡಿ ರೈತರಿಗೆ 22 ಸಾವಿರದವರೆಗೆ ಪರಿಹಾರ ದೊರೆಯುತ್ತದೆ. ಆದರೆ ಬರದಿಂದ ಕಂಗೆಟ್ಟಿರುವ ರೈತರು ಪ್ರಿಮೀಯಂ ಹಣ ಕಟ್ಟಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ರೈತರ ಪರ ನಿಲ್ಲಲು ನಿರ್ಧರಿಸಿ, ರೈತರು ಪಾವತಿಸಬೇಕಾದ ಪ್ರಿಮೀಯಂ ಮೊತ್ತವನ್ನು ಸರ್ಕಾರವೇ ಭರಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಪತ್ರ ಬರೆದಿದ್ದೆ. ಆದರೆ, ಅಲ್ಲಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ನಾನೇ ರೈತರ ಹಣ ಪಾವತಿಸಲು ನಿರ್ಧರಿಸಿ ಒಟ್ಟು 30.70 ಲಕ್ಷ ಪಾವತಿಸಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ನನ್ನ ಬಳಿ ಇವೆ ಎಂದು ಹೇಳಿದರು.

ತಾಲೂಕಿನಲ್ಲಿ ರಾಗಿ ಬೆಳೆಗಾರರ ಸಂಖ್ಯೆ ಹೆಚ್ಚಾಗಿದೆ. ಒಂದು ಎಕರೆ ರಾಗಿ ಬೆಳೆಯಲು ಸುಮಾರು 20 ಸಾವಿರ ವೆಚ್ಚವಾಗುತ್ತದೆ. ಆದರೆ, ಬೆಳೆ ನಷ್ಟವಾದಾಗ ಸರ್ಕಾರ ನೀಡುವ ಪರಿಹಾರಧನ ರೈತರಿಗೆ ಸಾಕಾಗುತ್ತಿಲ್ಲ. ಪ್ರಸ್ತುತ ಸುಮಾರು 9 ಸಾವಿರ ರೈತರು ಫಸಲ್ ಭೀಮಾ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.

ರೈತ ಜನಸ್ಪಂದನ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಪ್ರಯತ್ನ:

ರೈತ ಸ್ಪಂದನ ಕಾರ್ಯಕ್ರಮಕ್ಕೆ ಕೆಲವರು ಅಡ್ಡಿಪಡಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ ಶಾಸಕ ಧೀರಜ್ ಮುನಿರಾಜ್, ಕೃಷಿ ಸಚಿವರ ನೇತೃತ್ವದಲ್ಲೇ ಕಾರ್ಯಕ್ರಮ ನಡೆಯಬೇಕೆಂದು ಕೆಲ ಅಧಿಕಾರಿಗಳ  ಮೇಲೆ ದೂರವಾಣಿ ಮೂಲಕ ಒತ್ತಡ ಹೇರಲಾಗಿದೆ. ಸ್ಥಳೀಯ ಕಾಂಗ್ರೆಸ್ ನಾಯಕರು ಕಾರ್ಯಕ್ರಮ ರದ್ದುಗೊಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ನಾಯಕರಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಗ್ಯತೆ ಇಲ್ಲ ಎಂದು ಟೀಕಿಸಿದ ಅವರು, ತಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಡ್ಡಿಪಡಿಸಲಾಗುತ್ತಿದೆ. ಸೋತಿರುವವರು ಗೆಲ್ಲಲು ಸಾಧ್ಯವಾಗದೆ ತನಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಡಾ.ಕೆ ಸುಧಾಕರ್, ಶಾಸಕ ಎಸ್.ಆರ್ ವಿಶ್ವನಾಥ, ಬಮುಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್, ಎಂಎಲ್ಸಿ ರಘು ಕೌಟಿಲ್ಯ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಅಧ್ಯಕ್ಷ ಪ್ರೇಮ್ ಕುಮಾರ್,  ಮಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣ, ತಾಲ್ಲೂಕು ಅಧ್ಯಕ್ಷ ನಾಗೇಶ್, ನಗರಾಧ್ಯಕ್ಷ ಮುದ್ದಪ್ಪ ಮತ್ತಿತ್ತರರು ಇದ್ದರು.

Ramesh Babu

Journalist

Recent Posts

ದೊಡ್ಡಬಳ್ಳಾಪುರ: ಕಾರು–ಬೈಕ್ ಭೀಕರ ಅಪಘಾತ; ದಂಪತಿ ಸಾವು

ದೊಡ್ಡಬಳ್ಳಾಪುರ: ನಾಗಸಂದ್ರ ಸಮೀಪದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದಂಪತಿ…

8 hours ago

ಮಂಕುಹಿಡಿದ ‘ಮಾಂಗಲ್ಯ ಭಾಗ್ಯ’ ಯೋಜನೆ: ಬಡ ಜೋಡಿಗಳ ಪಾಲಿಗೆ ಮರೀಚಿಕೆಯಾದ ಮಾಂಗಲ್ಯ ಭಾಗ್ಯ ಕಾರ್ಯಕ್ರಮ

ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮದುವೆ ವೆಚ್ಚದ ಹೊರೆಯನ್ನು ತಗ್ಗಿಸಿ, ಆರ್ಥಿಕವಾಗಿ ಹಿಂದುಳಿದ ವಧು-ವರರಿಗೆ ಆಸರೆಯಾಗಿದ್ದ ರಾಜ್ಯ ಸರ್ಕಾರದ…

9 hours ago

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುಮಾರು 8.38 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆ ನಡೆಸಿ, ಥಾಯ್ಲೆಂಡ್‌, ಬ್ಯಾಂಕಾಕ್‌ನಿಂದ…

20 hours ago

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ:ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.95.94 ರಷ್ಟು ಮತದಾನ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯ ಮತದಾನ ಪ್ರಕ್ರಿಯೆ ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆದಿದ್ದು, ಶೇಕಡ…

22 hours ago

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗೆ ಗೆಲುವಿನ ವಿಶ್ವಾಸ: ಕೆಸ್ತೂರು ರಮೇಶ್

ದೊಡ್ಡಬಳ್ಳಾಪುರ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಎ.ಪಿ. ರಂಗನಾಥ್ ಸ್ಪರ್ಧಿಸಿದ್ದು, ಅವರ ಪರವಾಗಿ ಎನ್‌ಡಿಎ ನಾಯಕರು, ಮುಖಂಡರು…

1 day ago

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ-2026 *ಮಧ್ಯಾಹ್ನ 12 ಗಂಟೆಯವಗೆ ಶೇ. 41.16 ರಷ್ಟು ಮತದಾನ

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಕಾರ್ಯವು ಜಿಲ್ಲೆಯ 06 ಮತಗಟ್ಟೆಗಳಲ್ಲಿ ಸುಗಮವಾಗಿ ನಡೆಯುತ್ತಿದ್ದು ಅಪರಾಹ್ನ 12 ಗಂಟೆಯವರೆಗೆ ಶೇ.…

1 day ago