ರಾತ್ರೋರಾತ್ರಿ ಬೆಳ್ಳೂರು ಕೆರೆಗೆ ಕಣ್ಣಾಕಿದ ರಿಯಲ್ ಎಸ್ಟೇಟ್ ಮಾಫೀಯಾ: ಸ್ಥಳಕ್ಕೆ ತಹಶಿಲ್ದಾರ್ ಹರ್ಷವರ್ಧನ್, ಆರ್.ಐ ಲೋಕೇಶ್ ಭೇಟಿ ಪರಿಶೀಲನೆ

ಕೋಲಾರ: ತಾಲೂಕಿನ ನರಸಾಪುರ ಕೆರೆಯ ಪಕ್ಕದ ರಾಷ್ಟ್ರೀಯ ಹೆದ್ದಾರಿ 75 ನಲ್ಲಿರುವ ಸರ್ವೆ ನಂ 257 ರಲ್ಲಿನ ಬೆಳ್ಳೂರು ಕೆರೆಯನ್ನು ಭೂಗಳ್ಳರು ಬಂಡವಾಳಗಾರರು ರಾತ್ರೋರಾತ್ರಿ ಮಣ್ಣು ಹೊಡಿಸಿ ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದು ಕೂಡಲೇ ತೆರೆವುಗೊಳಿಸಬೇಕು ಎಂದು ಜೆಡಿಎಸ್‌ ಯುವ ಮುಖಂಡ ಖಾಜಿಕಲ್ಲಹಳ್ಳಿ ಹರೀಷ್ ಗೌಡ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಪ್ರಮುಖವಾಗಿರುವ ನರಸಾಪುರ ಹೋಬಳಿಯಲ್ಲಿ ಕೈಗಾರಿಕೆಗಳು ಬಂದಿರುವುದರಿಂದ ಇಲ್ಲಿನ ಜಮೀನುಗಳ‌ ಬೆಲೆ ಗಗನಕ್ಕೇರಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ರಿಯಲ್ ಎಸ್ಟೇಟ್ ನವರು ಸರ್ಕಾರಿ ಕೆರೆ, ಕುಂಟೆ, ಗೋಮಾಳಗಳನ್ನ ಒತ್ತುವರಿ ಮಾಡಿಕೊಳ್ಳುವುದು ಅಲ್ಲದೆ ಅದಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರೂ ಕೂಡ ಸಂಬಂಧ ಪಟ್ಡ ಅಧಿಕಾರಿಗಳು ಇತ್ತ ತಲೆ ಹಾಕುತ್ತಿಲ್ಲ, ಇದನ್ನ ನೋಡಿದರೆ ಅಧಿಕಾರಿಗಳು ಕೂಡ ಇವರ ಜೊತೆಗೆ ಶಾಮೀಲಾಗಿದ್ದಾರೆ ಎಂದು ಅನುಮಾನ ಮೂಡುತ್ತಿದೆ ಎಂದು ಹರೀಶ್ ಗೌಡ ಹೇಳಿದ್ದಾರೆ.

ಭೂಗಳ್ಳರ ಮತ್ತು ಪ್ರಭಾವಗಳಿಂದ ಸರಕಾರಿ ಜಮೀನುಗಳನ್ನು ಒತ್ತುವರಿಗಳು ನಡೆಯುತ್ತಲೇ ಇದೆ ಅವುಗಳಿಗೆ ಕಡಿವಾಣ ಹಾಕದೇ ಇದ್ದ ಪರಿಣಾಮವಾಗಿ ಬೆಳ್ಳೂರು ಕೆರೆಯನ್ನು ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್ ಮುಖಂಡರು ಒಬ್ಬರು ರಾತ್ರೋರಾತ್ರಿ ಹೊರಗಡೆಯಿಂದ ಲಾರಿಗಳ ಮೂಲಕ ಮಣ್ಣು ತಂದು ಕೆರೆಯನ್ನು ಒತ್ತುವರಿ ಮಾಡಿಕೊಳ್ಳಲು ಹೊರಟಿದ್ದಾರೆ. ಇದನ್ನು ಕಂಡು ಕಾಣದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯಿತಿ ಯ ಅಧಿಕಾರಿಗಳು ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಮೊದಲೇ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಪ್ರದೇಶಗಳು ಎಂದು ಗುರುತಿಸಲಾಗಿದೆ. ಮಳೆಯ ಪ್ರಮಾಣವು ಕಡಿಮೆ ಇದ್ದು ಇಂತಹ ಸನ್ನಿವೇಶದಲ್ಲಿ ಕೆರೆಗಳ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಪ್ರಯತ್ನವನ್ನು ಅಧಿಕಾರಿಗಳು ಜನಪ್ರತಿನಿಧಿಗಳು ಮಾಡಬೇಕಾಗಿದೆ. ಆದರೆ ಇರುವ ಕೆರೆಗಳನ್ನು ಹಣದ ಆಸೆಗಾಗಿ ಮುಚ್ಚಲು ಹೊರಟಿದ್ದಾರೆ ದಿನನಿತ್ಯ ಕೋಲಾರದ ಜಿಲ್ಲಾ ಮಟ್ಟದ ಅಧಿಕಾರಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ ಆದರೆ ಕೆರೆ ಒತ್ತುವರಿಯಾಗಿರುವ ಬಗ್ಗೆ ಗಮನಕ್ಕೆ ಬಂದರೂ ಒತ್ತುವರಿಯ ಬಗ್ಗೆ ಯಾರು ಒಬ್ಬ ಅಧಿಕಾರಿಯೂ ಪ್ರಶ್ನೆ ಮಾಡುತ್ತಿಲಗಲ ಇಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಜಿಲ್ಲಾಡಳಿತವು ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಬೆಳ್ಳೂರು ಕೆರೆಯಲ್ಲಿನ ಒತ್ತುವರಿಯನ್ನು ತೆರೆವುಗೊಳಿಸಿ ಈ ಒತ್ತುವರಿದಾರರಾದ ಭೂಗಳ್ಳರ ವಿರುದ್ದ ಕ್ರಮಕೈಗೊಂಡು ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ನೀಡಬೇಕಾಗಿದೆ ಎಂದು ಜೆಡಿಎಸ್‌ ಯುವ ಮುಖಂಡ ಖಾಜಿಕಲ್ಲಹಳ್ಳಿ ಹರೀಶ್ ಗೌಡ ಒತ್ತಾಯಿಸಿದರು

ಸ್ಥಳೀಯರ ದೂರಿನ ಮೇರೆಗೆ ಗುರುವಾರ ಮಧ್ಯರಾತ್ರಿ ನರಸಾಪುರ ಆರ್.ಐ ಲೋಕೇಶ್ ಬಂದು ನೋಡಿದಾಗ ಟೆಪ್ಪರ್ ಗಳು ಮೂಲಕ ಕೆರೆ‌ಮುಚ್ಚುತ್ತಿರುವುದನ್ನ ಗಮನಿಸಿದ್ದಾರೆ. ಒತ್ತುವರಿದಾರಿಗೆ ಎಚ್ಚರಿಕೆ ಕೊಟ್ಟಿದ್ದು ಅಲ್ಲದೆ ಜಮೀನಿನ ದಾಖಲೆಗಳನ್ನು ತಂದು ತೋರಿಸುವಂತೆ ಸೂಚನೆಕೊಟ್ಟು ಟಿಪ್ಪರ್ ಲಾರಿಗಳನ್ನ ವಾಪಸ್ ಕಳುಹಿಸಿದ್ದಾರೆ. ಅಲ್ಲದೆ ಕೆರೆಯನ್ನ ಒತ್ತುವರಿ ಮಾಡುತ್ತಿರುವವರ ಬಗ್ಗೆ ತಹಶಿಲ್ದಾರ್ ಅವರಿಗೆ ವರದಿ ನೀಡಲಾಗುತ್ತದೆ ಎಂದು ಹೇಳಿದರು.

ಗುರುವಾರ ಮಧ್ಯಾಹ್ನ ಬೆಳ್ಳೂರು ಕೆರೆಗೆ ಭೇಟಿ ನೀಡಿದ್ದ ತಹಶಿಲ್ದಾರ್ ಹರ್ಷವರ್ಧನ್ ಅವರು ಕೆರೆಯಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡುತ್ತಿರುವುದನ್ನ ಗಮನಿಸಿದ್ದು ಅಲ್ಲದೆ ಸಣ್ಣನೀರಾವರಿ ಮತ್ತು ಜಿಲ್ಲಾ ಪಂಚಾಯತಿಗೆ ಮಾಹಿತಿ ಕೊಟ್ಟು ಒತ್ತುವರಿದಾರ ವಿರುದ್ದ ಕ್ರಮಕ್ಕೆ ತೆಗೆದುಕೊಳ್ಳುವಂತೆ ನರಸಾಪುರ ಆರ್.ಐ ಲೋಕೇಶ್ ಅವರಿಗೆ ಸೂಚಿಸಿದರು.

ಕೆರೆ ಒತ್ತುವರಿ ಮಾಡಿಕೊಳ್ಳಲು ಮುಂದಾಗುವ ವ್ಯಕ್ತಿಯ ವಿರುದ್ದ ಕ್ರಮ ತೆಗೆದುಕೊಂಡು ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಮುಖಂಡ ರಾಮಸಂದ್ರ ತಿರುಮಲೇಶ್, ನರಸಾಪುರ ಕೆಇಬಿ ಚಂದ್ರು, ರೈತ ಮುಖಂಡರಾದ ರಾಮು ಶಿವಣ್ಣ, ಜಿ ನಾರಾಯಣಸ್ವಾಮಿ, ದಿನ್ನೇಹೊಸಹಳ್ಳಿ ಶಶಿ, ಜೋಡಿಕೃಷ್ಣಾಪುರ ಶ್ರೀನಿವಾಸ್, ಮುಂತಾದವರು ಇದ್ದರು.

Leave a Reply

Your email address will not be published. Required fields are marked *