ರಾತ್ರಿ ವೇಳೆ ಎಲ್ಲೆಂದರಲ್ಲಿ ಕಾರು, ಬೈಕ್ ನಿಲ್ಲಿಸಬೇಡಿ:  ಚಿನ್ನಾಭರಣ, ನಗದು ದೋಚಲು ಕಳ್ಳಕಾಕರು ಹೊಂಚಾಕಿ ಕಾದು ಕುಳಿತಿರುತ್ತಾರೆ…. ಹುಷಾರ್….!

ಜೂ.7ರ ಮುಂಜಾನೆ 2ಗಂಟೆ ಸುಮಾರಿನಲ್ಲಿ ಬೆಂಗಳೂರಿನಿಂದ ದೇವನಹಳ್ಳಿ‌ ಮಾರ್ಗವಾಗಿ ನಂದಿ ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಕಾರನ್ನು ರಸ್ತೆ ಪಕ್ಕ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿ ಮೇಲೆ ಮೂವರು ದುಷ್ಕರ್ಮಿಗಳು ಅಟ್ಯಾಕ್ ಮಾಡಿ, ವ್ಯಕ್ತಿಯನ್ನು ಬಿಗಿಯಾಗಿ ಹಿಡಿದುಕೊಂಡು ಹಲ್ಲೆ ಮಾಡಿ, ಕತ್ತಲ್ಲಿದ್ದ 12 ಗ್ರಾಂ ತೂಕದ ಸಾದಾ ಚಿನ್ನದ ಚೈನ್, ಕಾರಿನ ಡ್ಯಾಶ್ ಬೋರ್ಡ್ ನಲ್ಲಿದ್ದ ಸುಮಾರು 4-5 ಗ್ರಾಂ ತೂಕದ ಗುಂಡಾದ ಒಂದು ಜೊತೆ ಓಲೆಗಳು, ಫೋನ್ ಪೇ ಮೂಲಕ 24,753/-ರೂ. ಗಳನ್ನು ವರ್ಗಾಯಿಸಿಕೊಂಡು ಕಾಲ್ಕಿತ್ತಿದ್ದರು.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರ ನೇತೃತ್ವದ ತಂಡ, ಖದೀಮರ ಬೆನ್ನತ್ತಿ, ತ್ವರಿತಗತಿಯಲ್ಲಿ ಕಳ್ಳರನ್ನು ಬಂಧಿಸಿ, ಕಳವು ಮಾಡಿದ್ದ ಚಿನ್ನಾಭರಣ ಹಾಗೂ ನಗದನ್ನು ವಶಕ್ಕೆ ಪಡೆದು ದೂರುದಾರನಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಪ್ರೇಮ್ ಕುಮಾರ್(24), ದುರ್ಗಪ್ರಸಾದ್(22), ಅರುಣ್(26) ಬಂಧಿತ ಆರೋಪಿಗಳು…

ಘಟನೆ ವಿವರ…..

ವ್ಯಕ್ತಿಯೋರ್ವ ಕಾರಿನಲ್ಲಿ ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಹೋಗಲು ಜೂ.6ರ ರಾತ್ರಿ ಸುಮಾರು 11:30ಕ್ಕೆ ಮನೆ ಬಿಟ್ಟು, ದೇವನಹಳ್ಳಿ ಮಾರ್ಗವಾಗಿ ಹೋಗುವ ವೇಳೆ ಅರ್ಧದಾರಿಯಲ್ಲಿ ಮೂತ್ರ ವಿಸರ್ಜನೆ ಮಾಡಲೆಂದು ನಂದಿಬೆಟ್ಟ ಇನ್ನೂ 1-2 ಕಿ.ಮೀ. ದೂರವಿರುವಾಗಲೇ ಕಾರನ್ನು ಜೂ.7ರ ಮುಂಜಾನೆ ಸುಮಾರು 2 ಗಂಟೆ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಕಣಿವೇಪುರ ಗ್ರಾಮದ ಆಕಾಶ್ ಧಮ್ ಬಿರಿಯಾನಿ ಸೆಂಟರ್ ಸಮೀಪ ರಸ್ತೆ ಪಕ್ಕದಲ್ಲಿ ಕಾರನ್ನು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿದ್ದಾರೆ. ಈ ವೇಳೆ ಯಾರೋ ಮೂವರು ದುಷ್ಕರ್ಮಿಗಳು ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ಬಂದು ಆ ವ್ಯಕ್ತಿತನ್ನು ಹಿಡಿದುಕೊಂಡು ಬೆದರಿಸಿ ಕೈಯಿಂದ ಹೊಡೆದು ಅತನ ಕತ್ತಿನಲ್ಲಿದ್ದ ಭಾವಿ ಪತ್ನಿಗೆ ಎಂದು ಖರೀದಿಸಿದ ಸುಮಾರು 12 ಗ್ರಾಂ ತೂಕದ ಸಾದಾ ಚಿನ್ನದ ಚೈನ್ ಕಿತ್ತುಕೊಂಡು, ಕಾರಿನ ಡ್ಯಾಶ್ ಬೋರ್ಡ್ ನಲ್ಲಿದ್ದ ಭಾವಿ ಪತ್ನಿಗೆ ಎಂದು ಖರೀದಿಸಿ ಇಟ್ಟಿದ್ದ ಸುಮಾರು 4-5 ಗ್ರಾಂ ತೂಕದ ಗುಂಡಾದ ಒಂದು ಜೊತೆ ಓಲೆಗಳನ್ನು ದೋಚಿ, ಇನ್ನೂ ಹೆಚ್ಚಿಗೆ ಹಣ ಕೊಡು ಇಲ್ಲದಿದ್ದರೆ ಹೊಡೆಯುವುದಾಗಿ ಬೆದರಿಕೆ ಹಾಕಿ ಆತನ ಬಳಿಯಿದ್ದ ಮೊಬೈಲ್ ನ್ನು ತೆಗೆದುಕೊಂಡು ಅದರ ಪಾಸ್ ವರ್ಡ್ ನ್ನು ದೂರುದಾರನಿಂದ ಪಡೆದುಕೊಂಡು ಮೊಬೈಲ್ ನಿಂದ ಒಂದು ಬಾರಿ ರೂ.23,000/-ರೂ. ಗಳನ್ನು ಮತ್ತೊಂದು ಬಾರಿ 1753/- ರೂ.ಗಳನ್ನು ಪೋನ್ ಪೇ ಮೂಲಕ ಒಟ್ಟು ರೂ. 24,753/-ರೂ. ಗಳನ್ನು ಅವರ ನಂಬರ್ ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಆತ ಭಯಗೊಂಡು ವಾಪಸ್ಸು ಬೆಂಗಳೂರಿಗೆ ಹೋಗಿ ಆತನ ಕುಟುಂಬದವರಿಗೆ ಕೃತ್ಯ ನಡೆದ ಬಗ್ಗೆ ಹೇಳಿ ಜೂ.8ರಂದು ದೊಡ್ಡಬಳ್ಳಾಪುರ ಠಾಣೆಗೆ ಬಂದು ದೂರು ನೀಡುದ್ದಾರೆ‌.

ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದು, ದೋಚಿದ್ದ ಚಿನ್ನಾಭರಣ, ನಗದು ಜಪ್ತಿ ಮಾಡಿಕೊಂಡು ದೂರುದಾರನಿಗೆ ವಾಪಸ್ ನೀಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ….

Leave a Reply

Your email address will not be published. Required fields are marked *

error: Content is protected !!