ರಾಜ್ಯ ಸರಕಾರದ ಮುಂಗಾರು ಬೆಳೆ ಪರಿಹಾರ ಬಿಡುಗಡೆಗೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಒತ್ತಾಯ

ಕೋಲಾರ: ರಾಜ್ಯದ ಕಾಂಗ್ರೆಸ್ ಸರಕಾರವು ಕೂಡಲೇ ರೈತರಿಗೆ 2023-24 ನೇ ಸಾಲಿನ ಬೆಳ ಪರಿಹಾರದ ಹಣವನ್ನು ರೈತರ ಖಾತೆಗೆ ಜಮೆ ಮಾಡುವಂತೆ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೊಮ್ಮನಹಳ್ಳಿ ಆರ್.ಆನಂದ್ ಮಾತನಾಡಿ, ರಾಜ್ಯದಲ್ಲಿ ಹಿಂದಿನ ವರ್ಷ ಮಳೆಯ ಕೊರತೆಯಿಂದ ಬರಗಾಲ ಸೃಷ್ಟಿಯಾಗಿದ್ದು ರೈತರು ಸೇರಿದಂತೆ ಕೃಷಿ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ರಾಜ್ಯ ಸರ್ಕಾರವು ಕೂಡಲೇ ಸಮರೋಪಾದಿಯಲ್ಲಿ ಕೆಲಸ ಮಾಡಿ ಪರಿಹಾರವನ್ನು ರೈತರಿಗೆ ನೀಡಬೇಕಾಗಿದೆ. ಈಗಾಗಲೇ ಕೇಂದ್ರ ಸರ್ಕಾರವು 3454 ಕೋಟಿ ರೂಪಾಯಿಗಳ ಬೆಳೆ ಹಾನಿ ಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದು, ರಾಜ್ಯ ಸರಕಾರವು ಬೆರಳೆಣಿಕೆಯಷ್ಟೇ ರೈತರಿಗೆ ಮಾತ್ರ ನೀಡಿದ್ದು, ಕೂಡಲೇ ಎಲ್ಲಾ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಕೇಂದ್ರ ಸರಕಾರದ ಪರಿಹಾರ ತಡವಾದ ಕಾರಣ ರಾಜ್ಯ ಸರ್ಕಾರವು 33,55,599 ಫಲಾನುಭವಿಗಳಿಗೆ ಮುಂಗಡ ರೂಪದಲ್ಲಿ ಎರಡು ಸಾವಿರ ನೀಡಿತ್ತು. ಇದಕ್ಕೆ ಸರಕಾರದ ಬೊಕ್ಕಸದಿಂದ 685 ಕೋಟಿ ಬಿಡುಗಡೆ ಮಾಡಿತ್ತು. ಯಾವಾಗ ಕೇಂದ್ರದ ಬಿಜೆಪಿ ಸರಕಾರವು 3454 ಕೋಟಿ ಬಿಡುಗಡೆ ಮಾಡುತ್ತಿದ್ದಂತೆಯೇ ರಾಜ್ಯ ಸರಕಾರದ ಮುಂಗಡವಾಗಿ ಕೊಟ್ಟಿದ್ದ ಎರಡು ಸಾವಿರ ಬಿಟ್ಟು ಉಳಿದ ಹಣವನ್ನು ಜಮೆ ಮಾಡಿದ್ದು, ರೈತರಲ್ಲಿ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಕೂಡಲೇ ರಾಜ್ಯ ಸರಕಾರ ಈ ತಾರತಮ್ಯ ನೀತಿಯನ್ನು ಸರಿಪಡಿಸಿ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ ಎಲ್ಲಾ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣವನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಜನ ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದು, ಹಾಲು ಉತ್ಪಾದಕರಿಗೆ ಸುಮಾರು ಎಂಟು ತಿಂಗಳಿಂದ ಪೋತ್ಸಾಹಧನ ಬಿಡುಗಡೆ ಮಾಡಿಲ್ಲ. ಕಳೆದ ವರ್ಷವೂ ಬರಗಾಲವಿದ್ದ ಕಾರಣ ಜಾನುವಾರುಗಳಿಗೆ ಮೇವು ಖರೀದಿಸಲು ಆಗಿರಲಿಲ್ಲ. ಮೇವಿನ ಕೊರತೆ ಹಿನ್ನೆಲೆಯಲ್ಲಿ ಮೇವಿನ ದರ ಏರಿಕೆಯಾಗಿದೆ. ಕೃಷಿ ಚಟುವಟಿಕೆ ನಡೆಯದ ಕಾರಣ ಕೃಷಿ ಕೂಲಿ ಕಾರ್ಮಿಕರಿಗೆ ಆರ್ಥಿಕ ಸಮಸ್ಯೆಯಾಗಿದೆ. ಉದ್ಯೋಗವಿಲ್ಲದ ಸ್ಥಿತಿಯಲ್ಲಿ ಜಿಲ್ಲೆಯ ಜನ ಬದುಕುವಂತಾಗಿದ್ದು ರಾಜ್ಯ ಸರಕಾರದ ಪರಿಹಾರ ಹಣವನ್ನು ನಂಬಿದ್ದು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಜೆಪಿ ಶಿವಣ್ಣ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ವಿದ್ಯುತ್‌ ಟ್ರಾನ್ಸ್‌ಫರ್ಮ್ ಬದಲಾವಣೆಗೆ ಇದ್ದ 25 ಸಾವಿರದಿಂದ ಒಂದುವರೆ ಲಕ್ಷಕ್ಕೆ ಏರಿಕೆ ಮಾಡಿದ್ದಾರೆ. ಜೊತೆಗೆ ಪ್ರತಿ ಯೂನಿಟ್ ಮೇಲೆ 8 ರೂಪಾಯಿ ಹೆಚ್ಚಳ ಮಾಡಿದ್ದು, ರೈತರಿಗೆ ಬಿತ್ತನೆ ಸಮಯದಲ್ಲಿ ರೈತರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ. ಕೃಷಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳಿಗೆ ಅನುದಾನವನ್ನು ನಿಲ್ಲಿಸಿದ್ದು ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹನುಮಪ್ಪ, ಬೆಳ್ಳಾವಿ ಸೋಮಣ್ಣ,, ಉಪಾಧ್ಯಕ್ಷರಾದ ಗೋಪಸಂದ್ರ ನಾರಾಯಣಸ್ವಾಮಿ, ಹುಣಸಿಕೋಟೆ ಶ್ರೀನಿವಾಸ್, ಸತೀಶ್ ಗೌಡ, ಖಜಾಂಚಿ ಪಿ.ವೆಂಕಟೇಶ್, ಕಾರ್ಯದರ್ಶಿ ಚಲಪತಿ ಮುಖಂಡರಾದ ಬೀಸೇಗೌಡ, ಓಹಿಲೇಶ್, ಅಗ್ರಹಾರ ರಂಗೇಶ್, ಬೈಪನಹಳ್ಳಿ ನಾರಾಯಣಸ್ವಾಮಿ, ಅಶ್ವಥ್ ಗೌಡ, ವೆಂಕಟೇಶ್ ಗೌಡ, ಪ್ರಶಾಂತ್ ಕಮಾರ್, ನಾಗರಾಜರೆಡ್ಡಿ, ಮುಂತಾದವರು ಇದ್ದರು.

Leave a Reply

Your email address will not be published. Required fields are marked *