ರಾಜ್ಯದ 16 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಸುಧಾರಣೆಗೆ ಆದ್ಯತೆ- ಸಿಎಂ ಸಿದ್ದರಾಮಯ್ಯ

ಬಹುತೇಕ ಮಕ್ಕಳು ಬಡ ಹಾಗೂ ಕೆಳ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ್ದಾರೆ. ಇವರ ಅನುಕೂಲಕ್ಕಾಗಿ ಸುಸಜ್ಜಿತ ಹಾಸ್ಟೆಲ್‌ ನಿರ್ಮಿಸುವ ಅಗತ್ಯವಿದೆ. ಈ ಹಾಸ್ಟೆಲ್‌ ನಿರ್ಮಾಣಕ್ಕೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಆಯವ್ಯಯದಲ್ಲಿ ಅನುದಾನ ಘೋಷಿಸಲಾಗಿತ್ತು. ರಾಜ್ಯದ 16 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಸುಧಾರಣೆಗೆ ಆದ್ಯತೆ ನೀಡಬೇಕು ಎಂದರು

ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಾತನಾಡಿದ ಅವರು, ವಿವಿಧ ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆಗಳು ಭಿನ್ನ ಅವಧಿಗೆ ನಡೆಯುವುದರಿಂದ ಅಭ್ಯರ್ಥಿಗಳಿಗೆ ಅನಾನುಕೂಲವಾಗುವುದರಿಂದ, ಏಕರೂಪದ ಕ್ಯಾಲೆಂಡರ್‌ ಆಫ್‌ ಇವೆಂಟ್ಸ್‌ ಜಾರಿಗೊಳಿಸಬೇಕು ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರದ ಗುಣಮಟ್ಟ ಕಾಯ್ದುಕೊಳ್ಳಲು ಬೋಧಕ ಸಿಬ್ಬಂದಿ ನೇಮಕ ಅತಿ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಬ್ಯಾಕ್‌ಲಾಗ್‌ ಹುದ್ದೆಗಳನ್ನು ಮೊದಲಿಗೆ ಭರ್ತಿ ಮಾಡಬೇಕು ಹಾಗೂ ನಂತರ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಕುರಿತು ಆದ್ಯತೆಗಳನ್ನು ಗುರುತಿಸಿ ಕ್ರಮ ವಹಿಸಬೇಕು ಎಂದು ಹೇಳಿದರು.

ಮೈಸೂರು ಮಹಾರಾಣಿ ಆರ್ಟ್ಸ್‌ ಕಾಲೇಜು ಹಾಸ್ಟೆಲ್‌ ಆವರಣದಲ್ಲಿ 99 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆರ್ಟ್ಸ್‌ ಮತ್ತು ವಿಜ್ಞಾನ ಕಾಲೇಜಿನ ತಲಾ ಸಾವಿರ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸುವ ಹಾಸ್ಟೆಲ್‌ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಈಗಾಗಲೇ ಇಲಾಖೆಯ ಬಳಿ 47 ಕೋಟಿ ರೂ. ಲಭ್ಯವಿದ್ದು ಮುಂದಿನ ವರ್ಷದ ಆಯವ್ಯಯದಲ್ಲಿ ಹೆಚ್ಚುವರಿ ಅನುದಾನ ಒದಗಿಸಲು ಸೂಕ್ತ ಕ್ರಮ ವಹಿಸಬೇಕು. ಇದಲ್ಲದೆ ಶಿಥಿಲಾವಸ್ಥೆಯಲ್ಲಿರುವ ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜಿನ ನವೀಕರಣ/ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹಣಕಾಸು ಶಿಸ್ತು, ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತಿತರ ವಿಷಯಗಳಲ್ಲಿ ಸುಧಾರಣೆ ತರುವ ಕುರಿತು ಕ್ರಮ ಕೈಗೊಳ್ಳಬೇಕು. ಉನ್ನತ ಶಿಕ್ಷಣ ಇಲಾಖೆಯಡಿ ನಿರ್ಮಿಸಿರುವ 13,169 ವಿದ್ಯಾರ್ಥಿಗಳ ಸಾಮರ್ಥ್ಯದ 224 ವಸತಿ ನಿಲಯಗಳನ್ನು ಹಸ್ತಾಂತರಿಸಿಕೊಳ್ಳಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿದ್ಧವಿದ್ದು, ಇದನ್ನು ಸಚಿವ ಸಂಪುಟದ ಮುಂದಿಡಬೇಕು ಎಂದು ಹೇಳಿದರು‌.

ಮುಂದಿನ ವರ್ಷ ಆಯವ್ಯಯ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಗುಣಮಟ್ಟ ಸುಧಾರಣೆಗೆ ಮುಂಚಿತವಾಗಿಯೇ ಸಭೆ ನಡೆಸಿ, ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಿ, ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *