ರಾಜ್ಯದ ಭೂ ದಾಖಲೆಗಳ ಡಿಜಟಲೀಕರಣ: ಜಿಲ್ಲೆಯಲ್ಲಿ 1236 ಪೋಡಿ ದುರಸ್ತಿ ಪೂರ್ಣ: ಪೋಡಿ ಅಭಿಯಾನದಲ್ಲಿ ರಾಜ್ಯಕ್ಕೆ ಬೆಂ.ಗ್ರಾ ಜಿಲ್ಲೆ ಪ್ರಥಮ- ಕಂದಾಯ ಸಚಿವ ಕೃಷ್ಣ ಬೈರೇಗೌಡ

ಕಳೆದ ಡಿಸೆಂಬರ್ ನಲ್ಲಿ ದರಖಾಸ್ತು ಪೋಡಿ ಅಭಿಯಾನ ಆರಂಭವಾಗಿ ರಾಜ್ಯದ್ಯಾಂತ ಇದುವರೆಗೂ ಅಂದಾಜು 5000 ಪೋಡಿ ದುರಸ್ತಿ ಆಗಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೂ 1236 ಪೋಡಿ ದುರಸ್ತಿ ಆಗಿದ್ದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಹೇಳಿದರು.

ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಸಮೀಪ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಕಂದಾಯ ಇಲಾಖೆ ಮತ್ತು ಭೂ ಮಾಪನ ಇಲಾಖೆಯಡಿ ಸರಳೀಕರಣವಾದ ದರಖಾಸ್ತು ಪೋಡಿ ಅಭಿಯಾನದ ವಿದ್ಯುಕ್ತ ಚಾಲನೆ ಮತ್ತು ಪೋಡಿ ದುರಸ್ತಿ/ ಹೊಸ ದಾಖಲೆ ವಿತರಣಾ ಸಮಾರಂಭವನ್ನು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಉದ್ಘಾಟಿಸಿ ಮಾತನಾಡಿದರು.

ಪೋಡಿ ದುರಸ್ತಿ ರೈತರ ಬಹುದೊಡ್ಡ ಸಮಸ್ಯೆ ಆಗಿತ್ತು. ಸರಳೀಕರಣ ಪೋಡಿ ಅಭಿಯಾನ ಕೈಗೊಳ್ಳಲು ಒಂದು ವರ್ಷಗಳ ಪೂರ್ವ ಸಿದ್ಧತೆ ನಡೆಸಿ ಕಳೆದ ಡಿಸೆಂಬರ್ ನಲ್ಲಿ ಚಾಲನೆ ನೀಡಲಾಯಿತು. ಕಳೆದ 50-60 ವರ್ಷಗಳ ಹಿಂದೆ ಮಂಜೂರಾದ ಜಮೀನುಗಳಿಗೆ ಈಗ ಪೋಡಿ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಅಂದಾಜು 50000 ರೈತರಿಗೆ ಜಮೀನು ಮಂಜೂರು ಆಗಿದ್ದು, 18000 ರೈತರ ಬಳಿ ಪೋಡಿ ದುರಸ್ತಿಗೆ ಪೂರಕ ದಾಖಲೆಗಳಿವೆ. ಜಿಲ್ಲೆಯಲ್ಲಿ ಈಗ ನಡೆಯುತ್ತಿರುವ ಪೋಡಿ ಅಭಿಯಾನದ ವೇಗ ನೋಡಿದರೆ ಕನಿಷ್ಟ 6 ತಿಂಗಳಲ್ಲಿ 18000 ರೈತರಿಗೆ ಪ್ರತ್ಯೇಕ ಪೋಡಿ ದುರಸ್ತಿ ಮಾಡಿಸಬಹುದು. ಪೂರಕ ದಾಖಲೆಗಳು ಇಲ್ಲದಿರುವ ಜಮೀನುಗಳಿಗೆ ಮಿಸ್ಸಿಂಗ್ ಕಮಿಟಿ ಮುಂದೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

*ಭೂ ದಾಖಲೆಗಳ ಡಿಜಟಲೀಕರಣ*

ಭೂ ದಾಖಲೆಗಳ ನಾಪತ್ತೆ, ಅಕ್ರಮ ವರ್ಗಾವಣೆ, ಅಕ್ರಮ ತಿದ್ದುಪಡಿ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ. ಭೂ ಸುರಕ್ಷಾ ಯೋಜನೆಯಡಿ ರಾಜ್ಯದಲ್ಲಿರುವ ಎಲ್ಲಾ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ಲೈನ್ ಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮನೆಯಲ್ಲಿ ಕೂತು ನಿಮ್ಮ ಜಮೀನುಗಳ ದಾಖಲೆಗಳನ್ನು ನೋಡಬಹುದಾಗಿದೆ. ಇದರಿಂದ ಪೋಡಿ ದುರಸ್ತಿಗೂ ಸಹಾಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಪೋಡಿ ದುರಸ್ತಿ ಆಂದೋಲನಕ್ಕೆ ಹೆಚ್ಚು ಒತ್ತು ನೀಡಿ ರಾಜ್ಯದಲ್ಲಿ ಪ್ರಥಮ ಸ್ಥಾನ ಬರಲು ಕಾಣಿಭೂತರಾದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳ, ಸರ್ವೆ ಅಧಿಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಇದೇ ವೇಗ ಕಾಪಾಡಿಕೊಂಡು ಆದಷ್ಟು ಬೇಗ 18000 ಪೋಡಿ ಗಳನ್ನು ಶೀಘ್ರ ದುರಸ್ತಿಗೊಳಿಸಿ ಎಂದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡಿ ಸಾಕಷ್ಟು ವರ್ಷಗಳು ಕಳೆದರೂ ಇದುವರೆಗೂ ಪೋಡಿ ಆಗಿರಲಿಲ್ಲ. ಈಗ ನಮ್ಮ ಸರ್ಕಾರ ಕೈಗೆತ್ತಿಕೊಂಡು ವಿಶೇಷ ಅಭಿಯಾನದ ಮೂಲಕ ದರಖಾಸ್ತು ಪೋಡಿ ದುರಸ್ತಿ ಮಾಡಲಾಗುತ್ತಿದೆ ಇದಕ್ಕಾಗಿ ಕಂದಾಯ ಸಚಿವರಿಗೆ ಧನ್ಯವಾದಗಳು.

ಬಯಲು ಸೀಮೆ ಪ್ರದೇಶಗಳಲ್ಲಿ ಸಾಕಷ್ಟು ಜೀವಂತ ಕೆರೆಗಳಿದಾವೆ ಕೆರೆಗಳಲ್ಲಿ ಮಣ್ಣು ಹೂಳೆತ್ತುವ ಕೆಲಸ ಆಗಬೇಕು. ಕೆರೆಗಳಲ್ಲಿ ಹೂಳೆತ್ತುವುದರಿಂದ ಬಾವಿ, ಕೊಳವೆ ಬಾವಿಗಳಲ್ಲಿ ನೀರು ಬಂದು ರೈತರ ಬದುಕು ಹಸನಾಗುತ್ತದೆ ಎಂದರು.

*ರೈತರ ಜಮೀನುಗಳಿಗೆ, ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಿ*

ರೈತರು ಕಚೇರಿಗೆ ಬರುವುದನ್ನು ತಪ್ಪಿಸಿ, ಸರ್ಕರ ರೈತರ ಮನೆ ಬಾಗಿಲಿಗೆ ತಲುಪಬೇಕು ಎಂಬುದು ನನ್ನ ಅಭಿಪ್ರಾಯ. ಜಿಲ್ಲಾಡಳಿತ ಬಹಳ ಉತ್ತಮ ಕೆಲಸ ಮಾಡುತ್ತಿದೆ. ಬಡವರಿಗೆ ಮನೆ, ನಿವೇಶನ ಕೊಡುವಂತಹ ಕೆಲಸ ಆಗಬೇಕು. ಸಾಕಷ್ಟು ರೈತರು ಜಮೀನುಗಳಿಗೆ ತೆರಳಲು ರಸ್ತೆ ಇಲ್ಲ, ಕನಿಷ್ಟ 10 ಗುಂಟೆ ಜಮೀನು ಇದ್ದರು ರಸ್ತೆ ಕಲ್ಪಿಸಬೇಕು. ಸ್ಮಶಾನ ಇಲ್ಲದ ಗ್ರಾಮಗಳಿಗೆ ಸ್ಮಶಾನ ಒದಗಿಸಬೇಕು. ಇವೆಲ್ಲವನ್ನೂ ಈಡೇರಿಸಿದಾಗ ಮಾತ್ರ ಪೋಡಿ ಮುಕ್ತ ಗ್ರಾಮಗಳು ಸಾಧ್ಯ. ಈ ಸಮಸ್ಯೆಗಳನ್ನು ಸಹ ಆದ್ಯತೆ ಆಗಿ ತೆಗೆದುಕೊಂಡು ಪೋಡಿ ಅಭಿಯಾನದಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

*1236 ಪೋಡಿ ದುರಸ್ತಿ ಪೂರ್ಣ: ಜಿಲ್ಲಾಧಿಕಾರಿ*

ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ ಅವರು ಮಾತನಾಡಿ ಪೋಡಿ ಮಾಡಿಸಿಕೊಳ್ಳದೇ ಹಲವು ರೈತರು ವ್ಯಾಪಾರ, ವ್ಯವಹಾರ, ಸೌಲಭ್ಯ ವಂಚಿತರಾಗುತ್ತಿದ್ದರು. ಸರ್ಕಾರವು ದರಖಾಸ್ತು ಪೋಡಿ ವಿಶೇಷ ಆಂದೋಲನ ಕೈಗೆತ್ತಿಕೊಂಡು ಹಲವು ವರ್ಷಗಳ ರೈತರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ. ಹಿಂದೆ ಪೋಡಿ ಮಾಡಲಿಕ್ಕೆ ಹಲವಾರು ಸಮಸ್ಯೆ ಬರುತ್ತಿತ್ತು ಈಗ ಅದನ್ನು ಸುಲಭ ರೀತಿಯಲ್ಲಿ ಪೋಡಿ ಮಾಡಿಸಿಕೊಳ್ಳಬಹುದಾಗಿದೆ. ಕಳೆದ ಒಂದುವರೆ ತಿಂಗಳಲ್ಲಿ ನಮ್ಮ ಜಿಲ್ಲೆಯಲ್ಲಿ 1236 ಪೋಡಿಗಳನ್ನು ಮಾಡಲಾಗಿದೆ, ಜಿಲ್ಲೆಯ 70 ಗ್ರಾಮಗಳ 90 ಸರ್ವೆ ನಂಬರ್ ಗಳಲ್ಲಿ ಸರ್ವೆ ನಡೆಸಿ ದೊಡ್ಡಬಳ್ಳಾಪುರ 304,ಹೊಸಕೋಟೆ 301, ನೆಲಮಂಗಲ 302, ದೇವನಹಳ್ಳಿ 329 ಪೋಡಿ ದುರಸ್ತಿ ಮಾಡಲಾಗಿದೆ. ಸಮರೋಪಾದಿಯಲ್ಲಿ ಕೆಲಸ ಕಾರ್ಯ ನಿರ್ವಹಿಸಿದ್ದ ಎಲ್ಲಾ ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷರು ಹಾಗೂ ಹೊಸಕೋಟೆ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ, ವಿಧಾನ ಪರಿಷತ್ತಿನ ಶಾಸಕರಾದ ರವಿ, ನೆಲಮಂಗಲ ಶಾಸಕರಾದ ಶ್ರೀನಿವಾಸ, ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಭೂ ಮಾಪನ ಇಲಾಖೆಯ ಆಯುಕ್ತರಾದ ಮಂಜುನಾಥ್, ಕಂದಾಯ ಇಲಾಖೆ ಆಯುಕ್ತರಾದ ಪೆಮ್ಮಲ ಸುನೀಲ್ ಕುಮಾರ್, ಜಿ.ಪಂ ಸಿಇಒ ಡಾ.ಕೆ.ಎನ್ ಅನುರಾಧ, ಬಯಪ ಅಧ್ಯಕ್ಷರಾದ ಶಾಂತಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ, ಜಿಲ್ಲೆಯ ಜನಪ್ರತಿನಿಧಿಗಳು, ಸ್ಥಳಿಯ ಮುಖಂಡರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Ramesh Babu

Journalist

Recent Posts

ಚಿನ್ನಾಭರಣ ಮಳಿಗೆಯಲ್ಲಿ ದರೋಡೆ….3 ಕೋಟಿ ಮೌಲ್ಯದ 140 ಕೆಜಿ ಬೆಳ್ಳಿ ಅಭರಣಗಳ ಕಳವು

ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿರುವ ಎಯು ಜ್ಯುವೆಲ್ಲರಿ ಶಾಪ್ ಗೆ ಕನ್ನ ಹಾಕಿರುವ ಕಳ್ಳರು ಸರಿಸುಮಾರು 3 ಕೋಟಿ…

3 hours ago

ಕಾಲೇಜಿನಿಂದ ಸಹೋದರನನ್ನು ಮನೆಗೆ ಕರೆದುಕೊಂಡು ಬರುವಾಗ ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ: ಬೈಕ್ ನಲ್ಲಿದ್ದ ಅಣ್ಣ ಸಾವು, ತಮ್ಮನಿಗೆ ಗಾಯ

ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯಗಳಾಗಿರುವ ಘಟನೆ ನಿನ್ನೆ…

5 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ರೌಂಡ್ಸ್​

ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಇಂದು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿನ…

6 hours ago

ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆ

ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…

22 hours ago

ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ: ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ: ಯಾವೆಲ್ಲಾ ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ…

ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…

23 hours ago

ಗೃಹಲಕ್ಷ್ಮಿ ಹಣ ಶೀಘ್ರ ಬಿಡುಗಡೆ- ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…

1 day ago