ಸ್ಕೌಟ್ ಅಂಡ್ ಗೈಡ್ ಸಂಸ್ಥೆಯೂ ರಾಜ್ಯದಲ್ಲಿ ಹಲವು ದಶಕಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳ ಜೀವನಕ್ಕೆ ಅತ್ಯಮೂಲ್ಯ ಪಾಠಗಳಾದ ಶಿಸ್ತು, ಸಮಯ ಪಾಲನೆ ಸೇರಿದಂತೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಹೀಗಾಗಿ ಸ್ಕೌಟ್ ಅಂಡ್ ಗೈಡ್ ಶಿಕ್ಷಣವನ್ನು ಮತ್ತಷ್ಟು ಗಟ್ಟಿಗಳಿಸಲು ವಿಶ್ವವಿದ್ಯಾಲಯ ಅಗತ್ಯವಾಗಿದೆ. ನಮ್ಮಲ್ಲಿ ಜಮೀನು, ಅಗತ್ಯ ಪ್ರಾದ್ಯಾಪಕರ ತಂಡ ಸಿದ್ಧವಾಗಿದೆ. ಹೀಗಾಗಿ ಸರ್ಕಾರ ನಮ್ಮ ಮನವಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸಬೇಕು ಎಂದು ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ನಗರದ ಆನಿಬೆಸೆಂಟ್ ಸ್ಕೌಟ್ ಅಂಡ್ ಗೈಡ್ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯಾದ್ಯಂತ ಎಲ್ಲಾ ಎಸ್.ಎಸ್.ಎಲ್.ಸಿ ಮತ್ತು ಪಿಯು, ಪದವಿ ಕಾಲೇಜುಗಳಲ್ಲಿ ಸ್ಕೌಟ್ ಅಂಡ್ ಗೈಡ್ ಕಡ್ಡಾಯ ಮಾಡುವಂತೆ ಸರ್ಕಾರ ಮತ್ತು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದೇವೆ. ಬಹುತೇಕ ಈಗಾಗಲೇ ಜಾರಿಯಲ್ಲಿದೆ. ಪದವಿ ಕಾಲೇಜುಗಳಲ್ಲಿ 50 ಅಂಕಗಳಿಗೆ ಸ್ಕೌಟ್ ಗೈಡ್ಸ್ ನ ಪರೀಕ್ಷೆ ಕೂಡ ನಡೆಸಲಾಗುತ್ತಿದೆ. ಸರ್ಕಾರಿ ಉದ್ಯೋಗದಲ್ಲಿ ಶೇ.5ರಷ್ಟು ಮೀಸಲಾತಿ ವ್ಯವಸ್ಥೆ ಇದೆ ಎಂದರು.
ಈ ಬಾರಿಯ ಶೈಕ್ಷಣಿಕ ವರ್ಷ ಪ್ರಾರಂವಾಗಿದೆ. ಭಾರತ್ ಸ್ಕೌಟ್ಸ್ ಅಂಡ್ ಗೈಡ್ ನಿಂದ ಆಯೋಜಿಸಿದ್ದ ಬೇಸಿಗೆ ಶಿಬಿರಗಳಲ್ಲಿ ರಾಜ್ಯಾದ್ಯಂತ ಒಂದು ಲಕ್ಷ ಮೂವತ್ತು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಕೋವಿಡ್ ಸಂಧರ್ಬದಲ್ಲಿ ಮಂದಗತಿಯಲ್ಲಿ ಸಾಗಿತ್ತು. ಇದೀಗ ಸಂಪೂರ್ಣ ವೇಗ ಪಡೆದುಕೊಂಡಿದೆ. ಬೀಜದುಂಡೆ ಮತ್ತು ಸಸಿಗಳನ್ನು ನೆಡುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲಾಗುತ್ತಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿಯಾಗಿ ಉಚಿತವಾಗಿ ಸಸಿಗಳನ್ನು ನೀಡುವಂತೆ ಮನವಿ ಮಾಡಿದ್ದೇವೆ. ಪರಿಸರದ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ನೀರು, ಗಾಳಿ, ಅಗ್ನಿ, ಬೆಳಕಿಗೆ ಸಂಬಂದಿಸಿದ ನಾಲ್ಕು ಬಗೆಯ ಆನ್ ಲೈನ್ ಕಾರ್ಯಕ್ರಮಗಳನ್ನು ಸುಮಾರು 200 ತಾಲ್ಲೂಕು ಕೇಂದ್ರಗಳಲ್ಲಿ ಆಯೋಜನೆ ಮಾಡಲಾಗಿದೆ. ಇದರಲ್ಲಿ ಸುಮಾರು 1 ಲಕ್ಷ ಮಂದಿ ಭಾಗಿಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೂಡ ನೀಡಲಾಗುತ್ತಿದೆ.
ಸಂಸ್ಥೆಯಲ್ಲಿ ಕೋವಿಡ್ ಮುನ್ನಾ 7 ಲಕ್ಷ ವಿದ್ಯಾರ್ಥಿಗಳು ಇದ್ದರು. ಕಾರಣಾಂತರಗಳಿಂದ ಸಂಖ್ಯೆ ಇಳಿಮುಖವಾಗಿದ್ದು ಈ ವರ್ಷ 8 ಲಕ್ಷ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದ್ದೇವೆ. ಇದಕ್ಕೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು. 25 ಸಾವಿರ ಶಿಕ್ಷಕರಿಗೆ ಸಂಭಾವನೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.
ಈವರೆಗೆ ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಮಾಡುವಂತ ಕೆಲಸಗಳ ಬಗ್ಗೆ ಮಕ್ಕಳಿಗೆ ತರಬೇತಿ ನೀಡಿಲ್ಲ. ಇದಕ್ಕಾಗಿ ಸ್ಕೌಟ್ ಮತ್ತು ಗೈಡ್ ನಿಂದ ಸ್ವಯಂ ಸೇವಕರನ್ನು ಈವರ್ಷದಿಂದ ತಯಾರಿಸಲಾಗುತ್ತದೆ ಎಂದರು.
ಈ ವೇಳೆ ಬೆಂಗಳೂರು ನಗರ ಸ್ಕೌಟ್ ಅಂಡ್ ಗೈಡ್ ಆಯುಕ್ತ ಎಂ.ಎ.ಖಾನ್, ಕಾರ್ಯದರ್ಶಿ ಸತೀಶ್ ಇದ್ದರು.