ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಡಿಸ್ಕೋ ಡ್ಯಾನ್ಸ್: ಎಂಪಿ ಚುನಾವಣೆಯಲ್ಲಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿರುವ ರಾಜ್ಯದ‌ ಜನತೆ- ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ ಹರೀಶ್ ಗೌಡ

ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರ ಆಶೋತ್ತರ, ಸಮಸ್ಯೆಗಳಿಗೆ ಪರಿಹರ ನೀಡುವಲ್ಲಿ ವಿಫಲವಾಗುತ್ತಿದೆ. ಕಾಂಗ್ರೆಸ್ ಸರ್ಕಾರವು ಒಂದು ರೀತಿಯಲ್ಲಿ ಡಿಸ್ಕೋ ಡ್ಯಾನ್ಸ್ ಆಡುತ್ತಿದೆ. ಅನ್ನದಾತರು ಬೆಳೆ ಬೆಳೆಯಲು ಕನಿಷ್ಠ ಎರಡು ತಾಸು ವಿದ್ಯುತ್ ಸಹ ನೀಡಲು ಸರ್ಕಾರ ಕೈಯಲ್ಲಿ ಆಗುತ್ತಿಲ್ಲ, ಉಚಿತ ಗ್ಯಾರೆಂಟಿ ಯೋಜನೆಗಳು ಜನರನ್ನ ಸೂಕ್ತ ರೀತಿಯಲ್ಲಿ ತಲುಪುತ್ತಿಲ್ಲ. ಕೇವಲ ಆರ್ಭಟದ ಅಧಿಕಾರ ನಡೆಯುತ್ತಿದೆ ಅಷ್ಟೇ, ಇದಕ್ಕೆಲ್ಲಾ ಎಂಪಿ ಚುನಾವಣೆಯಲ್ಲಿ ಜನರಿಂದ ಉತ್ತರ ಪಡೆಯಲಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ  ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ ಹರೀಶ್ ಗೌಡ ಅವರು ಕಿಡಿಕಾರಿದರು.

ನಗರದ ಗಾಣಿಗರ ಪೇಟೆಯಲ್ಲಿ ಶ್ರೀ ಮುತ್ಯಾಲಮ್ಮ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 55ನೇ ವರ್ಷದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ನಡತೆಯನ್ನ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಕುಮಾರಸ್ವಾಮಿ ಅವರು ಸಾಲಮನ್ನಾ ಮಾಡಿದ್ದಾರೆ, ಜನ ಅದನ್ನ ಗಮನಿಸಲಿಲ್ಲ, ಆದರೂ ಜನಸೇವೆ ಮಾಡುವುದನ್ನ ಯಾವುದೇ ಕಾರಣಕ್ಕೂ ನಮ್ಮ ಪಕ್ಷ ನಿಲ್ಲಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮೆಚ್ಚಿ ಎನ್ ಡಿಎ ಜೊತೆ ಜೆಡಿಎಸ್ ಮೈತ್ರಿ ಮಾಡಿಕಳ್ಳಲಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು, ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಬರ ಪರಿಸ್ಥಿತಿ ಅವಲೋಕಿಸಿ ಸರ್ಕಾರದ ವತಿಯಿಂದ ಬರ ಪರಿಹಾರ ಕೊಡಿಸುವಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದರು.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನ ತಳ ಮಟ್ಟದಿಂದ ಬಲಪಡಿಸಲು ಸತತ ಪ್ರಯತ್ನ ಮಾಡಲಾಗುವುದು, ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಸದೃಢವಾಗಿದೆ. ಇನ್ನಷ್ಟು ಗಟ್ಟಿಗೊಳಿಸಲು ಎಲ್ಲಾ‌‌ ಮುಖಂಡರು, ಕಾರ್ಯಕರ್ತರ ಜೊತೆಗೂಡಿ ಕೆಲಸ ಮಾಡಲಾಗುವುದು, ಪಕ್ಷ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

ಮಾಜಿ ಶಾಸಕರಾದ ಟಿ.ವೆಂಕಟರಮಣಯ್ಯನವರು ಈ ತಾಲೂಕಿನಲ್ಲಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಎಲ್ಲಿ ಏನು ಸಮಸ್ಯೆ ಇದೆ ಎಂಬುದು ಗೊತ್ತಿದೆ. ಅದನ್ನ ಎಲ್ಲರ ಗಮನಕ್ಕೆ ತಂದು ತಾಲೂಕಿನ ಅಭಿವೃದ್ಧಿಗೆ ಕೈಜೋಡಿಸಬೇಕು. ಕೇವಲ ಅಧಿಕಾರ ಇದ್ದರೆ ಮಾತ್ರ ತಾಲೂಕಿನ ಅಭಿವೃದ್ಧಿ ಬಗ್ಗೆ ಯೋಚನೆ‌ ಮಾಡುವುದಲ್ಲ, ಅಧಿಕಾರ ಇಲ್ಲದಿದ್ದರೂ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ಹಾಲಿ ಶಾಸಕ ಧೀರಜ್ ಮುನಿರಾಜ್ ಅವರು ಕ್ಷೇತ್ರ ಪ್ರವಾಸ ಕೈಗೊಂಡು ಬರ ಪರಿಸ್ಥಿತಿ ಪರಿಶೀಲಿಸಿ ಅಂಕಿಅಂಶಗಳನ್ನ ಸರ್ಕಾರ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸುವಲ್ಲಿ ಕೆಲಸ ನಿರ್ವಹಿಸಬೇಕು, ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಪರಿಹಾರ ನೀಡುವಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *