ರಾಜಕೀಯ ಮತ್ತು ಆಡಳಿತದಲ್ಲಿ ವಕೀಲಿಕೆ ಎಂಬ ವಾದ ಪ್ರತಿವಾದಗಳ ಮಂಕುಬೂದಿ…..

ರಾಜಕೀಯ ಮತ್ತು ಆಡಳಿತದಲ್ಲಿ ವಕೀಲಿಕೆ ಎಂಬ ವಾದ ಪ್ರತಿವಾದಗಳ ಮಂಕುಬೂದಿ…..

ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ಇವುಗಳದೇ ಪ್ರಾಬಲ್ಯ………

ವಕೀಲಿಕೆಯ ನೆರಳಲ್ಲಿ ಆರೋಪ ಪ್ರತ್ಯಾರೋಪಗಳಿಂದ ಪಲಾಯನ ಮಾಡುವ ಕುತಂತ್ರ ರಾಜಕಾರಣಕ್ಕೆ ನಾವುಗಳು ಮೂಕ ಪ್ರೇಕ್ಷಕರಾಗಿ ಸಾಕ್ಷಿಯಾಗುವ ದುರಂತ ವ್ಯವಸ್ಥೆಯಲ್ಲಿ ನಾವಿದ್ದೇವೆ.

ವಕೀಲಿಕೆ ಎಂದರೆ, ತಾವು ಮಾಡುವ ಕೆಲಸಗಳನ್ನು ದಾಖಲೆಗಳ ಸಮೇತ ನಿರೂಪಿಸುವ ಅಥವಾ ಸಮರ್ಥಿಸಿಕೊಳ್ಳುವ ಒಂದು ವಿಧಾನ. ಸಾಮಾನ್ಯವಾಗಿ ಒಳ್ಳೆಯ ಕೆಲಸಗಳಲ್ಲಿ ವಕೀಲಿಕೆಯ ಅವಶ್ಯಕತೆ ಅಷ್ಟಾಗಿ ಬರುವುದಿಲ್ಲ. ಅದನ್ನು ನಿರೂಪಿಸುವುದು ಹೆಚ್ಚು ಕಷ್ಟವಲ್ಲ. ಅದು ಸರಳವಾದ ಅರಿವಿಗೆ ನಿಲುಕುತ್ತದೆ.

ಆದರೆ ನಿಜವಾದ ವಕೀಲಿಕೆಯ ಉಪಯೋಗ ಇರುವುದು ತಪ್ಪುಗಳನ್ನು ಕಾನೂನಿನ ರೀತಿಯಲ್ಲಿ ಸರಿ ಎಂದು ನಿರೂಪಿಸಬೇಕಾದ ಅನಿವಾರ್ಯತೆ ಉಂಟಾದಾಗ ಅಥವಾ ಆರೋಪಗಳು ಕೇಳಿಬಂದಾಗ. ಆಗ ವಕೀಲಿಕೆಯ ಅಂಶಗಳು ನೆರವಿಗೆ ಬರುತ್ತದೆ. ದಾಖಲೆಗಳು, ಸಾಕ್ಷಿಗಳು, ಅಂಕಿಅಂಶಗಳು, ಮಾತುಗಳ ಚಾಣಾಕ್ಯತೆ, ಸಾಂದರ್ಭಿಕ ಘಟನೆಗಳ ತಿರುಚುವಿಕೆ ಮುಂತಾದ ವಿಧಾನಗಳು ಸಾಮಾನ್ಯವಾಗಿ ಅಪರಾಧಿಗಳಿಗೆ ಅನುಕೂಲಕರವಾಗಿಯೇ ಇರುತ್ತದೆ. ಇದರ ಲಾಭವನ್ನು ನಮ್ಮನ್ನು ಆಳುತ್ತಿರುವ ಎಲ್ಲರೂ ಎಗ್ಗಿಲ್ಲದೆ ಪಡೆಯುತ್ತಿದ್ದಾರೆ.

ದೆಹಲಿಯಲ್ಲಿ ನಡೆದ ಅತ್ಯಂತ ಭೀಕರ ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲೂ ಅಪರಾಧಿಗಳ ಪರ ವಕೀಲರು ಅವರನ್ನು ನಿರಪರಾಧಿಗಳು ಎಂದೇ ಅನೇಕ ಕಾರಣಗಳನ್ನು ನೀಡಿ ಸಮರ್ಥಿಸಿದರು. ಮುಂಬಯಿ ಸ್ಪೋಟದ ಅಪರಾಧಿ‌ ಕಸಬ್ ಪರವಾಗಿ ಸಹ ವಕೀಲಿಕೆಯಲ್ಲಿ ಆತನನ್ನು ಆರೋಪ ಮುಕ್ತಗೊಳಿಸುವ ವಾದಗಳನ್ನು ಮಂಡಿಸಲಾಯಿತು. ಎಲ್ಲೋ ಕೆಲವು ಅಪರೂಪದ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗುತ್ತದೆ.

ಆದರೆ ದೇಶದ ಬಹುತೇಕ ಎಲ್ಲಾ ಪ್ರಕಾರದ ಅಪರಾಧಗಳು ಸಾಬೀತಾಗದೆ ಸಾಕ್ಷ್ಯಗಳ ಕೊರತೆ ಮತ್ತು ತಿರುಚುವಿಕೆಯಿಂದ ಯಾವುದೇ ಶಿಕ್ಷೆ ಇಲ್ಲದೇ ಖುಲಾಸೆಯಾಗುವುದೇ ಹೆಚ್ಚು. ಅದರಲ್ಲೂ ಆರ್ಥಿಕ ಅಪರಾಧಗಳಿಗೆ ಶಿಕ್ಷೆ ಅತ್ಯಂತ ಕಡಿಮೆ.

ದಾಖಲೆಗಳು ಕೂಡ ಸತ್ಯವನ್ನು ಹೇಳುವುದಿಲ್ಲ. ಆ ದಾಖಲೆಗಳನ್ನೇ ಉಪಯೋಗಿಸಿಕೊಂಡು ಅಪರಾಧಿಗಳು ಬಚಾವಾಗುವ ರೀತಿಯಲ್ಲಿ ಕಾನೂನುಗಳು ದುರುಪಯೋಗವಾಗುತ್ತಿವೆ.

ಸ್ವಾತಂತ್ರ್ಯ ಬಂದು ಸುಮಾರು 78 ವರ್ಷಗಳ ನಂತರವೂ ಪಾರದರ್ಶಕ ಆಡಳಿತ ಸಾಧ್ಯವಾಗಿಲ್ಲ. ಪ್ರಧಾನ ಮಂತ್ರಿ, ಮುಖ್ಯಮಂತ್ರಿ , ಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಮಾಧ್ಯಮಗಳು, ನ್ಯಾಯಾಲಯಗಳು, ಮಾಹಿತಿ ಹಕ್ಕುಗಳ ಕಾನೂನು ಎಲ್ಲವೂ ಇದ್ದರೂ ಜನಸಾಮಾನ್ಯರಿಗೆ ಯಾವುದು ಸರಿ, ಯಾವುದು ತಪ್ಪು, ಯಾವುದು ವಂಚನೆ, ಯಾವುದು ಸುಳ್ಳು ಎಂಬುದೂ ಅರ್ಥವಾಗುತ್ತಿಲ್ಲ. ಕೋಟಿಗಳ ಲೆಕ್ಕವನ್ನು ಸಹ ಕೋಟಿಗಳ ವ್ಯತ್ಯಾಸದಲ್ಲೇ ಹೇಳುತ್ತಾರೆ.

ಸರ್ಕಾರ ಮಾಡುವ ಎಲ್ಲಾ ವ್ಯಾಪಾರಗಳಲ್ಲೂ ಭ್ರಷ್ಟಾಚಾರದ ವಾಸನೆ ಇದ್ದೇ ಇರುತ್ತದೆ. ರಾಜಕಾರಣಿಗಳು, ಅಧಿಕಾರಿಗಳು ಅಥವಾ ಏಜೆಂಟರೇ ಇರಬಹುದು, ಯಾರಾದರೂ ಅದರಲ್ಲಿ ಹಣವನ್ನು ದೋಚಿರುವ ಸಾಧ್ಯತೆ ಬಹುತೇಕ ನಿಶ್ಚಿತ. ಪ್ರತ್ಯಕ್ಷ ಅಥವಾ ಪರೋಕ್ಷ ಅಥವಾ ಕಾನೂನಿನ ಕಣ್ಣಿಗೆ ಮಂಕುಬೂದಿ ಎರಚಿ ಇದನ್ನು ಸುಲಭವಾಗಿ ಮಾಡಲಾಗುತ್ತದೆ. ಒಂದು ವೇಳೆ ತನಿಖೆ ನಡೆದರೂ ವಕೀಲಿಕೆಯ ವಾದಗಳು ಅವರನ್ನು ಆರೋಪ ಮುಕ್ತಗೊಳಿಸಲು ನೆರವಾಗುತ್ತದೆ.

ಆಡಳಿತ ಮತ್ತು ವಿರೋಧ ಪಕ್ಷಗಳು ಹಾಗು ಮಾಧ್ಯಮಗಳು ಜನರನ್ನು
ಕುರಿಗಳು ಎಂದು ಭಾವಿಸಿದ್ದಾರೆಯೇ ? ಒಬ್ಬೊಬ್ಬರು ಒಂದೊಂದು ಲೆಕ್ಕ. ಖಜಾನೆಯ ದುಡ್ಡೇನು ಇವರ ಸ್ವಂತ ಆಸ್ತಿಯೇ ? ಮಾಧ್ಯಮಗಳಿಗೂ ನಾಚಿಕೆಯಾಗಬೇಕು, ಅವರ ಸುಳ್ಳುಗಳನ್ನು ಹಾಗೆಯೇ ಪ್ರಸಾರ ಮಾಡಿ ಸತ್ಯವನ್ನು ಸ್ಪಷ್ಟವಾಗಿ ಜನರಿಗೆ ತಲುಪಿಸಲು ಸಾಧ್ಯವಾಗದ ತಮ್ಮ ಅಸಹಾಯಕ ಪರಿಸ್ಥಿತಿಗೆ.

ಕಳ್ಳರ ಸಂತೆಯಲ್ಲಿ ನಾವು ನೀವು ಬದುಕುವುದಾದರೂ ಹೇಗೆ ? ರಸ್ತೆಗಳಲ್ಲಿ ಜನರ ಪ್ರಾಣ ಹೋಗುತ್ತಿರುವಾಗ ಬೆರಳೆಣಿಕೆಯಷ್ಟು ರಾಜಕಾರಣಿಗಳು ಮತ್ತು ಅಧಿಕಾರಿಗಳು ಹಗಲು ದರೋಡೆ ಮಾಡುತ್ತಿದ್ದಾರೆ, ಸಮಯ ವ್ಯರ್ಥ ಮಾಡುತ್ತಿದ್ದಾರೆ, ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಛೆ, ಸಾಮಾನ್ಯ ಜನರ ನರಳಾಟದ ಬಗ್ಗೆ ಸ್ವಲ್ಪವೂ ಕನಿಕರ ಕಾಳಜಿ ಇವರುಗಳಿಗೆ ಇಲ್ಲವೇ ?

ಬನ್ನಿ ನನ್ನೊಂದಿಗೆ ಬೀದಿ ಬೀದಿಗಳಲ್ಲಿ ಕಷ್ಟಗಳ ಸರಮಾಲೆಯನ್ನೇ ತೋರಿಸುತ್ತೇನೆ. ಬದುಕುವ ಆಸೆಯನ್ನೇ ಕಳೆದುಕೊಂಡ ಲಕ್ಷಾಂತರ ಜನರಿದ್ದಾರೆ. ಸಾಲದ ಕಾರಣಗಳಿಗಾಗಿ ಆತ್ಮಹತ್ಯೆಗಳು ನಿತ್ಯದ ಸುದ್ದಿಯಾಗುತ್ತಿವೆ. ಕಾರ್ಖಾನೆಗಳು ದಿವಾಳಿತನದತ್ತ ಸಾಗುತ್ತಿವೆ. ಹೆಚ್ಚು ಕಡಿಮೆ 30/40 ವರ್ಷಗಳಷ್ಟು ಹಿಂದಿನ ಕಾಲಕ್ಕೆ ರಾಜ್ಯದ, ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಹೀಗಿರುವಾಗ ಸಾವಿರಾರು ಕೋಟಿಗಳ ಲೆಕ್ಕವನ್ನು ಪಾರದರ್ಶಕವಾಗಿ ನಿರ್ವಹಿಸದೆ ಸರ್ಕಾರದ ಎರಡು ಪ್ರಮುಖ ಭಾಗಗಳು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದರೆ ಅಧಿವೇಶನಗಳಿಗೆ ಅರ್ಥವಿದೆಯೇ ?

ಪ್ರಜಾಪ್ರಭುತ್ವ ವ್ಯವಸ್ಥೆಗೆ ಈ ವಕೀಲಿಕೆಯೇ ಮೂಲಾಧಾರ. ಆದರೆ ಈಗ ಇದೇ ವಕೀಲಿಕೆ ಅದರ ಅಸ್ತಿತ್ವಕ್ಕೇ ಮಾರಕವಾಗುವ ರೂಪವಾಗಿ ಬದಲಾಗಿದೆ.

ಸತ್ಯ ಮತ್ತು ಸುಳ್ಳು,
ಪ್ರಾಮಾಣಿಕತೆ ಮತ್ತು ವಂಚನೆ ಎಲ್ಲರ ಮನಸ್ಸುಗಳಿಗೆ ಸ್ಪಷ್ಟವಾಗಿ ತಿಳಿದಿರುತ್ತದೆ. ಆದರೆ ಭ್ರಷ್ಟ ವ್ಯವಸ್ಥೆ ವಕೀಲಿಕೆಯ ನೆರಳಲ್ಲಿ ಜನರನ್ನು ವಂಚಿಸುತ್ತಾ ತಮ್ಮ ಸ್ವಾರ್ಥ ಸಾಧನೆಯಲ್ಲಿ ತೊಡಗಿದೆ. ಇದನ್ನು ತಡೆಯುವ ಮಾರ್ಗ ಸದ್ಯಕ್ಕೆ ಇಲ್ಲ.

ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರಾಮಾಣಿಕ ವ್ಯಕ್ತಿ, ಆಡಳಿತ ಮತ್ತು ವ್ಯವಸ್ಥೆ ರೂಪುಗೊಳ್ಳುವುದು ಯಾವಾಗ…. ???

ದೇವರುಗಳು ವಿಫಲರಾದರು, ಧರ್ಮಗಳು ವಿಫಲವಾದವು,
ಕಾನೂನು ವಿಫಲವಾಯಿತು,
ಉಳಿದಿರುವ ಮಾರ್ಗ ಏನು …. ???

ನಾಗರಿಕ ಪ್ರಜ್ಞೆಯ ಪುನರ್ ಸ್ಥಾಪನೆ.
ಮಾನವೀಯ ಮೌಲ್ಯಗಳ ಪುನರುಜ್ಜೀವನ.
ಅದು ಎಂದು ಮತ್ತು ಹೇಗೆ…. ???

ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕಿದೆ ಮತ್ತು ಸಾಗುತ್ತಿದೆ.
ಭವಿಷ್ಯದ ಬಗ್ಗೆ ಆಶಾವಾದದಿಂದ ಮುನ್ನಡೆಯೋಣ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *