ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ: ವರ್ಷಕ್ಕೊಂದು ನಿಯಮ ಜಾರಿ: ಎರಡು ಬಾರಿ ಬಯೋಮೆಟ್ರಿಕ್ ತಗೊಳೋದು ಏಕೆ..?- ರೈತರ ಆರೋಪ, ಆಕ್ರೋಶ

ದೊಡ್ಡಬಳ್ಳಾಪುರದಲ್ಲಿ ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿ ಆರಂಭವಾಗಿ ಕೆಲವೇ ದಿನಗಳಲ್ಲಿ ಹಲವು ಸಮಸ್ಯೆಗಳು ತಲೆದೋರಿದ್ದು, ರಾಗಿ ಖರೀದಿ ವೇಳೆ ಹಲವು ನಿಯಮಗಳಿಂದ ರೈತರು ಬೇಸತ್ತು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರೈತರಿಂದ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಪ್ರತಿವರ್ಷ ನಿಯಮಗಳು ಬದಲಾಗುತ್ತಿವೆ. ಇದರಿಂದ ರೈತರು ಹೈರಾಣಗಾಗಿದ್ದಾರೆ. ಸುಗಮ ಹಾದಿಯಲ್ಲಿ ರಾಗಿ ಖರೀದಿ ವ್ಯವಸ್ಥೆ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈಗಾಗಲೇ 13 ಸಾವಿರಕ್ಕೂ ಹೆಚ್ಚು ರೈತರು ನೊಂದಾಯಿಸಿಕೊಂಡಿದ್ದು, ಅವರಿಂದ ರಾಗಿ ಖರೀದಿಯನ್ನ ಮಾಡಲಾಗುತ್ತಿದೆ. ಆದರೆ, ಈ ವರ್ಷ ಕೆಲವು ನಿಯಮಗಳು ರೈತರನ್ನು ಹೈರಾಣು ಮಾಡಿದೆ.

ರೆಕಮೆಂಡೇಷನ್ ಇದ್ರೆ ಬೇಗ ಕೆಲಸ ಆಗುತ್ತೆ. ಏನೂ ಇಲ್ದೆ ಸೀರಿಯಲ್ ಪ್ರಕಾರ ಬರೋರು ಗಂಟೆಗಟ್ಟಲೇ ಕಾದರೂ ಏನೂ ಆಗಲ್ಲ. ಇದ್ದ ಜಾಗದಲ್ಲೇ ಇರಬೇಕಾದ ಪರಿಸ್ಥಿತಿ‌ ನಿರ್ಮಾಣವಾಗಿದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ವಾಹನಗಳು ದಿನಗಟ್ಟಲೆ ನಿಲ್ಲುವಂತಾಗಬಾರದು. ಒಂದು ದಿನಕ್ಕೆ ಎಷ್ಟು ಖರೀದಿ ಮಾಡಬಹುದೋ ಅಷ್ಟಕ್ಕೆ ಟೋಕನ್ ಗಳನ್ನು ನೀಡುವ ವ್ಯವಸ್ಥೆ ಮಾಡಿಕೊಳ್ಳಬೇಕು. ಎಪಿಎಂಸಿ ಆವರಣದಲ್ಲಿ ರೈತರಿಗೆ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಕಡ್ಡಾಯವಾಗಿ ಆಗಬೇಕು. ತೂಕದ ವ್ಯವಸ್ಥೆಯಲ್ಲಿ ಲೋಪದೋಷಗಳು ಆಗಬಾರದು ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದ್ದರು. ಆದರೆ, ಶಾಸಕರ ಮಾತಿಗೆ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.

ರೈತ ಸಂಘ ಮುಖಂಡ ಬಚ್ಚೇಗೌಡ ಮಾತನಾಡಿ, ರಾಗಿ ಖರೀದಿ ಪ್ರಕ್ರಿಯೆಯಲ್ಲಿನ ಹೊಸ ನಿಯಮಗಳಿಂದ ರೈತರು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಟ್ರ್ಯಾಕ್ಟರ್ ಬಾಡಿಗೆ ದಿನಕ್ಕೆ ಎರಡರಿಂದ ಮೂರು ಸಾವಿರವಿದೆ‌. ಎರಡು ಮೂರು ದಿನ ಕಾಯುವುದರಿಂದ 10 ರಿಂದ 15 ಸಾವಿರ ಟ್ರ್ಯಾಕ್ಟರ್ ಬಾಡಿಗೆಗೆ ಹಣ ಹೋಗುತ್ತದೆ. ಸರ್ಕಾರ ಬೆಂಬಲ ಬೆಲೆಯಲ್ಲಿ ಕೊಡುವ ಹಣ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಕಿಡಿಕಾರಿದರು.

ರೈತ ಅರಸೇಗೌಡ ಮಾತನಾಡಿ, ಈ ಮೊದಲು ಇಂಡೆಂಟ್ ತೆಗೆದುಕೊಳ್ಳುವಾಗ ಮಾತ್ರ ಬಯೋಮೆಟ್ರಿಕ್ ಕೊಡಬೇಕಿತ್ತು. ಈ ವರ್ಷ ರಾಗಿ ಹಾಕಿದ ನಂತರವೂ ಬಯೋಮೆಟ್ರಿಕ್ ಕೊಡಬೇಕಾಗಿದೆ. ಇದು ಸಮಸ್ಯೆಗೆ ಮೊದಲ ಕಾರಣವಾಗಿದೆ. ಬಹುತೇಕ ರೈತರ ಪಹಣಿಗಳಿರುವುದು ವಯಸ್ಸಾದವರ ಹೆಸರಿನಲ್ಲಿ. ಅವರು ಎರಡು ಮೂರು ದಿನ ಕಾಯುವ ಸ್ಥಿತಿಯಲ್ಲಿರುವುದಿಲ್ಲ. ಈಗಾಗಲೇ ಇಂಡೆಂಟ್ ತೆಗೆದುಕೊಂಡಿರುವ 30 ರೈತರು ಸಾವನ್ನಪ್ಪಿದ್ದಾರೆ. ಅವರಿಗೆ ರಾಗಿ ಹಾಕಲು ಅವಕಾಶವೇ ಇಲ್ಲದಂತ್ತಾಗಿದೆ ಎಂದರು.

ರಾಗಿ ಖರೀದಿ ಪ್ರಕ್ರಿಯೆಯಲ್ಲಿನ ಸಮಸ್ಯೆಗಳ ಬಗ್ಗೆ ಪಬ್ಲಿಕ್ ಮಿರ್ಚಿ ಜೊತೆಗೆ ಮಾತನಾಡಿದ ದೊಡ್ಡಬಳ್ಳಾಪುರ ತಾಲೂಕು ರಾಗಿ ಖರೀದಿ ಅಧಿಕಾರಿ ಹೆಚ್.ಎನ್.ನಾರಾಯಣ್, ಎರಡು ಬಾರಿ ಬಯೋಮೆಟ್ರಿಕ್ ತೆಗೆದುಕೊಳ್ಳುವುದು ಸರ್ಕಾರ ಜಾರಿಗೆ ತಂದಿರುವ ನಿಯಮ. ರೈತರು ನಿಯಮ ಪಾಲನೆ ಮಾಡಬೇಕಾಗಿದೆ. ಇನ್ನೂ ರಾಗಿ ಖರೀದಿ ಪ್ರಕ್ರಿಯೆ ತಡವಾಗಲು ಕಾರಣ, ರಾಗಿ ಸಂಗ್ರಹಿಸುವ ಗೋದಾಮುಗಳಲ್ಲಿ ಈ ಬಾರಿ ಯಂತ್ರಗಳಿಂದ ಚೀಲ ಹೊಲೆಯಲಾಗುತ್ತಿದೆ. ವಿದ್ಯುತ್ ಸಮಸ್ಯೆ. ಕಾರ್ಮಿಕರ ಕೊರತೆಯಿಂದ ಸಮಸ್ಯೆಗಾಗಿದೆ. ಎರಡು ದಿನ ರಜೆ ಇದೆ. ಈ ಎರಡು‌ ದಿನಗಳಲ್ಲಿ ಸಮಸ್ಯೆಗಳು ಬಗೆಹರಿಯಲಿದ್ದು, ಸೋಮವಾರದಿಂದ ರಾಗಿ ಪ್ರಕ್ರಿಯೆ ಸುಗಮವಾಗಿ ನಡೆಯಲಿದೆ ಎಂದರು.

ರೈತರಿಗೆ ನಾವು ಕ್ರಮಸಂಖ್ಯೆಯೇ ಪ್ರಕಾರದಂತೆ ಬರುವಂತೆ ಹೇಳಲಾಗಿದೆ. ಒಮ್ಮೆಲೆ ಹೆಚ್ಚು ರೈತರು ಬರುವುದರಿಂದ ಬಂದ ರೈತರನ್ನ ವಾಪಸ್ ಕಳಿಸಲು ಆಗುವುದಿಲ್ಲ. ಇದರಿಂದ ಸಹ ಸಮಸ್ಯೆಯಾಗುತ್ತಿದೆ. ರೈತರು ಕ್ರಮ ಸಂಖ್ಯೆಯ ಪ್ರಕಾರ ಬರುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!