ರಾಗಿ ಖರೀದಿ ಕೇಂದ್ರದಲ್ಲಿ ಅಧಿಕೃತವಾಗಿ ನೋಂದಣಿ ನಿನ್ನೆಯಿಂದ ಪ್ರಾರಂಭ: ಸಾಲುಗಟ್ಟಿ ನಿಂತು ರಾಗಿ ಖರೀದಿಗೆ ನೋಂದಣಿ ಮಾಡಿಸುತ್ತಿರುವ ರೈತರು: ಪ್ರತಿ ಕ್ವಿಂಟಾಲ್ ರಾಗಿಗೆ 3,846 ರೂ. ಬೆಂಬಲ ಬೆಲೆ ನಿಗದಿ: ನೋಂದಣಿ ಪ್ರಕ್ರಿಯೆ ಮಾಹಿತಿ ಇಲ್ಲಿದೆ….

ರಾಗಿ ಬೆಳೆಗಾರರ ತೀವ್ರ ಒತ್ತಡದ ನಡುವೆ ಶುಕ್ರವಾರ ಮಧ್ಯಾಹ್ನದಿಂದ ರಾಗಿ ಖರೀದಿ ಕೇಂದ್ರದಲ್ಲಿ ನಿನ್ನೆಯಿಂದ ಅಧಿಕೃತವಾಗಿ ನೋಂದಣಿ ಪ್ರಾರಂಭವಾಗಿದೆ.

ಸರ್ಕಾರದ ಆದೇಶದನ್ವಯ 2023-24 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಸಂಬಂಧಿಸಿದಂತೆ ನೋಂದಣಿಯನ್ನು ದಿನಾಂಕ 2023ರ ಡಿಸೆಂಬರ್ 01 ರಿಂದ ಆರಂಭಿಸಲಾಗುವುದೆಂದು ತಿಳಿಸಲಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ 15 ದಿನಗಳ ವಿಳಂಬವಾಗಿತ್ತು. ವಿಳಂಬ ಧೋರಣೆಯಿಂದ ರೈತರು ಆಕ್ರೋಶಗೊಂಡಿದ್ದರು.

ಹೊಸ ತಂತ್ರಾಂಶದಿಂದ ಇದೇ ಮೊದಲ ಬಾರಿಗೆ ರೈತರಿಂದ ಬೆರಳಚ್ಚು ಪಡೆದು ನೋಂದಣಿ

ಸರ್ಕಾರವು ಇದೇ ಮೊದಲ ಬಾರಿಗೆ ರೈತರಿಂದ ಬೆರಳಚ್ಚು ಪಡೆದು ನೋಂದಣಿ ಮಾಡಿಕೊಳ್ಳಲು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಇದರ ಪರಿಶೀಲನೆಯು ಅಂತಿಮ ಹಂತದಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ ತಂತ್ರಾಂಶವು ಮುಂದಿನ ಎರಡು ಮೂರು ದಿನಗಳಲ್ಲಿ ಕಾರ್ಯನಿರ್ವಹಿಸಲು ಲಭ್ಯವಾಗಲಿದ್ದು,  ಶೀಘ್ರದಲ್ಲಿಯೇ ರೈತರ ನೋಂದಣಿಯನ್ನು ಆರಂಭಿಸಲಾಗುವುದು. ಹೀಗಾಗಿ ರೈತರು ಸಹಕರಿಸಬೇಕೆಂದು ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ ಎನ್ ಅವರು ಪ್ರಕಟಣೆಯಲ್ಲಿ ಕೋರಿದ್ದರು.

ನೋಂದಣಿ ಪ್ರಾರಂಭವಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಜನ ರಾಗಿ ಬೆಳೆಗಾರರು ಸಾಲುಗಟ್ಟಿ ನಿಂತು ರಾಗಿ ಖರೀದಿಗೆ ನೋಂದಣಿ ಮಾಡಿಸುತ್ತಿದ್ದ ದೃಶ್ಯ ನಗರದ ಎಪಿಎಂಸಿ ಆವರಣದಲ್ಲಿನ ಖರೀದಿ ಕೇಂದ್ರದ ಬಳಿ ಕಂಡು ಬಂತು.

ಸದ್ಯಕ್ಕೆ ಎರಡು ಕೌಂಟರ್ಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಖರೀದಿ ಕೇಂದ್ರದ ಬಳಿ ರೈತರು ಕುಳಿತುಕೊಳ್ಳಲು ಖುರ್ಚಿಗಳ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಇದೇ ಪ್ರಥಮ ಬಾರಿಗೆ ಪಹಣಿಯಲ್ಲಿ ಹೆಸರು ಇರುವ ರೈತರಿಗೆ ನೋಂದಣಿಗೆ ಅವಕಾಶ

ಇದೇ ಪ್ರಥಮ ಬಾರಿಗೆ ಪಹಣಿಯಲ್ಲಿ ಹೆಸರು ಇರುವ ರೈತರೇ ಖುದ್ದಾಗಿ ಖರೀದಿಕೇಂದ್ರಕ್ಕೆ ಬಂದು ಆಧಾರ್ ಸಂಖ್ಯೆ, ಕೃಷಿ ಇಲಾಖೆಯ ಫ್ರೂಟ್ ಐಡಿ ಸಂಖ್ಯೆಯನ್ನು ನೀಡುವುದರ ಜೊತೆಗೆ ಬಯೋಮೆಟ್ರಿಕ್ ಸಹ ನೀಡಬೇಕಿದೆ. ಆಗ ಮಾತ್ರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡು ರೈತರ ಭಾವ ಚಿತ್ರ ಇರುವ ಖರೀದಿ ಪತ್ರವನ್ನು ನೀಡಲಾಗುತ್ತಿದೆ. ಇದರಲ್ಲಿ ಖರೀದಿ ಕೇಂದ್ರಕ್ಕೆ ರಾಗಿ ತರುವ ದಿನಾಂಕ, ಎಷ್ಟು ಎಕರೆಯಲ್ಲಿ ರಾಗಿ ಬೆಳೆಯಲಾಗಿದೆ, ಎಷ್ಟು ಕ್ವಿಂಟಾಲ್ ರಾಗಿ ಖರೀದಿಸಲಾಗುವುದು ಎನ್ನುವ ಸಂಪೂರ್ಣ ವಿವರ ಇದೆ.

ಮಹಿಳೆಯರು, ಹಿರಿಯ ನಾಗರೀಕರಿಗೆ  ಪ್ರತ್ಯೇಕ ನೋಂದಣಿಗೆ ಮನವಿ:

ಸಾಮಾನ್ಯವಾಗಿ ಮಹಿಳೆಯರ ಹೆಸರಿನಲ್ಲಿ ಜಮೀನಿನ ಪಹಣಿ ಇರುವುದು ಅಪರೂಪ. ಆದರೆ ಕುಟುಂಬದಲ್ಲಿ ಮೂರ್ನಾಲ್ಕು ಜನ ಮಕ್ಕಳು ಇದ್ದಾಗ ತಾಯಿ ಹೆಸರಿನಲ್ಲಿ ಪಹಣಿ (ಆರ್ಟಿಸಿ) ಇರುತ್ತದೆ. ಇಂತಹ ಸಂದರ್ಭದಲ್ಲಿ ಖರೀದಿ ಕೇಂದ್ರಕ್ಕೆ ಬರುವ ಹಿರಿಯ ಮಹಿಳೆಯರು ಪುರುಷರೊಂದಿಗೆ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಲ್ಲುವುದು ಕಷ್ಟವಾಗಲಿದೆ. ಹಾಗಾಗಿ ಮಹಿಳೆಯರಿಗೆ ಹಾಗೂ ಹಿರಿಯ ನಾಗರೀಕರಿಗೆ ಪ್ರತ್ಯೇಕ ನೋಂದಣಿ ಕೌಂಟರ್ ಮೀಸಲಿಡಬೇಕು ಎಂದು ರಾಜ್ಯ ರೈತ ಸಂಘದ ಮುಖಂಡ ಮುತ್ತೇಗೌಡ ಆಗ್ರಹಿಸಿದ್ದಾರೆ.

ತಾಲೂಕಿನಲ್ಲಿ ಎಪಿಎಂಸಿ ಆವರಣದ ರೈತ ಭವನ, ಸಾಸಲು ಹೋಬಳಿಯ ನಾಡಕಚೇರಿಯಲ್ಲಿ ರಾಗಿ ಖರೀದಿ ನೋಂದಣಿ

ಅಕ್ರಮ ರಾಗಿ ನೋಂದಣಿ ತಪ್ಪಿಸುವ ಸಲುವಾಗಿ ಸರ್ಕಾರ ಬಯೋಮೆಟ್ರಿಕ್ ಜಾರಿಗೆ ತಂದಿದೆ. ಹಾಗಾಗಿ ತಾಂತ್ರಿಕ ದೋಷದಿಂದಾಗಿ ರಾಗಿ ಖರೀದಿ ನೋಂದಣಿ ವಿಳಂಬವಾಗಿತ್ತು. ಈಗ ಬಹುತೇಕ ಎಲ್ಲಾ ರೀತಿಯ ಸಮಸ್ಯೆಯು ನಿವಾರಣೆಯಾಗಿದೆ. ನಗರದ ಎಪಿಎಂಸಿ ಆವರಣದ ರೈತ ಭವನ ಹಾಗೂ ಸಾಸಲು ಹೋಬಳಿಯ ನಾಡಕಚೇರಿಯಲ್ಲಿ ರಾಗಿ ಖರೀದಿ ನೋಂದಣಿ ಪ್ರಾರಂಭವಾಗಿದೆ ಎಂದು ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಹೇಳಿದ್ದಾರೆ.

ಪ್ರತಿ ಕ್ವಿಂಟಾಲ್ ರಾಗಿಗೆ 3,846 ರೂ. ಬೆಂಬಲ ಬೆಲೆ ನಿಗದಿ

ಪ್ರತಿ ಕ್ವಿಂಟಾಲ್ ರಾಗಿಗೆ 3,846 ರೂಪಾಯಿ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿ ಪಡಿಸಿದೆ. ಕನಿಷ್ಟ ಬೆಂಬಲ ಯೋಜನೆಯಡಿ ರಾಗಿ ಖರೀದಿಗೆ ಸಂಬಂಧಿಸಿದಂತೆ ಸಂಗ್ರಹಣಾ ಏಜೆನ್ಸಿಗಳು ಪ್ರತಿ ತಾಲ್ಲೂಕು ಹಂತದಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರಗಳನ್ನು ತೆರೆಯಬೇಕು, ರಾಗಿ ಖರೀದಿಗೆ ಸಂಬಂಧಿಸಿದಂತೆ ನೋಂದಣಿ ಕಾರ್ಯಕ್ಕೆ ನಿಗದಿತ ಸ್ಥಳಗಳನ್ನು ಗುರ್ತಿಸಿ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ನೋಂದಣಿಗೆ ಯಾವುದೇ ಸಮಸ್ಯೆ ಆಗದಂತೆ ಕಂಪ್ಯೂಟರ್ ಗಳು, ಇಂಟರ್ನೆಟ್ ವ್ಯವಸ್ಥೆ ಸೇರಿದಂತೆ ಅಗತ್ಯ ಸಿಬ್ಬಂದಿ ನಿಯೋಜಿಸಿ. ರೈತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಪ್ರೂಟ್ಸ್ ದತ್ತಾಂಶದಲ್ಲಿ ರೈತರು ನೋಂದಾಯಿಸಿಕೊಂಡು, ಐಡಿ ಪಡೆಯುವುದು ಕಡ್ಡಾಯ

ಜೊತೆಗೆ 2023-24 ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದಿರುವ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ದತ್ತಾಂಶದಲ್ಲಿ ರೈತರು ನೋಂದಾಯಿಸಿಕೊಂಡು, ಐಡಿ ಪಡೆಯುವುದು ಕಡ್ಡಾಯ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *