*ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ*

ಖಾಸಗಿ ರಾಗಿ ಕಟಾವು ಯಂತ್ರಗಳ ಮಾಲಿಕರು ರೈತರಿಂದ ಪ್ರತಿ ಗಂಟೆಗೆ 3500 ರೂ. ಗಳಿಂದ 4 ಸಾವಿರ ರೂ.ಗಳ ವರೆಗೆ ಬಾಡಿಗೆ ಹಣ ಪಡೆಯುತ್ತಿರುವ ಕುರಿತು ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮಗಳ ರೈತರುಗಳಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ನಿರ್ದಿಷ್ಟ ಕಂಪನಿಗಳ ದೊಡ್ಡ ಕಟಾವು ಯಂತ್ರಗಳಿಗೆ ಪ್ರತಿ ಗಂಟೆಗೆ ನಿಗದಿತ 3350 ರೂ. ಹಾಗೂ ಸಣ್ಣ ಯಂತ್ರಗಳಿಗೆ 2700 ರೂ.ಬಾಡಿಗೆ ಮಾತ್ರ ಸಂಗ್ರಹಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 57370 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಆವರಿಸಿದೆ.ಈಗ ಬಹುತೇಕ ರಾಗಿ ಬೆಳೆಯು ಕಟಾವು ಹಂತದಲ್ಲಿದೆ. ಕಟಾವು ಕಾರ್ಯ ಪ್ರಗತಿಯಲ್ಲಿರುತ್ತದೆ. ಜಿಲ್ಲೆಯ ಬಹುತೇಕ ರೈತರು ರಾಗಿ ಬೆಳೆಯನ್ನು ಕಟಾವ ಕಾರ್ಯವನ್ನು ಯಂತ್ರಗಳ (combined harvesters) ಮೂಲಕ ಕೈಗೊಳ್ಳುತ್ತಿದ್ದಾರೆ‌.

ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುವುದನ್ನು ತಪ್ಪಿಸಲು ಜುಲೈ 6 ರಂದು ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಯಂತ್ರಧಾರೆ (ಬಾಡಿಗೆ ಆಧಾರಿತ ಸೇವಾ ಕೇಂದ್ರ) ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧರಿಸಿದ ಪ್ರಕಾರ, ಪ್ರಸ್ತುತ ಇಂಧನ ವೆಚ್ಚ , ಕಾರ್ಮಿಕರ ಕೂಲಿ ವೆಚ್ಚ ಮತ್ತು ಇತರ ನಿರ್ವಹಣೆ ವೆಚ್ಚಗಳನ್ನು ಪರಿಗಣಿಸಿ ರಾಗಿ ಕಟಾವು ಮಾಡಲು ಯಂತ್ರಕ್ಕೆ ಪ್ರತಿ ಗಂಟೆಗೆ ನ್ಯೂ ಹಾಲೆಂಡ್, ಜಾನ್‌ಡೀರ್ ಕಂಪನಿಯ ದೊಡ್ಡ ಕಟಾವು ಯಂತ್ರ 3350 ರೂ. ಹಾಗೂ ಕ್ಲಾಸ್ ಮತ್ತು ಎಸಿಸಿ ಕಂಪನಿಯ ಕಟಾವು ಯಂತ್ರಕ್ಕೆ 2700 ರೂ. ಪರಿಷ್ಕರಿಸಿ ಬಾಡಿಗೆ ನಿಗದಿಪಡಿಸಲಾಗಿದೆ.

ಈ ದರಗಳನ್ನು ಮೀರದಂತೆ ಬಾಡಿಗೆಯನ್ನು ಸಂಗ್ರಹಿಸಬೇಕು. ತಪ್ಪಿದರೆ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *