
ರಸ್ತೆಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಆಟೋ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ಸುಮಾರು 7:30ರ ಸಮಯದಲ್ಲಿ ತಾಲೂಕಿನ ಗುಂಜೂರು ಬಳಿ ನಡೆದಿದೆ.

ಗುಂಜೂರು ಬಳಿ 12 ಚಕ್ರದ ಗೂಡ್ಸ್ ಲಾರಿ ರಸ್ತೆ ಬದಿ ನಿಂತಿತ್ತು, ಲಾರಿ ಚಾಲಕ ಲಾರಿಯಲ್ಲೇ ಊಟ ಮಾಡುತ್ತಿದ್ದನು. ಈ ವೇಳೆ ಗೌರಿಬಿದನೂರು ಕಡೆಯಿಂದ ಬಂದ ಆಟೋ ಏಕಾಏಕಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆಟೋ ಡ್ರೈವರ್ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೃತ ವ್ಯಕ್ತಿ ಗೌರಿಬಿದನೂರಿನ ಡಿಪಾಳ್ಯ ಮೂಲದವರು ಎನ್ನಲಾಗಿದೆ. ಹೆಂಡತಿ ಮತ್ತು ತನ್ನ ಒಂಭತ್ತು ತಿಂಗಳ ಮಗುವನ್ನು ನೋಡಲು ದೊಡ್ಡಬಳ್ಳಾಪುರ ತಾಲೂಕಿನ ಶಿರವಾರಕ್ಕೆ ಬರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸ್ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.