ನಗರಾದ್ಯಂತ ಪ್ರತಿಯೊಂದು ಪ್ರಮುಖ ವೃತ್ತಗಳು, ರಸ್ತೆಗಳ ಇಕ್ಕೆಲಗಳಲ್ಲಿ ಅನಧಿಕೃತ ಶೆಡ್ ಗಳು, ಅಂಗಡಿಗಳು ತಲೆಎತ್ತಿವೆ. ಇದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕಾದ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ಮುಖಂಡ ರಾಜಘಟ್ಟ ರವಿ ಆರೋಪಿಸಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಈ ಕುರಿತು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬಾಶೆಟ್ಟಿಹಳ್ಳಿ ಮೇಲ್ಸೇತುವೆ ಬಳಿ ರಸ್ತೆಯ ಎರಡೂ ಬದಿಗಳಲ್ಲಿ ಬೀದಿಬದಿ ವ್ಯಾಪಾರಿಗಳು ಫುಟ್ ಪಾತ್ ಗಳನ್ನು ಆಕ್ರಮಿಸಿಕೊಂಡಿದ್ದಾರೆ. ಇವರನ್ನು ಯಾರೂ ಕೇಳೋರಿಲ್ಲ. ಈ ರಸ್ತೆಗೆ ಟೋಲ್ ಬೇರೆ ಕಟ್ಟಬೇಕಾಗಿರುವುದು ದುರಂತ. ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ನಾಲ್ಕು ದಿಕ್ಕಿನಲ್ಲಿ ಒಂದಿಂಚೂ ಜಾಗವಿಲ್ಲದಂತೆ ಸುತ್ತಲೂ ಅಂಗಡಿಗಳಿವೆ. ಸಂಬಂಧಪಟ್ಟ ಇಲಾಖೆಗಳಿಗೆ ಕಣ್ಣಿದ್ದು ಜಾಣ ಕುರುಡರಂತೆ ವರ್ತಿಸುತ್ತಿವೆ. ಪಾಲನಜೋಗಿಹಳ್ಳಿಯಲ್ಲಿ ಮಾಂಸದ ಅಂಗಡಿಗಳ ಮಾಲೀಕರು ಲಾರಿಗಳನ್ನು ರಸ್ತೆಗೆ ನಿಲ್ಲಿಸುತ್ತಾರೆ. ಇದರಿಂದ ಹಲವು ಅಪಘಾತಗಳಾಗಿ ಸಾವುನೋವುಗಳಾಗಿವೆ. ನಾಯಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುವುದು ಸಾಮಾನ್ಯವಾಗಿದೆ ಎಂದು ದೂರಿದರು.
ಅಧಿಕಾರಿಗಳಿಗೆ ಮನುಷ್ಯತ್ವ ಇಲ್ಲ:
ತಾಲ್ಲೂಕಿನಲ್ಲಿರುವ ಅಧಿಕಾರಿಗಳಿಗೆ ಕನಿಷ್ಠ ಮನುಷ್ಯತ್ವ ಇಲ್ಲ. ಒಂದೇ ಒಂದು ಸಾರ್ವಜನಿಕ ಸಮಸ್ಯೆಯನ್ನು ಸ್ವಯಂ ಪ್ರೇರಿತರಾಗಿ ಬಗೆಹರಿಸಿದ್ದು ಕಾಣಿಸಿಯೇ ಇಲ್ಲ. ಪ್ರತಿಯೊಂದಕ್ಕೂ ಮನವಿ, ಪ್ರತಿಭಟನೆ ಮಾಡುವಂತ ಪರಿಸ್ಥಿತಿ ಎದುರಾಗಿದೆ. ಇವರಿಗೆ ಸಂಬಳ, ಸಾರಿಗೆ ಎಲ್ಲವೂ ಬೇಕಾಗಿದೆ. ನಗರಸಭೆ ಸದಸ್ಯರು, ಪೌರಾಯುಕ್ತರು ಏನು ಮಾಡುತ್ತಾ ಇದ್ದಾರೆ..? ಎಂದು ಪ್ರಶ್ನೆ ಆಕ್ರೋಶ ವ್ಯಕ್ತಪಡಿಸಿದರು.
ಜೀವ ಕೈಯಲ್ಲಿ ಹಿಡಿದು ಓಡಾಡುವಂತ ಪರಿಸ್ಥಿತಿ ನಿರ್ಮಾಣ:
ನಗರದ ಕೊಂಗಾಡಿಯಪ್ಪ ವೃತ್ತ, ಮುಗುವಾಳಪ್ಪ ವೃತ್ತ, ಡಿ.ಕ್ರಾಸ್, ಸಿದ್ದಲಿಂಗಯ್ಯ ವೃತ್ತ, ರಾಮೇಗೌಡ, ವೃತ್ತ, ತಾಲ್ಲೂಕು ಕಚೇರಿ ವೃತ್ತ, ರೈಲ್ವೆ ನಿಲ್ದಾಣ ಸರ್ಕಲ್ ನಲ್ಲಿ ಸೇರಿ ವಿವಿಧ ವೃತ್ತಗಳಲ್ಲಿ ಜೀವ ಕೈಯಲ್ಲಿಟ್ಟುಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ.
ನಮ್ಮ ಹೋರಾಟ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಅಲ್ಲ. ರಸ್ತೆ ಆಕ್ರಮಿಸಿಕೊಂಡವರ ವಿರುದ್ಧದ ಹೊರಾಟ. ಫುಟ್ ಪಾತ್ ನಲ್ಲಿ ಶೆಡ್ ನಿರ್ಮಿಸಿ ಬಾಡಿಗೆಗೆ ಕೊಟ್ಟಿದ್ದಾರೆ. ಇದ್ಯಾವುದೂ ಅಧಿಕಾರಿಗಳಿಗೆ ಕಾಣುತ್ತಿಲ್ಲ ಎಂದರು.
ರಸ್ತೆ ಮಧ್ಯೆ ಕುಳಿತು ಹೋರಾಟದ ಎಚ್ಚರಿಕೆ:
ಬೀದಿ ಬದಿವ್ಯಾಪರಿಗಳಿಗೆ ಕೆಲವು ನಿಬಂಧನೆಗಳಿವೆ ಅವುಗಳ ಪ್ರಕಾರ ವ್ಯಾಪಾರ ವಹಿವಾಟು ಮಾಡಲಿ. ಲಾಡ್ಜ್ ಗಳ ಮೇಲೆ ಪೊಲೀಸರು ದಾಳಿ ಮಾಡಬೇಕು. ರಸ್ತೆಗಳಲ್ಲಿ ತೃತೀಯ ಲಿಂಗಗಳ ಕಾಟಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ರಸ್ತೆ ಮಧ್ಯೆ ಕುಳಿತು ಹೋರಾಟ ಮಾಡಲಾಗುವುದು. ಶಾಸಕರು, ಪೌರಾಯುಕ್ತರು, ನಗರಸಭೆ ಅಧ್ಯಕ್ಷರು, ಡಿವೈಎಸ್ಪಿ, ಪಿಡ್ಬ್ಲೂಡಿ, ಕಂದಾಯ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಸಭೆ ಕರೆದು ಸೂಕ್ತವಾಗಿ ವ್ಯವಸ್ಥಿತ ನಿರ್ವಹಣೆ ಮಾಡಬೇಕು ಎಂದರು.
ಕಾರ್ಮಿಕ ಘಟಕದ ಅಧ್ಯಕ್ಷ ಮಹೇಶ್ ಮಾತನಾಡಿ ಬಾಶೆಟ್ಟಿಹಳ್ಳಿ ಬಳಿಯ ಹೆದ್ದಾರಿ ಪಕ್ಕದಲ್ಲಿ ರಸ್ತೆ ಬಳಿ ಸರ್ವೀಸ್ ರಸ್ತೆ ಇಲ್ಲ. ಪ.ಪಂ. ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ದೊಡ್ಡಬಳ್ಳಾಪುರದಲ್ಲೂ ಕೇಳೋರೇ ಇಲ್ಲ. ವ್ಯಾಪಾರಿಗಳಿಗೆ, ಮಾಂಸದಂಗಡಿಗಳಿಗೆ ಪ್ರತ್ಯೇಕ ಜಾಗ ಕೊಡಬೇಕು ಹೀಗೆ ಮುಂದುವರೆದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.
ಕರವೇ ತಾ. ಅಧ್ಯಕ್ಷ ಹಮಾಮ್ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್ ವೇಣು, ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ತಾಲ್ಲೂಕು ಕಾರ್ಯದರ್ಶಿ ಕಾರಳ್ಳಿ ಮಂಜುನಾಥ, ಖಜಾಂಚಿ ಆನಂದ ಮೂರ್ತಿ, ನಗರಾಧ್ಯಕ್ಷ ಬಷೀರ್, ನಗರ ಕಾರ್ಯದರ್ಶಿ ಮಾರುತಿ, ಸೂರಿ, ಸುಬ್ರಮಣ್ಯ, ರಘುನಂದನ್, ರಂಗಸ್ವಾಮಿ, ಮಂಜುನಾಥ ಸೇರಿದಂತೆ ಇತರರು ಇದ್ದರು.