ಬೆಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ಯುವತಿಯರ ಬಳಿ ಬಂದು ಅಸಭ್ಯವಾಗಿ ವರ್ತಿಸಿ ತಕ್ಷಣ ಸ್ಥಳದಿಂದ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ಸಮೀಪ ನಡೆದಿದೆ.
ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆಯಾಗಿದೆ.
ಸೈಕೋ ಮಾದರಿಯ ಯುವಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವತಿಯರ ಬಳಿಗೆ ಬಂದು ಲೈಂಗಿಕ ಕಿರುಕುಳ ಕೊಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಇಬ್ಬರು ಯುವತಿಯರಲ್ಲಿ ಒಬ್ಬ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ನಂತರ ಸ್ಥಳದಿಂದ ಓಡಿಹೋಗುತ್ತಾನೆ. ಆ ಬಳಿಕ ಇಬ್ಬರು ಯುವತಿಯರು ಗಾಬರಿಯಿಂದ ಅಲ್ಲಿಂದ ನಡೆದುಕೊಂಡು ಹೋಗುತ್ತಾರೆ.
ಪೊಲೀಸರ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. ಸಂತ್ರಸ್ತೆ ಸ್ವತಃ ಮುಂದೆ ಬಂದು ದೂರು ದಾಖಲಿಸದಿದ್ದರೆ, ಪೊಲೀಸರು ತಾವಾಗಿಯೇ ಔಪಚಾರಿಕ ದೂರು ದಾಖಲಿಸಿ, ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರವಿರುದ್ಧ ಬಿಜೆಪಿ ಕಿಡಿ
ಈ ಘಟನೆಯನ್ನು ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಐಟಿ ಸಿಟಿ ಬೆಂಗಳೂರು ಅನ್ನು ಕಾಂಗ್ರೆಸ್ ಕ್ರೈಮ್ ಸಿಟಿ ಬೆಂಗಳೂರು ಮಾಡಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿ ಅರಾಜಕತೆ ಸೃಷ್ಟಿಸಿರುವ ಸಿದ್ದರಾಮಯ್ಯ ಸರ್ಕಾರ ಮಹಿಳೆಯರಿಗೆ ರಕ್ಷಣೆ ನೀಡುತ್ತಿಲ್ಲ ಎಂದು ದೂರಿದೆ.
ಡಾ.ಜಿ.ಪರಮೇಶ್ವರ್ ಅವರೇ, ನೀವು ಆಕಸ್ಮಿಕ ಗೃಹ ಸಚಿವರೋ? ಅಥವಾ ಮಾನಸಿಕ ಅಸ್ವಸ್ಥ ಸಚಿವರೋ? ಎಂದು ಪ್ರಶ್ನೆ ಮಾಡಿದೆ.