ನಾಪೋಕ್ಲು :ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಪ್ರಪಾತಕ್ಕೆ ಉರುಳಿ ಬಿದ್ದು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಮಡಿಕೇರಿ ಬೆಟ್ಟಗೇರಿ ಮುಖ್ಯರಸ್ತೆಯ ತಳೂರು ಜಂಕ್ಷನ್ ಬಳಿ ಭಾನುವಾರ ನಡೆದಿದೆ.
ಭಾಗಮಂಡಲ ಕಡೆಯಿಂದ ಮಡಿಕೇರಿ ಕಡೆಗೆ ಟಿ. ನರಸೀಪುರದ ನಿವಾಸಿ ನಾಗೇಂದ್ರ ಎಂಬುವವರು ಚಲಾಯಿಸುತಿದ್ದ ಕಾರು ರಸ್ತೆಯಲ್ಲಿದ್ದ ಗುಂಡಿ ತಪ್ಪಿಸುವ ಸಂದರ್ಭ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪ್ರಪಾತಕ್ಕೆ ಉರುಳಿಬಿದ್ದು, ಅಪಘಾತ ಸಂಭವಿಸಿದೆ. ಅಪಘಾತದಿಂದ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ನಾಗೇಂದ್ರ ಹಾಗೂ ಅವರ ಪತ್ನಿ ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಡಗಿನ ಬಹುತೇಕ ರಸ್ತೆಗಳಲ್ಲಿ ಗುಳಿ ಏರ್ಪಟ್ಟಿದ್ದು, ಅದರಲ್ಲೂ ದಕ್ಷಿಣ ಕೊಡಗಿನ ಭಾಗದ ರಾಜ್ಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಸೋದ್ಯಮ ಜಿಲ್ಲೆಯಾದ ಕೊಡಗಿಗೆ ಹಲವಷ್ಟು ಪ್ರವಾಸಿಗರು ಭೇಟಿ ನೀಡುತ್ತಿದ್ದು ಗುಳಿ ತಪ್ಪಿಸಲು ಹೋಗಿ ಹಲವರು ಅಪಘಾತಕೀಡಾಗಿದ್ದಾರೆ.