ನಗರದ 2ನೇ ವಾರ್ಡ್ ಬಸವೇಶ್ವರ ನಗರದಲ್ಲಿ ಕಳೆದ ಮೂರು ದಿನಗಳಿಂದ ಎಲ್ಲೆಂದರಲ್ಲಿ ಮ್ಯಾನ್ ಹೋಲ್ ಗಳು ಬಾಯ್ತೆರೆದು, ಮಲಮಿಶ್ರಿತ ಕೊಳಚೆ ನೀರು ರಸ್ತೆ ಹಾಗೂ ಮನೆಯ ಮುಂದೆ ಹರಿಯುತ್ತಿರುವುದರಿಂದ ಇಲ್ಲಿನ ನಿವಾಸಿಗಳು ಪರದಾಡುವಂತಾಗಿದೆ.
ಬಸವೇಶ್ವರ ನಗರದ ಬಿಜೆಪಿ ಕಚೇರಿ ಸಮೀಪ, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದ ಎದುರು ಮ್ಯಾನ್ ಹೋಲ್ ನಲ್ಲಿ ಕೊಳಚೆ ನೀರು ಉಕ್ಕಿ ಹರಿಯುತ್ತಿದೆ. ಮಳೆ ನಿಂತರೂ ಮ್ಯಾನ್ ಹೋಲ್ ಗಳಲ್ಲಿ ಕೊಳಚೆ ನೀರು ನಿಲ್ಲುವುದಿಲ್ಲ. ಮನೆಗಳ ಮುಂದಿನ ರಸ್ತೆಗಳಲ್ಲೇ ಗಬ್ಬು ನಾರುವ ಮಲ ಮಿಶ್ರಿತ ತ್ಯಾಜ್ಯ ನೀರಿನಿಂದ ದುರ್ವಾಸನೆ ಜನರಲ್ಲಿ ಅಸಹ್ಯ ತರಿಸಿದೆ.
ಮ್ಯಾನ್ ಹೋಲ್ ಸ್ವಚ್ಛ ಮಾಡಿಸುವಂತೆ ಸಾಕಷ್ಟು ಮನವಿ ಮಾಡಿದರೂ ನಗರಸಭೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ವಾರ್ಡಿನ ನಗರಸಭೆ ಸದಸ್ಯರಿಗೆ ಈ ಕುರಿತು ತಿಳಿಸಿದ ಬಳಿಕ ಮ್ಯಾನ್ ಹೋಲ್ ದುರಸ್ತಿ ಮಾಡಿಸಲಾಯಿತು. ಆದರೆ, ಮಳೆ ಬಂದ ನಂತರ ಮತ್ತೆ ಉಕ್ಕಿ ಹರಿಯುತ್ತಿದೆ. ಕೊಳಚೆ ನೀರು ಮನೆಯ ಮುಂದೆ ಹರಿಯುತ್ತಿದ್ದಯ, ದುರ್ವಾಸನೆ ಇರಲಾಗುತ್ತಿಲ್ಲ. ಕಿಟಕಿ, ಬಾಗಿಲು ಮುಚ್ಚಿಕೊಂಡರೂ ವಾಸನೆಗೆ ಇರಲಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಗಂಗಾಂಭಿಕೆ ಅಳಲು ತೋಡಿಕೊಂಡರು.
ಬಸವೇಶ್ವರ ನಗರದ ರಸ್ತೆಯ ಮ್ಯಾನ್ ಹೋಲ್ ನಿಂದ ಹರಿಯುವ ನೀರು ಸೋಮೇಶ್ವರ ಬಡಾವಣೆಯ ರಸ್ತೆಯವರೆಗೂ ಹರಿದು ಸಂಗ್ರಹವಾಗಿದೆ. ಈ ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ಮನೆಗಳಿಗೆ ಬರಬೇಕಾದರೆ ಸರಿಯಾದ ರಸ್ತೆಯಿಲ್ಲ. ಕೊಳಚೆ ನೀರಿನಲ್ಲಿ ನಡೆದು ಬರುವುದು ಅಸಹನೀಯವಾಗಿದೆ ಎಂದು ದೂರಿದರು.
ಇನ್ನು ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ಬಳಿಯೂ ಇದೇ ಅವಾಂತರ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಕ್ರಮ ಕೈಗೊಂಡಿಲ್ಲ. ಕಳೆದ ಹಲವು ದಿನಗಳಿಂದ ಮಲ ಮಿಶ್ರಿತ ಕೊಳಚೆ ನೀರು ಉಕ್ಕುತ್ತಿದ್ದರೂ ನಗರಸಭೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೂಡಲೇ ಮ್ಯಾನ್ ಹೋಲ್ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಜನಪ್ರತಿನಿಧಿಗಳು, ನಗರಸಭೆ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.