ರಸ್ತೆಗಳಲ್ಲಿ ಮೊಳೆಗಳ ರಾಶಿ: ‘ಪಂಕ್ಚರ್‌ ದಂಧೆ’ ಶಂಕೆ: ವಾಹನಗಳ ಟೈರ್‌ ಪದೇಪದೇ ಠುಸ್‌

ಜಿಲ್ಲೆಯಲ್ಲಿ ಇತ್ತೀಚೆಗೆ ವಾಹನಗಳ ಟೈರ್‌ಗಳು ಪಂಕ್ಚರ್‌ ಆಗುವ ಪ್ರಕರಣಗಳು ಹೆಚ್ಚುತ್ತಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿವೆ. ರಸ್ತೆಗಳಲ್ಲಿ ಮೊಳೆ ಹಾಗೂ ಮೊನಚಾದ ಕಬ್ಬಿಣದ ಚೂರುಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ, ವಾಹನಗಳನ್ನು ಉದ್ದೇಶಪೂರ್ವಕವಾಗಿ ಪಂಕ್ಚರ್‌ ಮಾಡಿ ಹಣ ಗಳಿಸುವ ಗುಪ್ತ ದಂಧೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸರು ಅನುಮಾನಾಸ್ಪದ ಪಂಕ್ಚರ್‌ ಅಂಗಡಿಗಳ ಮೇಲೆ ನಿಗಾ ಇರಿಸುವುದರ ಜತೆಗೆ, ಕೆಲವು ಅಂಗಡಿ ಮಾಲೀಕರಿಗೆ ನೋಟಿಸ್‌ ನೀಡಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ವಿವಿಧ ರಸ್ತೆಗಳಲ್ಲಿ ಮೊಳೆ ಹಾಗೂ ಕಬ್ಬಿಣದ ಚೂರುಗಳು ಬಿದ್ದಿರುವುದರಿಂದ ದ್ವಿಚಕ್ರ ವಾಹನ ಸವಾರರು, ಕಾರು ಚಾಲಕರು ಮತ್ತು ಸರಕು ಸಾಗಣೆ ವಾಹನಗಳ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ರಾಜ್ಯ ಹೆದ್ದಾರಿಗಳಲ್ಲಿ ಹಂಪ್ಸ್‌ಗಳ ಬಳಿ ಇಂತಹ ಚೂಪಾದ ವಸ್ತುಗಳು ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲಸಕ್ಕೆ ತೆರಳುವವರು, ವಿದ್ಯಾರ್ಥಿಗಳು ಹಾಗೂ ನಿತ್ಯ ಸಂಚರಿಸುವ ಸಾರ್ವಜನಿಕರು ಪದೇಪದೇ ಪಂಕ್ಚರ್‌ ಸಮಸ್ಯೆಗೆ ಸಿಲುಕಿ ಹಣ ಮತ್ತು ಸಮಯ ಕಳೆದುಕೊಳ್ಳುತ್ತಿದ್ದಾರೆ.

ರಸ್ತೆಗಳಲ್ಲಿ ಮೊಳೆಗಳ ಬಲೆ?

ವಾಹನಗಳ ಟೈರ್‌ಗಳಿಗೆ ಮೊಳೆ ಹಾಗೂ ಮೊನಚಾದ ಕಬ್ಬಿಣದ ಚೂರುಗಳು ಚುಚ್ಚಿಕೊಳ್ಳುತ್ತಿರುವುದರಿಂದ ಪಂಕ್ಚರ್‌ ಸಮಸ್ಯೆ ಹೆಚ್ಚುತ್ತಿದೆ. ವಿಶೇಷವಾಗಿ ಹಂಪ್ಸ್‌ಗಳ ಬಳಿ ವಾಹನಗಳ ವೇಗ ಕಡಿಮೆಯಾಗುವ ಸಂದರ್ಭದಲ್ಲಿ ಇಂತಹ ವಸ್ತುಗಳು ಟೈರ್‌ಗಳಿಗೆ ಚುಚ್ಚಿಕೊಳ್ಳುತ್ತಿವೆ ಎಂಬ ದೂರುಗಳಿವೆ.

ಕೆಲವು ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಹರಡಿ ವಾಹನಗಳನ್ನು ಪಂಕ್ಚರ್‌ ಮಾಡಲಾಗುತ್ತಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ವಾಹನ ಪಂಕ್ಚರ್‌ ಆದಾಗ ಸಮೀಪದ ಅಂಗಡಿಗೆ ತೆರಳಿ ದುರಸ್ತಿ ಮಾಡಿಸುವುದು ಅನಿವಾರ್ಯವಾಗುತ್ತದೆ. ಈ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡು ಹಣ ಗಳಿಸುವ ಉದ್ದೇಶದಿಂದ ಇಂತಹ ಕೃತ್ಯಗಳು ನಡೆಯುತ್ತಿವೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸಬೇಕಿದೆ.

ಇದು ಕೇವಲ ಹಣಕಾಸಿನ ನಷ್ಟದ ಸಮಸ್ಯೆಯಲ್ಲ. ವೇಗವಾಗಿ ಚಲಿಸುವ ವಾಹನದ ಟೈರ್‌ಗೆ ಹಾನಿಯಾದರೆ ಚಾಲಕನ ನಿಯಂತ್ರಣ ತಪ್ಪಿ ಗಂಭೀರ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಹೀಗಾಗಿ, ಪಂಕ್ಚರ್‌ ಪ್ರಕರಣಗಳ ಹಿಂದಿನ ಕಾರಣ ಪತ್ತೆಹಚ್ಚುವುದರ ಜತೆಗೆ ಸಾರ್ವಜನಿಕರ ಸುರಕ್ಷತೆಗೂ ಆದ್ಯತೆ ನೀಡಬೇಕಿದೆ.

ಪಂಕ್ಚರ್‌ ಅಂಗಡಿಗಳ ಮೇಲೆ 

ರಸ್ತೆಗಳಲ್ಲಿ ಮೊಳೆ ಹಾಗೂ ಕಬ್ಬಿಣದ ಚೂರುಗಳು ಬಿದ್ದಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಪಂಕ್ಚರ್‌ ಅಂಗಡಿಗಳ ಚಟುವಟಿಕೆಗಳ ಮೇಲೂ ಪೊಲೀಸರು ನಿಗಾ ವಹಿಸಿದ್ದಾರೆ. ಹೊಸಕೋಟೆ ಉಪವಿಭಾಗದ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು, ತಿರುಮಲಶೆಟ್ಟಿಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕೆಲವು ಪಂಕ್ಚರ್‌ ಅಂಗಡಿಗಳಿಗೆ ನೋಟಿಸ್‌ ನೀಡಲಾಗಿದೆ.

ರಾಜ್ಯ ಹೆದ್ದಾರಿಯಲ್ಲೂ ಸಮಸ್ಯೆ

ಬೆಂಗಳೂರು–ಗೌರಿಬಿದನೂರು ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಹಲವು ಕಡೆಗಳಲ್ಲಿ ಅಪಘಾತ ತಡೆಯುವ ಉದ್ದೇಶದಿಂದ ಹಂಪ್ಸ್‌ಗಳನ್ನು ಅಳವಡಿಸಲಾಗಿದೆ. ಇಂತಹ ಸ್ಥಳಗಳಲ್ಲಿ ಮೊಳೆ ಹಾಗೂ ಕಬ್ಬಿಣದ ಚೂರುಗಳು ಕಂಡುಬರುತ್ತಿರುವುದು ವಾಹನ ಸವಾರರಿಗೆ ತೊಂದರೆಯಾಗಿದೆ.

ಗುಜರಿ ವಾಹನಗಳಲ್ಲಿ ಕಬ್ಬಿಣದ ಚೂರುಗಳನ್ನು ಸಾಗಿಸುವಾಗ ಅವು ರಸ್ತೆಗೆ ಬೀಳುತ್ತಿವೆಯೇ ಎಂಬುದನ್ನೂ ಪರಿಶೀಲಿಸಬೇಕಿದೆ. ಹೆದ್ದಾರಿ ಹಾಗೂ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಬಿದ್ದಿರುವ ಚೂಪಾದ ವಸ್ತುಗಳನ್ನು ತಕ್ಷಣ ತೆರವುಗೊಳಿಸುವುದರ ಜತೆಗೆ, ಅವು ರಸ್ತೆಗಳಿಗೆ ಬೀಳಲು ಕಾರಣವೇನು ಎಂಬುದನ್ನು ಪತ್ತೆಹಚ್ಚುವುದು ಅಗತ್ಯವಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಮೊಳೆಗಳನ್ನು ಹರಡಿ ವಾಹನಗಳಿಗೆ ಹಾನಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್‌ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್‌ ಕುಮಾರ್‌ ದಾನಪ್ಪ ಅವರು ಈ ಹಿಂದೆ ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಪಂಕ್ಚರ್‌ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡುವುದರ ಜತೆಗೆ, ಇಂತಹ ಕೃತ್ಯಗಳ ಹಿಂದಿರುವವರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

ರಸ್ತೆಗಳಲ್ಲಿ ಮೊಳೆಗಳನ್ನು ಹರಡಿ ವಾಹನಗಳಿಗೆ ಹಾನಿ ಉಂಟುಮಾಡುವವರ ಬಗ್ಗೆ ನಿಗಾ ವಹಿಸಲಾಗಿದೆ. ಈ ಸಂಬಂಧ ಪಂಕ್ಚರ್‌ ಅಂಗಡಿಗಳಿಗೂ ನೋಟಿಸ್‌ ನೀಡಲಾಗಿದೆ. ಇಂತಹ ಕೃತ್ಯಗಳಲ್ಲಿ ಯಾರಾದರೂ ಭಾಗಿಯಾಗಿರುವುದು ಕಂಡುಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೊಸಕೋಟೆ ಉಪವಿಭಾಗದ ಉಪ ಪೊಲೀಸ್‌ ಅಧೀಕ್ಷಕ ಮಲ್ಲೇಶ್‌ ಹೇಳಿದ್ದಾರೆ.

ರಸ್ತೆಗಳಲ್ಲಿ ರಾಶಿ ರಾಶಿಯಾಗಿ ಮೊನಚಾದ ಕಬ್ಬಿಣದ ಚೂರುಗಳು ಹಾಗೂ ಮೊಳೆಗಳು ಬೀಳುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲಾಗುವುದು. ಪಂಕ್ಚರ್‌ ಅಂಗಡಿಗಳ ಮೇಲೆ ನಿಗಾ ಇರಿಸಲಾಗಿದ್ದು, ಬೀಟ್‌ ಪೊಲೀಸ್‌ ವ್ಯವಸ್ಥೆಯ ಮೂಲಕ ಅಂಗಡಿ ಮಾಲೀಕರಿಗೆ ಈ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಪಾಂಡುರಂಗ ತಿಳಿಸಿದ್ದಾರೆ.

Ramesh Babu

Journalist

Recent Posts

ಹಿಂಬದಿಯಿಂದ ಬೈಕ್ ಡಿಕ್ಕಿ: ಪಾದಚಾರಿ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: ತಾಲ್ಲೂಕಿನ ಕಾಡನೂರು ಕೈಮರ ಸಮೀಪದ ಆಂಜನಮೂರ್ತಿ ನಗರ ಬಳಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ…

7 hours ago

ಕುಮಾರಸ್ವಾಮಿ ಕೇಂದ್ರ ಸಚಿವರಲ್ಲ; ಕೇಂದ್ರದ ವಕ್ತಾರ, ಟೀಕಾ ಸಚಿವ – ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ‌ ವ್ಯಂಗ್ಯ

ವಿರಾಜಪೇಟೆ(ಕೊಡಗು): ಎಚ್.ಡಿ.ಕುಮಾರಸ್ವಾಮಿ ಅವರು ಒಬ್ಬ ಜವಾಬ್ದಾರಿಯುತ ಕೇಂದ್ರ ಸಚಿವರಂತೆ ವರ್ತಿಸುತ್ತಿಲ್ಲ, ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ‌ ಎಂದು…

21 hours ago

ಕೆಮ್ಮಣ್ಣುಗುಂಡಿ ಸ್ಮಶಾನ ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ನ.25ರಿಂದ ಅನಿರ್ದಿಷ್ಟಾವಧಿ ಧರಣಿ

  ದೊಡ್ಡಬಳ್ಳಾಪುರ: ನಗರದ ವಿವಾದಿತ ಕೆಮ್ಮಣ್ಣುಗುಂಡಿ ಸಾರ್ವಜನಿಕ ಸ್ಮಶಾನದ ರಸ್ತೆಯನ್ನು ಪ್ರಭಾವಿಯೊಬ್ಬರು ಅತಿಕ್ರಮಿಸಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಹಲವು ವರ್ಷಗಳಿಂದ…

21 hours ago

ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಲು ನ.30 ಕೊನೆ ದಿನ

ನವೆಂಬರ್ 30 ರೊಳಗೆ ಪಡಿತರ ಚೀಟಿದಾರರು ತಮ್ಮ ಹತ್ತಿರದ ಯಾವುದೇ ನ್ಯಾಯಬೆಲೆ ಅಂಗಡಿ ಅಥವಾ "ಅನ್ನ ಸೇವೆ" ಮೊಬೈಲ್ ಅಪ್ಲಿಕೇಶನ್…

22 hours ago

ಜ.20ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 8.04 ಲಕ್ಷ ಮತದಾರರು: ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚು; ಕರಡು ಪಟ್ಟಿ ಡಿ.1ರಂದು ಪ್ರಕಟ

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂಬಂಧಿಸಿದಂತೆ ವಿವಿಧ ಹಂತಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ವೇಳಾಪಟ್ಟಿಯ ಪ್ರಕಾರ, ನವೆಂಬರ್ 23, 2026 ರೊಳಗೆ…

24 hours ago

ಇತ್ತೀಚಿನ ದಿನಗಳ ಬಹುದೊಡ್ಡ ಬ್ರೇಕಿಂಗ್ ನ್ಯೂಸ್ ರಸ್ತೆ ಅಪಫಾತಗಳದ್ದು….

ಮತ್ತೆ ನೆನಪಿಸುವೆ....... ಚಾಲನಾ ಕಲೆ ಮತ್ತು ಅಪಘಾತ......... ದಯವಿಟ್ಟು - ಮನಸ್ಸಿಟ್ಟು - ತಾಳ್ಮೆಯಿಂದ ಓದಿ....... ಜೀವ ಅಮೂಲ್ಯ....... ಅಲ್ಲಿ…

1 day ago