ಹಾಸನ ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಹಾ ಅವರು ರಕ್ತದ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. 17 ವರ್ಷದ ವಿದ್ಯಾರ್ಥಿನಿ ನೇಹಾ ವೈದ್ಯೆಯಾಗುವ ಕನಸು ಕಂಡಿದ್ದರು. ಪ್ರತಿಭಾವಂತ ಪುತ್ರಿಯನ್ನು ಕಳೆದುಕೊಂಡ ಅತೀವ ದುಃಖದ ನಡುವೆಯೂ ಪೋಷಕರು ನೇಹಾಳ ದೇಹವನ್ನು ದಾನ ಮಾಡುವ ಮೂಲಕ ಹೃದಯ ವೈಶಾಲ್ಯತೆ ಮರೆದಿದ್ದಾರೆ.
ಹಾಸನ ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಹಾ ಅವರು ರಕ್ತದ ಕಾನ್ಸರ್ನಿಂದ ಮೃತಪಟ್ಟ ಸುದ್ದಿ ತಿಳಿದು ಮನಸ್ಸಿಗೆ ಅತೀವ ನೋವುಂಟಾಯಿತು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನೋವಿನ ನಡುವೆಯೂ ಸಾರ್ಥಕ ಭಾವ ಮೂಡಿಸಿದ ನೇಹಾಳ ಹೆತ್ತವರಿಗೆ ನನ್ನ ಹೆಮ್ಮೆಯ ನಮನಗಳು. ದೇಹ ದಾನದ ಮಹತ್ವ ಮತ್ತು ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸೋಣ ಎಂದು ಹೇಳಿದ್ದಾರೆ.