ರಕ್ತದಾನ ಮಾಡಿದರೆ ಜೀವದಾನ ಮಾಡಿದಂತೆ. ನಾವು ದಾನ ಮಾಡಿದ ರಕ್ತ ಅತಿ ಕಡಿಮೆ ಅವಧಿಯಲ್ಲೇ ದೇಹಕ್ಕೆ ಮರುಪೂರಣವಾಗುತ್ತದೆ. ನಾವು ಕೊಡುವ ಒಂದೊದು ಹನಿ ರಕ್ತಕ್ಕೂ ಬೆಲೆಕಟ್ಟಲಾಗದು ಎಂದು ಲಯನ್ ಜಿಲ್ಲಾ ರಕ್ತದಾನ ಸಂಯೋಜಕ ಜಿ.ವೆಂಕಟೇಶ್ ಹೇಳಿದರು.
ಶ್ರೀದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್‌ಕ್ರಾಸ್, ರೆಡ್‌ರಿಬ್ಬನ್ ಕ್ಲಬ್ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್, ಆರ್.ಎಲ್.ಜಾಲಪ್ಪ ಪಾಲಿಟೆಕ್ನಿಕ್ ಕಾಲೇಜು, ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆ ರಕ್ತನಿಧಿಗಳ ಸಹಯೋಗದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನಾ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವ ರಕ್ಷಕವಾದ ರಕ್ತದ ಕೃತಕ ಸೃಷ್ಟಿ ಸಾಧ್ಯವಿಲ್ಲ. ವೈದ್ಯಕೀಯ ಲೋಕ ಎಷ್ಟೇ ಮುಂದುವರೆದರೂ ಒಂದೇ ಒಂದು ಹನಿ ರಕ್ತವನ್ನೂ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಉತ್ಪಾದಿಸಲು ಸಾಧ್ಯವಾಗಿಲ್ಲ. ಹೀಗಾಗಿ ರಕ್ತದಾನದ ಮಹತ್ವ ಹೆಚ್ಚಿದೆ. ನಮ್ಮ ದೇಹದ ರಕ್ತವನ್ನು ದಾನ ಮಾಡುವ ಮೂಲಕ ನಾವು ಮತ್ತೊಬ್ಬರಿಗೆ ಬದುಕನ್ನು ಕೊಡಬಹುದು. 18 ವರ್ಷ ಮೀರಿದ ಆರೋಗ್ಯವಂತರೆಲ್ಲರೂ ರಕ್ತದಾನ ಮಾಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಅನಿವಾರ್ಯ ಸಂದರ್ಭಗಳಲ್ಲಿ ಜನರ ಪ್ರಾಣ ರಕ್ಷಣೆಗೆ ಮತ್ತು ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ನಾವು ಕೊಡುವ ರಕ್ತದ ಮಹತ್ವ ಗಣನೀಯವೆನಿಸುತ್ತದೆ. ಜಾಗತಿಕವಾಗಿ ಇಂದು ರಕ್ತದಾನದ ಮಹತ್ವ ಹೆಚ್ಚಿದೆ. ಆರೋಗ್ಯಕರ ಬದುಕಿಗೆ ಒತ್ತಾಸೆ ನೀಡುವ ನಾವುಗಳು, ನಿತ್ಯ ಎದುರಾಗುವ ಸವಾಲುಗಳಿಗೆ ಉತ್ತರ ಕಂಡುಕೊಳ್ಳಬೇಕು. ರಕ್ತದಾನ ಇತರೆ ಎಲ್ಲ ದಾನಗಳಿಗಿಂತ ಶ್ರೇಷ್ಠವಾದದ್ದು ಎಂದರು.
113 ಯೂನಿಟ್ ರಕ್ತ ಸಂಗ್ರಹ:
ಎನ್‌ಎಸ್‌ಎಸ್, ಯೂತ್ ರೆಡ್‌ಕ್ರಾಸ್, ರೆಡ್‌ರಿಬ್ಬನ್ ಕ್ಲಬ್ ಘಟಕಗಳ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಕೋಲಾರದ ಆರ್.ಎಲ್.ಜಾಲಪ್ಪ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ರಕ್ತನಿಧಿಗೆ 113 ಯೂನಿಟ್ ರಕ್ತವನ್ನು ಸಂಗ್ರಹಿಸಿ ನೀಡಲಾಯಿತು.
ಸ್ವಯಂಪ್ರೇರಿತ ರಕ್ತದಾನಿಗಳಿಂದ ರಕ್ತ ಸಂಗ್ರಹ ಮಾಡಲಾಯಿತು. ರಕ್ತದಾನಿಗಳಿಗೆ ಪ್ರಮಾಣ ಪತ್ರ, ಹಣ್ಣು-ಹಂಪಲು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ನಾಗರಾಜ್, ಲಯನ್ಸ್ ಕ್ಲಬ್ ಜಿಲ್ಲಾ ಗ್ಲೋಬಲ್ ಸರ್ವೀಸ್ ಟೀಂ ಸಂಯೋಜಕ ಬಿ.ವಿ.ರಮಣಮೂರ್ತಿ, ಪ್ರಾಂತೀಯ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್, ವಲಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷರಾದ ಜೆ.ಆರ್.ರಾಕೇಶ್, ಪ್ರೊ.ಕೆ.ಆರ್.ರವಿಕಿರಣ್, ಕಾರ್ಯದರ್ಶಿ ಮುಕೇಶ್, ಖಜಾಂಚಿ ಎಸ್.ರವಿಕುಮಾರ್, ಆರ್‌ಎಲ್‌ಜೆಪಿ ಪ್ರಾಂಶುಪಾಲ ಪ್ರೊ.ನರಸಿಂಹರೆಡ್ಡಿ, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಚಿಕ್ಕಣ್ಣ, ಆಡಳಿತಾಧಿಕಾರಿ ಐ.ಎಂ.ರಮೇಶ್‌ಕುಮಾರ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಕೆ.ಸಿ.ಲಕ್ಷ್ಮೀಶ, ರಕ್ತದಾನ ಶಿಬಿರ ಉಸ್ತುವಾರಿ ಕೆ.ದಕ್ಷಿಣಾಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.