ರಾಗಿ, ಮುಸುಕಿನ ಜೋಳದ ಬೆಳೆಗೆ ಹಾಕುವ ಯೂರಿಯಾ ರಸಗೊಬ್ಬರ ಕೊಳ್ಳಲು ರಸಗೊಬ್ಬರ ಅಂಗಡಿಗಳ ಮುಂದೆ ರೈತರು ಸಾಲುಗಟ್ಟಿನಿಂತಿದ್ದಾರೆ.
ಕಳೆದ ಒಂದು ವಾರದಿಂದ ಮಳೆ ಬೀಳುತ್ತರುವ ಹಿನ್ನೆಲೆ ಬೆಳೆಗಳಿಗೆ ಕಳೆ ಬಂದಿದೆ. ಉತ್ತಮ ಫಸಲು ಬರಲೆಂದು ರೈತರು ಯೂರಿಯಾ ರಸಗೊಬ್ಬರ ಕೊಳ್ಳಲು ಮುಗಿಬಿದ್ದಿದ್ದಾರೆ.
ನಗರ ಸೇರಿದಂತೆ ತಾಲ್ಲೂಕಿನ ಎಲ್ಲಾ ರಸಗೊಬ್ಬರ ಮಾರಾಟದ ಅಂಗಡಿಗಳಲ್ಲೂ ಯೂರಿಯಾ ರಸಗೊಬ್ಬರ ದಾಸ್ತಾನು ಖಾಲಿಯಾಗಿದೆ ಎಂಬ ಮಾಹಿತಿ ಕೇಳಿ ಬಂದಿದೆ. ನಗರದ ಟಿಎಪಿಎಂಸಿಎಸ್ ಮಾರಾಟ ಮಳಿಗೆಯಲ್ಲಿ ಮಾತ್ರ 29 ಟನ್ ದಾಸ್ತಾನು ಇದ್ದು, ಬುಧವಾರ ಬೆಳಗಿನಿಂದಲೆ ನೂರಾರು ಜನ ರೈತರು ಯೂರಿಯಾ ಖರೀದಿಸಲು ಸಾಲುಗಟ್ಟಿ ನಿಂತಿದ್ದಾರೆ.
ಯೂರಿಯಾ ರಸಗೊಬ್ಬರ ದಾಸ್ತಾನು ಕೊರತೆ ಇರುವ ಹಿನ್ನೆಲೆ ಒಬ್ಬ ರೈತರಿಗೆ ಒಂದು ಚೀಲ ಮಾತ್ರ ನೀಡಲಾಗುತ್ತಿದೆ.
ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಮಂಗಳೂರಿನಿಂದ ಯೂರಿಯಾ ತುಂಬಿದ ಗೂಡ್ಸ್ ರೈಲು ಬರುವುದು ವಿಳಂಬವಾಗಿರುವುದರಿಂದ ಇನ್ನೂ ನಾಲ್ಕು ದಿನಗಳ ಒಳಗೆ 150 ಟನ್ ಬರಲಿದೆ ಎನ್ನಲಾಗಿದೆ.