ಭಾರತವು ಯುವ ಸಮುದಾಯದಿಂದ ಕೂಡಿದ್ದು, ದೇಶವು ಆರ್ಥಿಕವಾಗಿ, ಸಮಾಜಿಕವಾಗಿ ಸೇರಿದಂತೆ ಎಲ್ಲಾ ರಂಗದಲ್ಲೂ ಸದೃಢವಾಗಬೇಕಾದರೆ ಯುವ ಸಮುದಾಯದ ಪಾತ್ರ ಪ್ರಮುಖವಾಗಿರುತ್ತದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ತಾಲೂಕಿನ ರಘುನಾಥಪುರ ಗ್ರಾಮದ ಖಾಸಗಿ ಕಲ್ಯಾಣ ಮಂಟಪದಲ್ಲಿಂದು ಅಂಜನಾದ್ರಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಮುದಾಯವು ಸರ್ಕಾರ ಹಾಗೂ ಸಮಾಜದ ವ್ಯವಸ್ಥೆಯನ್ನು ಪ್ರಶ್ನಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಭ್ರಷ್ಟಾಚಾರದಂತಹ ಪಿಡುಗುಗಳನ್ನು ಮಟ್ಟ ಹಾಕಲು ಯುವ ಕ್ರಾಂತಿಯಿಂದ ಸಾಧ್ಯ. ಯುವಕರು ಕೇವಲ ಪದವಿ ಪಡೆಯುವ ನಿಟ್ಟಿನಲ್ಲಿ ತಮ್ಮ ಗುರಿಯನ್ನು ಹೊಂದಬಾರದು. ಬದಲಿಗೆ ಜ್ಞಾನದ ಜೊತೆಗೆ ಸೃಜನಶೀಲ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲವಾಗಬೇಕು ಎಂದರು.
ಸಿಇಟಿಯಲ್ಲಿ ಸರಕಾರಿ ಸೀಟುಗಳಿಸಿದ ಹತ್ತು ವಿದ್ಯಾರ್ಥಿಳಿಗೆ ವಾರ್ಷಿಕ ಶುಲ್ಕವನ್ನು ಕಟ್ಟಲಾಗುವುದು ಎಂದು ವಿದ್ಯಾರ್ಥಿಗಳಿ ಭರವಸೆ ನೀಡಿದರು.
ಮುಂಬರುವ ದಿನಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳ ಮೂಲಕ ಸರಕಾರದ 28 ಇಲಾಖೆಯ ಅಧಿಕಾರಿಗಳ ದೂರವಾಣಿ ಸಂಖ್ಯೆ ಸೇರಿದಂತೆ ನಿಮ್ಮ ಅಗತ್ಯ ಸರಕಾರಿ ಕೆಲಸಗಳಿಗೆ ಅನುಕೂಲವಾಗುವಂತ ವ್ಯವಸ್ಥೆಯನ್ನು ಶೀಘ್ರದಲ್ಲೇ ಪ್ರಾರಂಭಿಸುತ್ತೇನೆ. ಮೇ 13ಕ್ಕೆ ನಾನು ಶಾಸಕನಾಗಿ ಒಂದು ವರ್ಷಪೂರ್ಣಗೊಳ್ಳಲಿದ್ದು, ಆ ದಿನ ಪತ್ರಿಕಾಗೋಷ್ಠಿ ನಡೆಸಿ ನನ್ನ ಒಂದು ವರ್ಷದ ಸಾಧನೆಯನ್ನು ದಾಖಲೆ ಸಮೇತ ಜನರ ಮುಂದೆ ಇಡುತ್ತೇನೆ ಎಂದು ಹೇಳಿದರು.
ತಾಲೂಕಿಗೆ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ನಿರ್ಮಾಣಕ್ಕೆ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿಲಾಗಿದೆ. ಇದನ್ನು ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಕ್ರೇಡಿಟ್ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ. ದೊಡ್ಡಬಳ್ಳಾಪುರದ ಶಾಸಕನಾಗಿ ಆರೋಗ್ಯ ಸಚಿವರಿಗೆ ಪತ್ರ ಮುಖೇನ ಮನವಿಯನ್ನು ಸಲ್ಲಿಸಿದ್ದು, ಸದನದಲ್ಲಿ ಈ ಬಗ್ಗೆ ಗಮನ ಸೆಳೆದಿದ್ದೇನೆ. ಇಲ್ಲಿ ನಾನು ಎಂಬ ಕ್ರೆಡಿಟ್ ತೆಗೆದುಕೊಳ್ಳುತ್ತಿಲ್ಲ ಕ್ಷೇತ್ರದ ಜನತೆಗೆ ಶಾಸಕನಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಬಿಜೆಪಿಯ ಪ್ರಮುಖ ಮುಖಂಡರು ಸೇರಿದಂತೆ ನಗರ ಸಭಾ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.