ಯುವ ಜನತೆ ಕೃಷಿಯನ್ನು ಸಮರ್ಥಗೊಳಿಸಲು ಕೈಜೋಡಿಸಿ-ರೋಣ್ಣಿರಾಜು

ರೈತರು ಕೇವಲ ಒಂದು ಬೆಳೆಗಳಿಗೆ ಮಾತ್ರ ಸೀಮಿತವಾಗದೆ, ಪಶುಪಾಲನೆಯಂತಹ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಗ್ರ ಕೃಷಿಯನ್ನು ಮಾಡಬೇಕೆಂದರಲ್ಲದೆ, ಕರ್ನಾಟಕವು ಎಲ್ಲ ರೀತಿಯ ಬೆಳೆಗಳನ್ನು ಬೆಳೆಯಲು ಅಗತ್ಯವಿರುವ ಹವಾಮಾನ ಮತ್ತು ವಾಯುಗುಣ ಹೊಂದಿರುವುದರಿಂದ ಯುವ ಜನತೆ ಕೃಷಿಯನ್ನು ಸಮರ್ಥಗೊಳಿಸಲು ಕೈಜೋಡಿಸಬೇಕೆಂದು ನಬಾರ್ಡ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ಪ್ರಬಂಧಕರಾದ ರೋಣ್ಣಿರಾಜು ಅವರು ಹೇಳಿದರು.

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಬಾರ್ಡ್ ಸಂಸ್ಥೆ, ರುಡ್‌ಸೆಟ್ ಸಂಸ್ಥೆ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರ ಇವರ ಸಹಯೋಗದಲ್ಲಿ ನೆಲಮಂಗಲ ತಾಲ್ಲೂಕಿನ ಅರಶಿನಕುಂಟೆಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿಂದು ಆಯೋಜಿಸಲಾಗಿದ್ದ ನಬಾರ್ಡ್ ಸಂಸ್ಥೆಯ ಸಾಧನೆ ಹಾಗೂ ಆರ್ಥಿಕ ಸಾಕ್ಷರತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.

ನಬಾರ್ಡ್ ಎಂಬುದು ಕೃಷಿ ಮತ್ತು ಗ್ರಾಮಾಭಿವೃದ್ಧಿಗಾಗಿ ಬ್ಯಾಂಕ್‌ ಹಾಗೂ ಒಕ್ಕೂಟಗಳಿಗೆ ಹಣಕಾಸಿನ ನೆರವು ನೀಡುವ ಸಂಸ್ಥೆಯಾಗಿದ್ದು, ರೈತರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರಲ್ಲದೆ, ಕುಟುಂಬದ ಸದಸ್ಯರಿಗೆ ಮಾಹಿತಿಯನ್ನು ರವಾನಿಸಬೇಕೆಂದು ವಿದ್ಯಾರ್ಥಿಗಳು ಹಾಗೂ ಶಿಬಿರಾರ್ಥಿಗಳಿಗೆ ತಿಳಿಸಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌(ಕೆನರಾ ಬ್ಯಾಂಕ್)ನ ವ್ಯವಸ್ಥಾಪಕರಾದ ಮಧುಕರ್ ಅವರು ಮಾತನಾಡಿ, ವಿವಿಧತೆಯಲ್ಲಿ ಏಕತೆ ಸಾಧಿಸಿರುವ ನಮ್ಮ ದೇಶವು ಸ್ವಾತಂತ್ರ್ಯ ಪಡೆದು 75 ವರ್ಷ ಸಾಧಿಸಿರುವುದು ಅಭಿನಂದನಾರ್ಹ ವಿಷಯವಾಗಿದೆ ಎಂದರು. ಅಲ್ಲದೆ, ಬ್ಯಾಂಕ್‌ ವ್ಯವಹಾರ, ಯೋಜನೆಗಳ ವಿವರ, ಸಾಮಾಜಿಕ ಭದ್ರತಾ ಯೋಜನೆ, ವಿಮೆ ಯೋಜನೆಗಳು, ಡಿಜಿಟಲ್ ಬ್ಯಾಂಕಿಂಗ್, ಶೈಕ್ಷಣಿಕ ಸಾಲ ಸೇರಿದಂತೆ ಆರ್ಥಿಕ ಸಾಕ್ಷರತೆ ಕುರಿತು ಮಾಹಿತಿ ನೀಡಿದರು.

ಯುವಜನತೆ ಸ್ವ ಉದ್ಯೋಗ ಮಾಡಲು ಮತ್ತು ಕೌಶಲ್ಯಗಳನ್ನು ಹೊಂದಲು ಇರುವ ಅವಕಾಶ ಹಾಗೂ ಸಾಲ ಸೌಲಭ್ಯದ ಕುರಿತು ಅರಿವು ಮೂಡಿಸಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ನೆಲಮಂಗಲ ಶಾಖೆಯ ವ್ಯವಸ್ಥಾಪಕರಾದ ಮಂಜುನಾಥ್ ಅವರು ಮಾತನಾಡಿ, ಬೆಳೆ ಸಾಲ ಪಡೆಯಲು ಅರ್ಹತೆ, ಮಾನದಂಡ ಹಾಗೂ ಇನ್ನಿತರ ಮಾಹಿತಿ ನೀಡಿದರಲ್ಲದೆ, ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲ ಹಾಗೂ ಪಿಂಚಣಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಜೆ.ಆನಂದ್, ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ನೆಲಮಂಗಲ ಶಾಖೆಯ ವ್ಯವಸ್ಥಾಪಕರಾದ ಸುರೇಶ್, ಬಿಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕರಾದ ಆನಂದ್, ಆರ್ಥಿಕ ಸಾಕ್ಷರತೆಯ ಸಮಾಲೋಚಕರಾದ ಮಹಂತೇಶಯ್ಯ, ಜ್ಞಾನ ಮಂದಿರ ಕಾಲೇಜಿನ ಪ್ರಾಂಶುಪಾಲರಾದ ಡಾ.ಶ್ರೀಕಾಂತ ಸೇರಿದಂತೆ ರುಡ್‌ಸೆಟ್ ಸಂಸ್ಥೆಯ ಸಿಬ್ಬಂದಿಗಳು, ಶಿಬಿರಾರ್ಥಿಗಳು ಹಾಗೂ ಜ್ಞಾನ ಮಂದಿರ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *