
ಯುವನಿಧಿ ಯೋಜನೆಯಡಿ ಪದವೀಧರರು ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ, ಫಲಾನುಭವಿಗಳ ಆಸಕ್ತಿ ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೌಶಲ್ಯ ತರಬೇತಿ ನೀಡಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು ತಿಳಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲೆಯಲ್ಲಿನ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೆರವು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪದವಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕಲಿಕೆ ಜೊತೆಗೆ ಕೌಶಲ್ಯ ತರಬೇತಿಗಳನ್ನು ನೀಡಿದರೆ ಭವಿಷ್ಯದಲ್ಲಿ ಅವರ ಸಾಮರ್ಥ್ಯಕ್ಕೆ ಅನುಸಾರ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ನೆರವು ಕಲ್ಪಿಸಬೇಕು. ತರಬೇತಿ ಸಂಸ್ಥೆಗಳ ಮೂಲಕ ನಿರುದ್ಯೋಗ ಯುವಕ ಯುವತಿಯರಿಗೆ ಕೌಶಲ್ಯಾಧಾರಿತ ತರಬೇತಿ ಕಲ್ಪಿಸಿ ಎಂದರು.
ಜಿಲ್ಲೆಯಲ್ಲಿನ ಕೈಗಾರಿಕೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳ ವಿವರ ಪಡೆದು ಭರ್ತಿ ಮಾಡಿಕೊಳ್ಳಲು ಕೈಗಾರಿಕಾ ಮುಖ್ಯಸ್ಥರ ಸಭೆ ನಡೆಸಿ. ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜನೆಗೆ ಸಿದ್ಧತೆ ಕೈಗೊಳ್ಳಿ ಇದರಿಂದ ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಒದಗಿಸಲು ಸಹಕಾರಿ ಆಗಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗನ್ನಾಥ, ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್ ಮತ್ತು ಪದವಿ ಮತ್ತು ಡಿಪ್ಲೊಮಾ ಕಾಲೇಜುಗಳ ಪ್ರಾಂಶುಪಾಲರು, ಕೈಗಾರಿಕಾ ಸಂಘದ ಅಧ್ಯಕ್ಷರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.