ವಾಟ್ಸ್ ಆಪ್, ಇನ್ಸ್ಟಾಗ್ರಾಮ್, ಸ್ನ್ಯಾಪ್ ಚಾಟ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಿಂದ ಯುವತಿಯರನ್ನು ಪರಿಚಯಿಸಿಕೊಂಡು ಅವರ ಫೋಟೋಗಳನ್ನು ಡೌನ್ಲೋಡ್ ಮಾಡಿಕೊಂಡು ಹಾಗೂ ತಾನು ಕೆಲಸ ಮಾಡುವ ಕಂಪನಿಯ ಸಹೋದ್ಯೋಗಿ ಯುವತಿಯರ ಫೋಟೋ ಮಾರ್ಫ್ ಮಾಡುತ್ತಿದ್ದ ಕಾಲ್ಸೆಂಟರ್ ಉದ್ಯೋಗಿಯನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಹೋದ್ಯೋಗಿ ಹುಡುಗಿಯರ ಫೋಟೋ ಮಾರ್ಫ್ ಮಾಡುತ್ತಿರುವುದಾಗಿ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯ ಲೀಗಲ್ ಹೆಡ್ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತನಿಖೆ ವೇಳೆ ಆರೋಪಿಯು ತನ್ನ ಮೊಬೈಲ್ ನಲ್ಲಿ ಸುಮಾರು 12 ಸಾವಿರ ಯುವತಿಯರು, ಮಹಿಳೆಯರ ಫೋಟೋಗಳನ್ನು ಹೊಂದಿದ್ದು, ವಾಟ್ಸ್ ಆಪ್, ಇನ್ಸ್ಟಾಗ್ರಾಮ್, ಸ್ನ್ಯಾಪ್ ಚಾಟ್ ಗಳಿಂದ ಫೋಟೋ ಡೌನ್ಲೋಡ್ ಮಾಡಿ, ಮಾರ್ಫ್ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದನೆಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ತಿಳಿಸಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳನ್ನು ಖಾಸಗಿಯಾಗಿಟ್ಟುಕೊಳ್ಳುವಂತೆ ಮತ್ತು ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ವೈಯಕ್ತಿಕವಾಗಿ ತಿಳಿದಿರುವವರೊಂದಿಗೆ ಮಾತ್ರ ಹಂಚಿಕೊಳ್ಳುವಂತೆ ಬೆಂಗಳೂರು ನಗರ ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪ್ರತಿಷ್ಠಿತ ಇನ್‌ಶೂರೆನ್ಸ್ ಕಂಪನಿಗಳ ಹೆಸರಿನಲ್ಲಿ ಹಿರಿಯ ನಾಗರೀಕರಿಗೆ ವಂಚನೆ
ಅದೇರೀತಿ ಪ್ರತಿಷ್ಠಿತ ಇನ್‌ಶೂರೆನ್ಸ್ ಕಂಪನಿಗಳ ಹೆಸರಿನಲ್ಲಿ ಅವಧಿಪೂರ್ವ ಪಾಲಿಸಿಗಳನ್ನು ಹಿರಿಯ ನಾಗರೀಕರಿಗೆ ನೀಡುವುದಾಗಿ ವಂಚಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಪಾಲಿಸಿಯ ಹಣವನ್ನು ಪಡೆಯಲು ಮುಂಗಡವಾಗಿ ಹಣ ಪಾವತಿಸುವಂತೆ ಅಮಾಯಕ ಜನರಿಂದ ಸುಮಾರು 1 ಕೋಟಿ 80ಲಕ್ಷ ರೂ. ಗಳನ್ನು ಸಂಗ್ರಹಿಸಿದ್ದು, ಈ ಹಣದ ಪೈಕಿ 40 ಲಕ್ಷ ಹಣವನ್ನು ತನ್ನ ಸ್ವಂತ ಖಾತೆಗೆ ಜಮಾ ಮಾಡಿಕೊಂಡು ಹಿರಿಯ ನಾಗರೀಕರಿಗೆ ವಂಚನೆ ಮಾಡಿರುವ ಬಗ್ಗೆ ವಿಚಾರಣೆಯಿಂದ ಬೆಳಕಿಗೆ ಬಂದಿರುತ್ತವೆ.
ಅಲ್ಲದೆ ಇದೇ ರೀತಿ ಸೈಬರ್ ವಂಚನೆಯ ಹಲವು ಪ್ರಕರಣಗಳು ತನಿಖೆ ವೇಳೆ ಪತ್ತೆಯಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.