
ವ್ಯಕ್ತಿಯೊಬ್ಬರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ದಿರ್ಹಮ್(ಹಣ) ತೋರಿಸಿ ಭಾರತ ದೇಶದ ಲಕ್ಷ ಲಕ್ಷ ಹಣ ದೋಚುತ್ತಿದ್ದ ಅಂತಾರಾಜ್ಯ ಮೋಸಗಾರರನ್ನು ಬಂಧನ ಮಾಡುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಎ2 ಆರೋಪಿ ಶೇಖ್ ಸಲ್ಮಾ ಬಾನು(35), ಎ3 ಆರೋಪಿ ಮೊಹಮ್ಮದ್ ಮಿಲ್ಲನ್ (32) ಬಂಧಿತರು. ಎ1 ಆರೋಪಿ ತಲೆ ಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ.
ಚಿಕ್ಕಬಳ್ಳಾಪುರ ಮೂಲದ ಟೂರ್ಸ್ ಅಂಡ್ ಟ್ರಾವೆಲ್ಸ್ ವ್ಯವಹಾರ ಮಾಡುತ್ತಿದ್ದ ಅಲ್ಲಾಬಖಶ್ ಎಂಬ ವ್ಯಕ್ತಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ದಿರ್ಹಮ್(ಹಣ) ತೋರಿಸಿ 6 ಲಕ್ಷ ಪೀಕಿ ಮೋಸ ಮಾಡಲಾಗಿದೆ.
100 ದಿರ್ಹಮ್ ನ ನೋಟನ್ನು ತೋರಿಸಿ ಈ ರೀತಿಯ ದಿರ್ಹಮ್ ತನ್ನ ಬಳಿ ಹೆಚ್ಚಿಗೆ ಇದ್ದು ಇನ್ನು ಕಡಿಮೆ ಬೆಲೆಗೆ ಕೊಡುತ್ತೇನೆ ಎಂದು ಹೇಳಿ ದೂರುದಾರನನ್ನು ಆ.23ರಂದು ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರದ ಬಾಶೆಟ್ಟಹಳ್ಳಿಗೆ ಕರೆಸಿಕೊಂಡು ಅವರಿಗೆ ದಿರ್ಹಮ್ ಅನ್ನು ತೋರಿಸಿ ಆಸೆ ಹುಟ್ಟಿಸಿ ಬಲಬಾಗಿ ನಂಬಿಸಿದ್ದಾರೆ.
ಮರುದಿನ ಅಂದರೆ ಆ.24ರಂದು ಬೆಳಿಗ್ಗೆ 8.00 ಗಂಟೆಗೆ ಮತ್ತೆ ದೂರುದಾರನು 6 ಲಕ್ಷ ಹಣವನ್ನು ತೆಗೆದುಕೊಂಡು ಬಂದು ಆರೋಪಿಗಳಿಗೆ ನೀಡಿರುತ್ತಾರೆ. ದೂರುದಾರನಿಂದ ಭಾರತ ದೇಶದ ರೂ. 6 ಲಕ್ಷ ಹಣವನ್ನು ಪಡೆದ ಆರೋಪಿಗಳು, ಯುನೈಟೆಡ್ ಅರಬ್ ಎಮಿರೇಟ್ಸ್ ನ ದಿರ್ಹಮ್(ಹಣ) ಇದ್ದ ಬ್ಯಾಗ್ ನ್ನು ದೂರುದಾರನಿಗೆ ಕೊಟ್ಟು ಎಸ್ಕೇಪ್ ಆಗಿದ್ದಾರೆ. ಆರೋಪಿಗಳು ನೀಡಿದ್ದ ಬ್ಯಾಗನ್ನು ಪಡೆದುಕೊಂಡು ಬಂದು ಪರಿಶೀಲಿಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಬ್ಯಾಗ್ ನಲ್ಲಿ ದಿರಮ್ಸ್ ಬದಲಿಗೆ ಬಿಳಿಯ ಪೇಪರ್ಗಳು ಇದ್ದವು.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಣ ಕಳೆದುಕೊಂಡ ಅಲ್ಲಾಬಖಶ್ ದೂರು ದಾಖಲು ಮಾಡುತ್ತಾರೆ. ದೂರು ದಾಖಲಿಸಿಕೊಂಡ ಪೊಲೀಸರು, ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಚಂದ್ರಕಲಾ ಹಾಗೂ ಸಿಬ್ಬಂದಿಯವರಾದ ಸುನಿಲ್ ಬಾಸಗಿ, ಫೈರೋಜ್ ಕೆ, ಪ್ರವೀಣ್, ಸಚಿನ್ ಉಪ್ಪಾರ್ ತಂಡವು, ಆರೋಪಿಗಳ ಜಾಡು ಪತ್ತೆ ಮಾಡಿ ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಎ1 ಆರೋಪಿ ತಲೆಮರೆಸಿಕೊಂಡಿದ್ದು, ಎ1 ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
23.98 ಭಾರತೀಯ ರೂಪಾಯಿಗೆ 1 ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಮ್ ಸಮ
ಘಟನೆ ವಿವರ….
ದೂರುದಾರ ಅಲ್ಲಾಬಖಶ್ ಆದ ನಾನು ಚಿಕ್ಕಬಳ್ಳಾಪುರದ ದರ್ಗಾ ಮೋಹಲ್ಲಾದಲ್ಲಿ ಮಕ್ಕಾ ಟೂರ್ಸ್ ಎಂಬ ಟೂರ್ಸ್ ಅಂಡ್ ಟ್ರಾವೆಲ್ಸ್ ಆಫೀಸ್‌ಅನ್ನು ಇಟ್ಟುಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನನಗೆ ಚಿಕ್ಕಬಳ್ಳಾಪುರದ ಎಂಜಿ ರಸ್ತೆಯಲಿ ಇರುವ ಮೆಹಬೂಬ್ ಜಾನ್ ನವರು ಪರಿಚಯವಿದ್ದು ನನ್ನ ಸ್ನೇಹಿತರಾಗಿರುತ್ತಾರೆ. ಇವರು ವ್ಯವಸಾಯದ ಕೆಲಸ ಮಾಡಿಕೊಂಡಿರುತ್ತಾರೆ. ಮೆಹಬೂಬ್ ಜಾನ್ ನವರು ಚಿಕ್ಕಬಳ್ಳಾಪುರದ ಎಂಜಿ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಆಗಾಗ್ಗೆ ಹೋಗಿ ಕುಳಿತುಕೊಳ್ಳುತ್ತಿದ್ದರು. ದಿನಾಂಕ 21/08/2025 ರಂದು ಮಹಬೂಬ್ಬಾನವರು ನನಗೆ ಫೋನ್ ಮಾಡಿ ಯಾರೋ ಒಬ್ಬ ವ್ಯಕ್ತಿ ಅಂಗಡಿ ಬಳಿ ಬಂದು ಅರಬ್ ಎಮಿರೇಟ್ಸ್, ದಿರಮ್ಸ್ ಹಣವನ್ನು ತಂದಿದ್ದಾನೆ ಅವನಿಗೆ ನಮ್ಮ ದೇಶದ ಹಣ ಬೇಕಂತೆ ಹಣವನ್ನು ಅದಲುಬದಲು ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾನೆ.
ಆತ ನಿನಗೆ ಉಪಯೋಗವಾಗುವ ಹಾಗೆ ಇದ್ದರೆ ನೀನು ಅದಲುಬದಲು ಮಾಡಿಕೊಳ್ಳಿ ಎಂದು ತಿಳಿಸಿದ್ದು. ನನಗೆ 100 ದಿರಮ್ಸ್ ನ ನೋಟನ್ನು ಕಳುಹಿಸಿದ್ದು ಅವನ ಫೋನ್ ನಂಬರ್ ಅನ್ನು ನೀಡಿದ್ದರು. ನಾನು ನೋಟನ್ನು ನೋಡಿ ಟೂರ್ಸ್ ಅಂಡ್ ಟ್ರಾವೆಲ್ಸ್ ಕೆಲಸ ಮಾಡುತ್ತಿದ್ದರಿಂದ ಉಪಯೋಗವಾಗುತ್ತದೆ ಎಂದು ಅಂದುಕೊಂಡು ದಿರಮ್ಸ್ ಅನ್ನು ತರುವಂತೆ ಹೇಳಿದ್ದೇನು.
ಆಸಾಮಿಯ ಬಳಿ ಎಷ್ಟು ದಿರಮ್ಸ್ ಇದೆ ಎಂದು ಕೇಳಿದಾಗ 6.00.000/- ರೂನ ದಿರಮ್ಸ್ ಇದೇ ಎಂದು ತಿಳಿಸಿದ್ದು ಅದರಂತೆ ನಾನು ಮತ್ತು ಮೆಹಬೂಬ್ ಜಾನ್ ದಿನಾಂಕ 23/8/2025 ರಂದು ದೊಡ್ಡಬಳ್ಳಾಪುರದ ಬಾಶೆಟ್ಟಹಳ್ಳಿ ಬಳಿ ಬರುವಂತೆ ತಿಳಿಸಿದ್ದು ಅದರಂತೆ ನಾವು ಬೆಳಿಗ್ಗೆ 9.00 ಗಂಟೆಗೆ ಬಂದಿದ್ದು, ಆಸಾಮಿಯು ತನ್ನ ಬಳಿ ಇದ್ದ ದಿರಮ್ಸ್ ಅನ್ನು ತೋರಿಸಿದ್ದನು. ಆ ನೋಟುಗಳನ್ನು ನೋಡಿಕೊಂಡು ನಾಳೆ ಬರುತ್ತೇವೆ ಎಂದು ಹೇಳಿ ವಾಪಸ್ಸು ಚಿಕ್ಕಬಳ್ಳಾಪುರಕ್ಕೆ ಹೋದೆವು.
ಮರುದಿನ ದಿನಾಂಕ 24/08/2025 ರಂದು ಬೆಳಿಗ್ಗೆ 8.00 ಗಂಟೆಗೆ ನಾನು, ಮೆಹಬೂಬ್ ಜಾನ್ ಮತ್ತು ಹಿಮಾಯತುಲ್ಲ 3 ಜನರು 6.00.000/- ಹಣವನ್ನು ತೆಗೆದುಕೊಂಡು ದೊಡ್ಡಬಳ್ಳಾಪುರದ ಬಾಶೆಟ್ಟಹಳ್ಳಿ ಬಳಿ ಬಂದು ಕಾಯುತ್ತಿದ್ದಾಗ ಆಸಾಮಿಯ ಜೊತೆಯಲ್ಲಿ ಇನ್ನೊಬ್ಬ ಆಸಾಮಿ ಮತ್ತು ಮಹಿಳೆ ಒಂದು ದ್ವಿಚಕ್ರ ವಾಹನದಲ್ಲಿ ಬಂದಿದ್ದು ಮೊದಲ ದಿನ ತಂದಿದ್ದ ದಿರಮ್ಸ್ ಬ್ಯಾಗ್ ಅನ್ನು ತೋರಿಸಿ ನಮ್ಮ ಕಡೆಯಿಂದ ಹಣವನ್ನು ಪಡೆದುಕೊಂಡು ಅವರ ಬಳಿ ಇದ್ದ ದಿರಮ್ಸ್ ಬ್ಯಾಗನ್ನು ನೀಡಿ ಅವರು ಮೂರು ಜನರು ಹೊರಟು ಹೊದರು.
ಅವರು ನೀಡಿದ್ದ ಬ್ಯಾಗನ್ನು ಪಡೆದುಕೊಂಡು ಬಂದು ಪರಿಶೀಲಿಸಲಾಗಿ ಅದರಲ್ಲಿ ದಿರಮ್ಸ್ ಇಲ್ಲದೆ ಬಿಳಿಯ ಪೇಪರ್ಗಳು ಇದ್ದವು.
ಮೂರು ಜನ ಅಸಾಮಿಗಳು ನಮಗೆ ಮೋಸ ಮಾಡುವ ಉದ್ದೇಶದಿಂದ ನಮ್ಮ ಬಳಿ 6.00.000/- ರೂ ಹಣವನ್ನು ಪಡೆದುಕೊಂಡು ದಿರಮ್ಸ್ ನೀಡುವುದಾಗಿ ಹೇಳಿ ನಂಬಿಸಿ ಮೋಸ ಮಾಡಿ ನಮಗೆ ದಿರಮ್ಸ್ ನೀಡದೆ ಬಿಳಿಯ ಹಾಳೆಗಳನ್ನು ನೀಡಿರುತ್ತಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.