ಬಿಸಿಲಿನ ತಾಪಮಾನದ ಜೊತೆಗೆ ಯುಗಾದಿ, ರಂಜಾನ್, ಶ್ರೀರಾಮ ನವಮಿ ಹೀಗೆ ಸಾಲು ಸಾಲು ಹಬ್ಬಗಳು. ಹಬ್ಬವೆಂದ ಕೂಡಲೇ ಸಂಭ್ರಮ, ಸಡಗರ. ಯಾವುದೇ ಹಬ್ಬ ಬಂತೆಂದರೆ ಸಂಭ್ರಮ, ಸಡಗರದ ಜೊತೆಗೆ ಮನೆ ಯಜಮಾನನ ಜೇಬಿನಲ್ಲಿರುವ ಹಣ ಕೂಡ ಖರ್ಚಾಗುತ್ತದೆ.
ಅದರಲ್ಲೂ ಯುಗಾದಿ ಹಬ್ಬದಂದು ಪ್ರಕೃತಿಯೇ ಹೊಸ ಹುಟ್ಟು ಪಡೆಯುವ, ಮುಖ್ಯವಾಗಿ ಸಸ್ಯ ಲೋಕ ಚಿಗುರಿದಾಗ ಕಾಣುವ ಸಂಭ್ರಮ ನಮ್ಮ ಅರಿವಿಗೆ ಬರುತ್ತದೆ……..
ಯುಗಾದಿ ಬಂತೆಂದರೆ ಮಾರುಕಟ್ಟೆ, ಬಟ್ಟೆ ಅಂಗಡಿ, ದಿನಸಿ ಅಂಗಡಿ ಹೀಗೆ ಎಲ್ಲೆಡೆ ವ್ಯಾಪಾರ ಜೋರಾಗಿರುತ್ತದೆ. ಬಿಸಿಲ ತೀವ್ರತೆ ಹಾಗೂ ಮಾಸಾಂತಕ್ಕೆ ಹಬ್ಬ ಬಂದಿರುವುದರಿಂದ ಜನರಲ್ಲಿ ಹಬ್ಬದ ಉತ್ಸಾಹಕ್ಕೇನು ಕಡಿಮೆ ಇಲ್ಲ.
ದೊಡ್ಡಬಳ್ಳಾಪು ನಗರದ ಮಾರುಕಟ್ಟೆಯಲ್ಲಿ ನಾಳಿನ ಯುಗಾದಿ ಹಬ್ಬಕ್ಕೆ ಇಂದೇ (ಶನಿವಾರ) ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು.
ಮಾವಿನ ತಳಿರು, ಬೇವಿನ ಹೂವು, ಪುಟಾಣಿ ಮಿಶ್ರಿತ ಎಳ್ಳುಬೆಲ್ಲ, ಹೂವು, ಹಣ್ಣುಗಳನ್ನು ಜನರು ಖರೀದಿಸುತ್ತಿದ್ದಾರೆ.
ಬಟ್ಟೆ ಅಂಗಡಿಗಳು, ಹೂವಿನ ಮಾರುಕಟ್ಟೆ, ಸಿಹಿ ತಿನಿಸುಗಳ ಮಾರಾಟ ಅಂಗಡಿ ಮತ್ತು ತರಕಾರಿ ಅಂಗಡಿಗಳಲ್ಲಿ ಜನದಟ್ಟಣೆ ಕಂಡುಬಂದಿತು. ಗ್ರಾಮೀಣ ಭಾಗದ ಜನರು ಹಬ್ಬದ ಪದಾರ್ಥಗಳ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಮಾರುಕಟೆಯಲ್ಲಿ ಕೆಲವೊಂದು ಸಾಮಾಗ್ರಿಗಳ ದರ ಇಳಿಕೆ, ಏರಿಕೆ ಇದ್ದರೂ ಖರೀದಿ ಪ್ರಕ್ರಿಯೆಯಲ್ಲಿ ಗ್ರಾಹಕರು, ಮಾರಾಟ ಮಾಡುವಲ್ಲಿ ಮಾರಾಟಗಾರರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಹೂ ಬೆಲೆ ತುಸು ಏರಿಕೆ:
ಒಂದು ಕೆ.ಜಿ ಬಿಳಿ ಸೇವಂತಿಗೆ ಬೆಲೆ 300-350ರೂ.
ಹಳದಿ ಸೇವಂತಿಗೆ ಒಂದು ಕೆಜಿಗೆ 280-300ರೂ.
ಕನಕಾಂಬರ ಕೆಜಿ 1 ಸಾವಿರ, ಮೊಳ 50-80ರೂ.
ಮಲ್ಲಿಗೆ ಹೂ ಕೆಜಿ 2 ಸಾವಿರ, ಮೊಳ 100 ರೂ.
ಬಟನ್ಸ್ ಕೆ.ಜಿ 200 ರೂ.
ಚೆಂಡು ಹೂ ಕೆಜಿ 80-100 ರೂ.
ದಿನಸಿ ಖರೀದಿ
ಯುಗಾದಿ ಹಬ್ಬವನ್ನು ಹೊಸ ವರ್ಷ ಎಂದು ಆಚರಿಸುವುದರಿಂದ ಹಬ್ಬದ ಅಡುಗೆಯಲ್ಲಿ ಹೋಳಿಗೆ ವಿಶೇಷ. ಹಾಗಾಗಿ ಜನರು ಅಡುಗೆಗೆ ಅಗತ್ಯವಾದ ತೊಗರಿಬೇಳೆ, ಬೆಲ್ಲ, ಸಕ್ಕರೆ, ಎಣ್ಣೆ ಸೇರಿ ಇತರೆ ದಿನಸಿ ಖರೀದಿಯಲ್ಲಿ ನಿರತರಾಗಿದ್ದರು. ಇದಲ್ಲದೆ ಹಬ್ಬದ ನಂತರ ಮಂಗಳವಾರ ವರ್ಷತೊಡಕು ಇರುವುದರಿಂದ ಗ್ರಾಹಕರು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ನಿಂಬೆಹಣ್ಣು, ಕೊತ್ತಂಬರಿ ಸೊಪುಪ, ಪುದೀನಾ, ಸೌತೆಕಾಯಿ, ತೆಂಗಿನಕಾಯಿ ಖರೀದಿ ಮಾಡುತ್ತಿದ್ದಾರೆ.