ಯಾರು ಶ್ರೇಷ್ಠ ? ಯಾವ ವೃತ್ತಿ ಶ್ರೇಷ್ಠ………….ಯಾರು ದೇವರು ?????
ದೇಶ ಕಾಯುವ ಸೈನಿಕ ದೇವರೇ ?
ದೇಹ ಕಾಯುವ ವೈದ್ಯ ದೇವರೇ ?
ಅನ್ನ ಬೆಳೆಯುವ ರೈತ ದೇವರೇ ?
ವಿದ್ಯೆ ನೀಡುವ ಶಿಕ್ಷಕ ದೇವರೇ ?
ಹುಟ್ಟಿಸುವ ತಂದೆ ದೇವರೇ ?
ಜನ್ಮ ನೀಡುವ ತಾಯಿ ದೇವರೇ ?
ಊಟ ಬಡಿಸುವ ಭಟ್ಟ ದೇವರೇ ?
ಅವಶ್ಯ ಇರುವ ಸ್ಥಳಕ್ಕೆ ತಲುಪಿಸುವ ಚಾಲಕ ದೇವರೇ ?
ವಕೀಲ ದೇವರೇ ?
ಪೋಲೀಸ್ ದೇವರೇ ?
ಅಧಿಕಾರಿ ದೇವರೇ ?
ರಾಜಕಾರಣಿ ದೇವರೇ ?
ಧರ್ಮಾಧಿಕಾರಿ ದೇವರೇ ?
ವಸತಿ ನಿರ್ಮಿಸುವ ಕಾರ್ಮಿಕ ದೇವರೇ ?
ಹೊಲಸು ತೊಳೆಯುವ ಕೂಲಿ ದೇವರೇ ?
ಸುದ್ದಿ ನೀಡುವ ಪತ್ರಕರ್ತ ದೇವರೇ ?
ಯಾರು ದೇವರು ?????
ಯುದ್ಧದ ಸಮಯದಲ್ಲಿ ಸೈನಿಕರನ್ನು ದೇವರೆನ್ನುವುದು,
ಹಸಿವಿನ ಸಮಯದಲ್ಲಿ ರೈತರನ್ನು ದೇವರೆನ್ನುವುದು,
ಅನಾರೋಗ್ಯದ ಸಮಯದಲ್ಲಿ ವೈದ್ಯರನ್ನು ದೇವರೆನ್ನುವುದು ಸರಿಯೇ ?
ಅದು ಕಪಟ ನಾಟಕವಾಗುವುದಿಲ್ಲವೇ ?
ಬದುಕಿನ ಯಾವುದೋ ಒಂದು ಸಂದರ್ಭದಲ್ಲಿ ಎಲ್ಲರೂ ಮುಖ್ಯರಾಗುತ್ತಾರಲ್ಲವೇ ಮತ್ತು ಎಲ್ಲವೂ – ಎಲ್ಲರೂ ಒಬ್ಬರಿಗೊಬ್ಬರು ಪೂರಕವಲ್ಲವೇ ?
ಉದಾಹಾರಣೆ, ನಮಗೆ ಹಸಿವಾದಾಗ ಹೋಟೆಲ್‌ಗಳಿಗೆ ಹೋಗುತ್ತೇವೆ. ಸುಮಾರು ನೂರು ರೂಪಾಯಿಗೆ ಹೊಟ್ಟೆ ತುಂಬುವಷ್ಟು ಊಟ ನೀಡುತ್ತಾರೆ. ಜೀವನಕ್ಕೆ ಅತ್ಯಂತ ಅವಶ್ಯಕವಾದ ಆಹಾರವನ್ನು ಪ್ರೀತಿ ಗೌರವದಿಂದ ಉಣ ಬಡಿಸುತ್ತಾರೆ. ನಾವು ಎಂದಾದರೂ ಇದನ್ನು ಸೇವೆ ಎಂದು ಪರಿಗಣಿಸಿದ್ದೇವೆಯೇ ? ಇದೊಂದು ವ್ಯಾಪಾರ ಎಂದೇ ಸಾಮಾನ್ಯವಾಗಿ ಕರೆಯಲಾಗುತ್ತದೆ.
ಆದರೆ ಒಬ್ಬ ಸಾಹಿತಿ, ಕಲಾವಿದ, ನಟ ನಟಿ ಸಂಭಾವನೆ ಪಡೆದು ನಟಿಸಿ ಸೇವೆ ವ್ಯಾಪ್ತಿಗೆ ಸೇರುತ್ತಾರೆ. ಸೈನಿಕ, ವೈದ್ಯ, ಶಿಕ್ಷಕ, ವಕೀಲ ಸಹ ಹಣ ಪಡೆದೇ ಕೆಲಸ ಮಾಡುತ್ತಾರೆ.
ಕೋವಿಡ್ ವಾರಿಯರ್ಸ್ ಎಂದು ಕೆಲವರನ್ನು ಕರೆಯುವುದು, ಆಸ್ಪತ್ರೆಯ ಹಾಸಿಗೆಯ ಮೇಲೆ ರೋಗ ಪೀಡಿತರಾಗಿ ಮಲಗಿರುವಾಗ ವೈದ್ಯರನ್ನು, ಆಸ್ಪತ್ರೆಗಳನ್ನು ದೇವರು, ದೇವಸ್ಥಾನಗಳಿಗೆ ಹೋಲಿಸುವುದರಲ್ಲಿ ವಿಶೇಷತೆ ಇದೆಯೇ ?
ಸೈನಿಕರನ್ನು ತುಂಬಾ ಹಾಡಿ ಹೊಗಳುವುದು ಸಮಂಜಸವೇ ?
ಬದುಕಿನ ಅವಶ್ಯಕತೆ, ಅನಿವಾರ್ಯತೆ, ಅಸಹಾಯಕತೆ, ಆಸಕ್ತಿ ಮುಂತಾದ ಅನೇಕ ಕಾರಣಗಳಿಗಾಗಿ ನಾವು ಒಂದೊಂದು ವೃತ್ತಿಯನ್ನು ಆಯ್ದುಕೊಳ್ಳುತ್ತೇವೆ. ಹೊಟ್ಟೆ ಪಾಡು ಮತ್ತು ಅದಕ್ಕೆ ಬೇಕಾದ ಹಣ ಮಾಡುವುದೇ ಬಹುತೇಕ ಎಲ್ಲರ ಉದ್ದೇಶವಾಗಿರುತ್ತದೆ. ಅಲ್ಲಿ ನಾವು ನಮ್ಮ ಕರ್ತವ್ಯ ನಿರ್ವಹಿಸಲೇಬೇಕು. ಇಲ್ಲದಿದ್ದರೆ ಅಲ್ಲಿಂದ ನಮ್ಮನ್ನು ಬಿಡುಗಡೆಗೊಳಿಸಲಾಗುತ್ತದೆ ಅಥವಾ ನಮಗೆ ಹಣ ಸಿಗುವುದಿಲ್ಲ.
ಕ್ರೀಡಾಪಟುಗಳು ಸಹ ಹಣ ಪಡೆದೇ ಆಟವಾಡುತ್ತಾರೆ.
ಕ್ರೀಡಾ ಪಟುವಿಗೆ ಭಾರತ ರತ್ನ, ಹಾಡುಗಾರರಿಗೆ ಭಾರತ ರತ್ನ, ರಾಜಕಾರಣಿಗೆ ಭಾರತ ರತ್ನ, ಸಾಹಿತಿಗೆ ಭಾರತ ರತ್ನ, ವಿಜ್ಞಾನಿಗಳಿಗೆ ಭಾರತ ರತ್ನ ಹೀಗೆ ಎಲ್ಲವೂ ಸರಿ.
ಆದರೆ ಹಗಲು ರಾತ್ರಿ ಅತ್ಯಂತ ಕಡಿಮೆ ಬೆಲೆಗೆ ನಮ್ಮ ಹೊಟ್ಟೆ ತುಂಬಿಸುವ ಬೀದಿ ಬದಿಯ ವ್ಯಾಪಾರಿ ಮತ್ತು ಅಲ್ಲಿನ ಸಹಾಯಕ ಒಂದು ಸಣ್ಣ ಕೃತಜ್ಞತೆಗೂ ಅರ್ಹನಲ್ಲ, ಕಸ ಗುಡಿಸುವುದು ಸೇವೆಯಲ್ಲ…….
ಇದು ಯೋಚಿಸಬೇಕಾದ ವಿಷಯವೇ ಅಥವಾ ಅವರೆಲ್ಲರೂ ಸಾಧಕರು ಈತ ಹೊಟ್ಟೆ ಪಾಡಿನ ಸಾಧಾರಣ ವ್ಯಕ್ತಿ, ಆತನು ಆ ಗೌರವಕ್ಕೆ ಅರ್ಹನಲ್ಲ ಎಂದು ನಿರ್ಲಕ್ಷಿಸಬೇಕೆ ಅಥವಾ ಅವರವರ ವೃತ್ತಿಯ ಪ್ರಾಮುಖ್ಯತೆ ಮತ್ತು ನೈಪುಣ್ಯತೆ, ಸಾಮರ್ಥ್ಯ, ಸಂಭಾವನೆ ಅವಲಂಬಿಸಿ ಗೌರವ ನಿರ್ಧಾರವಾಗುತ್ತದೆ ಎಂದು ಭಾವಿಸಬೇಕೆ ????
” ಎಲ್ಲರೂ ಮಾಡುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ” ಎಂಬ ದಾಸವಾಣಿ ಎಷ್ಟೊಂದು ಅರ್ಥಗರ್ಭಿತ. ಅದಕ್ಕಾಗಿಯೇ ಹೇಳುವುದು, ಮೊದಲು ವ್ಯಕ್ತಿ ಗೌರವ ಮತ್ತು ನಂತರ ವೃತ್ತಿ ಗೌರವ ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭಗಳಿಗೂ ಎಲ್ಲರಿಗೂ ಏಕ ರೂಪದಲ್ಲಿಯೇ ಇರಬೇಕು. ಅದಕ್ಕಾಗಿ ಸಿಗುವ ಸಂಬಳದಲ್ಲಿಯೂ ತೀರಾ ಅಂತರ ಇರಬಾರದು. ಏಕೆಂದರೆ ವೃತ್ತಿ ಏನೇ ಇರಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅದು ಸಮಾಜಕ್ಕೆ ಅನುಕೂಲಕರವೇ ಆಗಿರುತ್ತದೆ ಮತ್ತು ಅದನ್ನು ಮಾಡುವ ವ್ಯಕ್ತಿ ಮತ್ತು ಆತನ ಅವಲಂಬಿತ ಕುಟುಂಬ ಇದರಿಂದಲೇ ಜೀವನ ಮಾಡಲೇ ಬೇಕಲ್ಲವೇ…..
ವ್ಯಕ್ತಿ ಗೌರವ ನಮ್ಮ ಮೊದಲ ಆದ್ಯತೆಯಾಗಿರಬೇಕು. ಆತ ಏನೇ ಕೆಲಸ ಮಾಡುತ್ತಿರಲಿ ಆತನ ಹಣ, ಅಧಿಕಾರ, ವೃತ್ತಿ, ವೇಷಭೂಷಣ ನೋಡಿ ಮಣೆ ಹಾಕಬಾರದು. ವ್ಯಕ್ತಿಗೆ ಕೊಡಬೇಕಾದ ಕನಿಷ್ಠ ಗೌರವ ಸಿಗಲೇಬೇಕು. ಇಲ್ಲದಿದ್ದರೆ ನಾವು ನಾಗರಿಕ ಮನುಷ್ಯರಾಗಲು ಅರ್ಹರಲ್ಲ.
ಕೂಲಿ ಕಾರ್ಮಿಕರಿಗೆ ಅಪೌಷ್ಟಿಕತೆಯ ಸ್ವಲ್ಪವೇ ಊಟ ನೀಡುವುದು, ಸಿನಿಮಾ ನಟ ನಟಿಯರಿಗೆ ಭಕ್ಷ್ಯ ಭೋಜನ, ಸೈನಿಕರಿಗೆ ವಿಶೇಷ ಗೌರವ, ರೈತರಿಗೆ ನಿರ್ಲಕ್ಷ್ಯ ಮತ್ತು ತಾತ್ಸಾರ, ಚಪ್ಪಲಿ ಹೊಲೆಯುವವರನ್ನು ಕೀಳಾಗಿ ಕಾಣುವುದು ನಾಗರಿಕ ಸಮಾಜದ ಅವಲಕ್ಷಣ. ಮೊದಲು ಯಾವುದೇ ವ್ಯಕ್ತಿಯಾಗಿರಲಿ ಅವನನ್ನು ಗೌರವಿಸೋಣ. ಆಗ ಎಲ್ಲಾ ವೃತ್ತಿಗಳು ಮಹತ್ವ ಪಡೆಯುತ್ತವೆ. ಎಲ್ಲರೂ ಸಮಾನವಾಗಿ ಗೌರವಿಸಲ್ಪಡುತ್ತಾರೆ.
ಯಾವಾಗ ವ್ಯಕ್ತಿಗೆ ಮಹತ್ವ ದೊರೆಯುತ್ತದೋ ಆಗ ಭ್ರಷ್ಟಾಚಾರ ಸಹಜವಾಗಿ ತುಂಬಾ ತುಂಬಾ ಕಡಿಮೆಯಾಗುತ್ತದೆ. ತಲೆ ಒಡೆದು ತಲೆ ಹಿಡಿದು ಹಣ ಮಾಡಲೇಬೇಕು ಅದರಿಂದಾಗಿಯೇ ಬದುಕು ಮತ್ತು ಗೌರವ ಎಂಬ ಭಾವನೆ ಮರೆಯಾಗಿ ತಮ್ಮ ತಮ್ಮ ಆಸಕ್ತಿಯ ವೃತ್ತಿಗಳಲ್ಲಿ ಜೀವನ ಸಾಗಿಸಲು ಮತ್ತು ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಆದ್ದರಿಂದ ಇನ್ನು ಮುಂದೆ ಕೂಲಿಯವರೇ ಇರಲಿ, ದೊಡ್ಡ ಅಧಿಕಾರಿಯೇ ಇರಲಿ, ಶ್ರೀಮಂತನೇ ಇರಲಿ, ರೈತನೇ ಇರಲಿ ನಮ್ಮ ಗೌರವ ಆ ವ್ಯಕ್ತಿಗೆ ಮಾತ್ರವಿರಲಿ. ಆತ ನಮ್ಮ ಸಹಜೀವಿ ಎಂಬ ಪ್ರಜ್ಞೆ ಇರಲಿ. ಯಾರೋ ಒಬ್ಬ ವ್ಯಕ್ತಿ ಅಥವಾ ವೃತ್ತಿಯನ್ನು ಅತಿರೇಕದಿಂದ ವರ್ಣಿಸುವುದು ಕಡಿಮೆಯಾಗಲಿ.
( ಇದು ವ್ಯಕ್ತಿ ಮತ್ತು ವೃತ್ತಿಯ ಸಾಧನೆಗೆ ಪ್ರೋತ್ಸಾಹ ಮಾಡುವುದಕ್ಕೆ ಅಥವಾ ಕೆಲವು ಸಮಯ ಸಂದರ್ಭದಲ್ಲಿ ಸ್ಪೂರ್ತಿ ನೀಡುವುದಕ್ಕೆ ಅನ್ವಯಿಸುವುದಿಲ್ಲ. ಅದೂ ಸಹ ಸಾಂದರ್ಭಿಕ ಸನ್ನಿವೇಶ ಅವಲಂಬಿಸಿರುತ್ತದೆ )
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ