Categories: ಲೇಖನ

ಮೈಸೂರು ದಸರಾ – ಮಹಿಷ ದಸರಾ – ಚಾಮುಂಡೇಶ್ವರಿ ದಸರಾ ಆಚರಣೆಗಿಂತ ಮನುಷ್ಯನ ಅಂತರಂಗದ ದಸರಾ ಆಚರಣೆ ಇಂದಿನ ಅನಿವಾರ್ಯತೆ ಆಗಿದೆ….

ಮೈಸೂರು ದಸರಾ – ಮಹಿಷ ದಸರಾ – ಚಾಮುಂಡೇಶ್ವರಿ ದಸರಾ ಆಚರಣೆಗಿಂತ ಮನುಷ್ಯನ ಅಂತರಂಗದ ದಸರಾ ಆಚರಣೆ ಇಂದಿನ ಅನಿವಾರ್ಯತೆ ಆಗಿದೆ…. ಅದಕ್ಕಾಗಿ…………..

ವಿಜಯ ದಶಮಿ – ಆಯುಧ ಪೂಜೆ – ದಸರಾ…..

ದುಷ್ಟ ಶಕ್ತಿಗಳ ವಿರುದ್ಧ ವಿಜಯದ ಸಂಕೇತ……

ರಾಜನೇ ಪ್ರತ್ಯಕ್ಷ ದೇವರು ಎಂಬ ಪರಿಕಲ್ಪನೆಯ ಸ್ಥಿತಿಯಲ್ಲಿ ರಾಜ ನಿಷ್ಠೆಯೇ ಒಳ್ಳೆಯತನದ ಸಂಕೇತ. ಅದಕ್ಕೆ ವಿರುದ್ಧದ ಎಲ್ಲವೂ ದ್ರೋಹ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಇಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದರ ಗೆರೆಯೇ ಮಾಯವಾಗಿದೆ……

ಹಣ ಅಧಿಕಾರ ಆಸ್ತಿ ಪೌರುಷಗಳೇ ಒಳ್ಳೆಯ ಗುಣಗಳು ಮತ್ತು ಬಡತನವೇ ಶಾಪ ಎಂಬಲ್ಲಿಗೆ ಈಗ ಬಂದು ನಿಂತಿದೆ.

ಒಳಗಿನ ಮತ್ತು ಹೊರಗಿನ ದುಷ್ಟ ಶಕ್ತಿಗಳ ವಿರುದ್ಧ ಜಯಿಸುವುದು ಹೇಗೆ ?

ಅರಿಷಡ್ವರ್ಗಗಳಾದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳನ್ನು ಗೆಲ್ಲುವುದಕ್ಕಿಂತ ನಿಯಂತ್ರಣ ಸಾಧಿಸುವುದು ಬಹಳ ಮುಖ್ಯ. ಜೊತೆಗೆ ಅದೇ ಅರಿಷಡ್ವರ್ಗಗಳನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡು ಜೀವನೋತ್ಸಾಹ ಹೆಚ್ಚಿಸಿಕೊಳ್ಳುವ ಅವಕಾಶ ಆಧುನಿಕ ಕಾಲದಲ್ಲಿ ಇದೆ. ಆದರೆ ಅದಕ್ಕಾಗಿ ಸಾಕಷ್ಟು ಸಾಧನೆ ಮಾಡಬೇಕಾಗುತ್ತದೆ. ವೈಯಕ್ತಿಕ ಜ್ಞಾನದ ಮಟ್ಟವನ್ನು ವೃದ್ಧಿಸಿಕೊಳ್ಳಬೇಕಾಗುತ್ತದೆ.

ಹಾಗೆಯೇ ಆಯುಧ ಪೂಜೆ. ರಾಜಪ್ರಭುತ್ವದಲ್ಲಿ ಕತ್ತಿ ಗುರಾಣಿ ಬಂದೂಕು ಸಿಡಿಮದ್ದು ಬಾಂಬುಗಳೇ ನಿಜವಾದ ಆಯುಧಗಳು. ಆದರೆ ಪ್ರಜಾಪ್ರಭುತ್ವದಲ್ಲಿ ಮಾನವೀಯತೆಯೇ ಆಯುಧಗಳು ಎಂಬ ಅರಿವು ಮೂಡಬೇಕಿದೆ.

ವಾಹನಗಳೆಂಬ ನಿರ್ಜೀವ ವಸ್ತುಗಳಿಗೆ ಬೇಕಿರುವುದು ಪೂಜೆಯಲ್ಲ. ಅವುಗಳ ಸುಸ್ಥಿತಿ ಮತ್ತು ನಮ್ಮ ಜವಾಬ್ದಾರಿ ಬಹಳ ಮುಖ್ಯ. ಇಂದು ಅಪಘಾತಗಳು ಬದುಕಿನ ಭಾಗವಾಗಿ ಸಹಜವಾಗುತ್ತಿರುವಾಗ ವಾಹನಗಳ ಚಾಲನೆಯ ಕೌಶಲ್ಯ ಮತ್ತು ನಿಯಂತ್ರಣ ಮುಖ್ಯವೇ ಹೊರತು ನಿಂಬೆಹಣ್ಣು ಇಡುವುದಲ್ಲ.

ಜಂಬೂ ಸವಾರಿ, ಜಾನಪದ ಕಲೆಗಳ ಪ್ರದರ್ಶನ, ರಾಜ ದರ್ಬಾರ್, ಮೆರವಣಿಗೆ ಎಲ್ಲವೂ ಸಾಂಪ್ರದಾಯಿಕ ಸಾಂಸ್ಕೃತಿಕ ಉತ್ಸವಗಳು ಮತ್ತು ಮೇಲ್ನೋಟದ ಆಕರ್ಷಣೆ ಮಾತ್ರ. ನಿಜವಾದ ದಸರಾ ನಮ್ಮೊಳಗೆ ನಮ್ಮೊಂದಿಗೆ ಸಾಧಿಸಬೇಕಾಗಿರುವ ಕೆಟ್ಟ ನಡವಳಿಕೆಗಳ ಮೇಲಿನ ವಿಜಯೋತ್ಸವ. ಹಾಗೆ ಮಾಡಿದಲ್ಲಿ ಅದು ಸಾಮೂಹಿಕವಾಗಿ ಪ್ರಭಾವ ಬೀರಿ ಸಾಮಾಜಿಕವಾಗಿ ಸಹ ಪರಿಣಾಮ ಮತ್ತು ಫಲಿತಾಂಶಗಳನ್ನು ನೀಡುತ್ತದೆ. ಭ್ರಷ್ಟಾಚಾರ, ಜಾತಿ ಪದ್ದತಿ, ಮೋಸ, ವಂಚನೆ, ಕಲಬೆರಕೆ ಮುಂತಾದ ರಾಕ್ಷಸ ಗುಣಗಳು ಕಡಿಮೆಯಾಗಿ ಈ ಉತ್ಸವಗಳ ಮಹತ್ವ ಹೆಚ್ಚಾಗುತ್ತದೆ.

ಅದನ್ನು ಹೊರತುಪಡಿಸಿ ಯಾವುದೇ ಹಬ್ಬಗಳ ಅದ್ದೂರಿತನ ಕೇವಲ ತೋರಿಕೆಯ, ಅತ್ಯಂತ ಕೃತಕ ಆಚರಣೆ ಅಥವಾ ಪ್ರದರ್ಶನವಾಗುತ್ತದೆ. ಅದು ಎಷ್ಟೇ ಶತಮಾನಗಳಿಂದ ನಡೆದು ಬರುತ್ತಿದ್ದರೂ ಪ್ರಯೋಜನವಿಲ್ಲ.

ಇಡೀ ಮಾಧ್ಯಮ ಲೋಕ ದಸರಾ ಹಬ್ಬದ ಬಾಹ್ಯ ಆಚರಣೆಗಳನ್ನೇ ಗುರಿಯಾಗಿಸಿ ಚರ್ಚೆ ಸಂವಾದ ಪ್ರಸಾರ ಮಾಡುತ್ತವೆ. ಒಳನೋಟಗಳನ್ನು ಮಂಥನ ಮಾಡಿ ದುಷ್ಟ ಶಕ್ತಿಗಳ ಕನಿಷ್ಠ ಪರಿವರ್ತನೆಗೆ ಸ್ವಲ್ಪವೂ ಪ್ರಯತ್ನಿಸುವುದಿಲ್ಲ. ಅದೇ ಆಧುನಿಕ ಕಾಲದ ದುರಂತ.

ಕಣ್ಣಿಗೆ ಕಾಣುವುದನ್ನು ಹೃದಯಕ್ಕೆ ಮುಟ್ಟಿಸುವ ಕೆಲಸವಾಗಬೇಕಿದೆ. ದೃಶ್ಯ ವೈಭವಕ್ಕಿಂತ ಆತ್ಮ ಜ್ಞಾನ ಮುಖ್ಯ ಎಂಬ ಅರಿವು ಮೂಡಬೇಕಿದೆ. ಆಗ ಮಾತ್ರ ವಿಜಯ ದಶಮಿ, ಆಯುಧ ಪೂಜೆ, ಏಕಾದಶಿಗಳಿಗೆ ಒಂದು ಅರ್ಥ ಬರುತ್ತದೆ.

ಆತ್ಮಾವಲೋಕನವೇ ಮಹಾ ದಸರಾ ಮತ್ತು ಬದುಕಿನ ತೃಪ್ತಿಯೇ ನಿತ್ಯ ಹಬ್ಬ….

ದಸರಾ ಹಬ್ಬದ ಸಂದರ್ಭದಲ್ಲಿ ಒಂದು ಸಣ್ಣ ಸಂಕಲ್ಪ ಮಾಡೋಣ……….

” ಒಳ್ಳೆಯವರಾಗೋಣ “….

ಮನಸುಗಳ, ಗುಣ ನಡತೆಗಳ, ವ್ಯವಹಾರಗಳ, ಸಂಬಂಧಗಳ ಮತ್ತು ಆಶಯಗಳ ಶುದ್ದತೆಗೆ ಮನಸ್ಸುಗಳ ಅಂತರಂಗದ ಚಳವಳಿಯ ಕಳಕಳಿಯ ಮನವಿ ಮತ್ತು ಪ್ರೀತಿಯ ಕರೆ……..

ಆತ್ಮೀಯರೆ,
ನೀವು ಯಾರೇ ಆಗಿರಿ, ಎಲ್ಲೇ ಇರಿ, ಯಾವ ವಯಸ್ಸು, ಲಿಂಗ, ಧರ್ಮ ಭಾಷೆಯವರೇ ಆಗಿರಿ, ಯಾವ ಸಂದರ್ಭ, ಸನ್ನಿವೇಶ, ಪ್ರದೇಶದಲ್ಲೇ ವಾಸವಾಗಿರಿ, ಯಾವ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥರದಲ್ಲೇ ಇರಿ, ಇನ್ನು ಮುಂದೆ ನಿಮ್ಮ ಈಗಿನ ಕೆಟ್ಟತನದಲ್ಲಿ ಕನಿಷ್ಠ ಶೇಕಡಾ 10% ರಷ್ಟು ಕಡಿಮೆ ಮಾಡಿಕೊಳ್ಳಿ. ಅದು ನಿಮ್ಮ ವೈಯಕ್ತಿಕ ನಡವಳಿಕೆಯೇ ಇರಲಿ, ವ್ಯವಹಾರವೇ ಇರಲಿ, ಸಂಬಂಧಗಳಲ್ಲೇ ಇರಲಿ, ಮಾನವೀಯ ಮೌಲ್ಯಗಳಲ್ಲೇ ಇರಲಿ ಕನಿಷ್ಠ 10% ಪರ್ಸೆಂಟ್ ಈಗಿನ ಸ್ಥಿತಿಗಿಂತ ಉತ್ತಮ ಪಡಿಸಿಕೊಳ್ಳಿ.

ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂದು ಯಾವುದೇ ಸಂಶೋಧನೆ ಮಾಡಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ಈ ಸಮಾಜದ ನಡವಳಿಕೆಯ ಬಗ್ಗೆ ತಿಳಿದೇ ಇರುತ್ತದೆ.

ಇಂದಿನಿಂದ ಮುಂದಿನ ವರ್ಷದ ಇದೇ ದಿನದೊಳಗಾಗಿ ಈ ಶೇಕಡಾ10% ಬದಲಾವಣೆ ನಮ್ಮಲ್ಲಿ ಬರಲೇಬೇಕು. ಅದನ್ನು ನಮ್ಮ ಆತ್ಮಸಾಕ್ಷಿಗೆ ಒಪ್ಪಿಸಬೇಕು‌. ನಮ್ಮ ಚಿಂತನಾ ಕ್ರಮವನ್ನು ವಿಶಾಲ ಮತ್ತು ಹೆಚ್ಚು ನಾಗರಿಕ ಗೊಳಿಸಿಕೊಳ್ಳಬೇಕು. ಸಮಗ್ರ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಅದು ಈ ದೇಶಕ್ಕೆ, ನಮ್ಮ ಪ್ರೀತಿ ಪಾತ್ರರಿಗೆ, ನಮ್ಮ ಸಂಸ್ಕೃತಿಗೆ, ಈ ಸೃಷ್ಟಿಗೆ ನಾವು ಕೊಡಬಹುದಾದ ಒಂದು ಕಾಣಿಕೆ.

ಉದಾಹರಣೆ,
ನೀವು ಸರ್ಕಾರಿ ಅಧಿಕಾರಿಯಾಗಿದ್ದು ಇಲ್ಲಿಯವರೆಗೂ ಲಂಚ ಪಡೆಯುವವರಾಗಿದ್ದರೆ ಕನಿಷ್ಠ ಅದರಲ್ಲಿ 10% ಕಡಿಮೆ ಮಾಡಿಕೊಳ್ಳಿ. ತುಂಬಾ ಲಾಭದ ವ್ಯಾಪಾರ ಮಾಡುತ್ತಿದ್ದರೆ ಅದರಲ್ಲಿ ಅತಿ ಎನಿಸಿದರೆ 10% ಬಿಡಿ. ವೈದ್ಯ, ಶಿಕ್ಷಕ, ಪೋಲೀಸ್, ವಕೀಲ, ರಾಜಕಾರಣಿ, ಕಂಟ್ರಾಕ್ಟರ್ ಸೇರಿ ಯಾವುದೇ ವೃತ್ತಿಯಲ್ಲಿ ಇರಿ ಅಲ್ಲಿನ ನಿಮ್ಮ ಮೋಸದ ಪ್ರಮಾಣದಲ್ಲಿ ಕನಿಷ್ಠ ಹತ್ತು ಪರ್ಸೆಂಟ್ ಕಡಿಮೆ ಮಾಡಿಕೊಳ್ಳಿ. ಮೋಸ, ವಂಚನೆ, ಸುಳ್ಳು, ಅಸೂಯೆ, ಬೇರೆಯವರ ಬಗ್ಗೆ ಚಾಡಿ, ಕಳ್ಳತನ, ಅತ್ಯಂತ ಕೆಟ್ಟ ಬೈಗುಳ, ಇನ್ನೊಬ್ಬರ ಮನಸ್ಸಿಗೆ ನೋವು ಮಾಡುವುದು ಮುಂತಾದ ವಿಷಯಗಳಲ್ಲಿ ಕನಿಷ್ಠ 10% ಕಡಿಮೆ ಮಾಡಿಕೊಳ್ಳಿ.

ಗೆಳೆಯರೆ ಇದಕ್ಕಾಗಿ ನೀವು ಯಾವುದೇ ವಿಶೇಷ ಶ್ರಮ, ಹಣ, ಸಮಯ ಯಾವುದೂ ಮೀಸಲಿಡಬೇಕಾಗಿಲ್ಲ. ಇದನ್ನು ಓದಿದ ತಕ್ಷಣ ಕೇವಲ 5 ನಿಮಿಷ ಮೌನಕ್ಕೆ ಜಾರಿ ನಿಮಗೆ ಒಪ್ಪಿತ ಎನಿಸಿದರೆ ನಿಮ್ಮ ಅತಿ ಹೆಚ್ಚು ಕೆಟ್ಟತನ ಅನಿಸುವುದರಲ್ಲಿ ಹತ್ತು ಪರ್ಸೆಂಟ್ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.

ಈ ಸಮಾಜ ಬದಲಾಗಬೇಕು, ನಮ್ಮ ಮಕ್ಕಳಿಗೆ ಇದಕ್ಕಿಂತ ಉತ್ತಮ ಸಮಾಜ ಬಳುವಳಿಯಾಗಿ ನೀಡಬೇಕು ಎಂಬ ಮನೋಭಾವ ನಿಮ್ಮದಾಗಿದ್ದರೆ ದಯವಿಟ್ಟು ದೇಶದ ಮತ್ತು ನಮ್ಮ ಸ್ವಂತ ಹಿತಾಸಕ್ತಿಯಿಂದ ಸ್ವಯಂ ಸ್ಪೂರ್ತಿ ಪಡೆದು ಇದನ್ನು ಪಾಲಿಸೋಣ. ಮುಂದಿನ ‌ದಸರಾ ನಂತರ ಮತ್ತೆ ಇನ್ನೂ ಹೆಚ್ಚಿನ ಬದಲಾವಣೆಗೆ ಪ್ರಯತ್ನಿಸೋಣ.

ಇಲ್ಲಿ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಪಡೆದುಕೊಳ್ಳುವುದೇ ಹೆಚ್ಚು. ಒಂದು ಒಳ್ಳೆಯ ಅನುಭವ ನಮ್ಮದಾಗುತ್ತದೆ.

ಒಂದು ವೇಳೆ ನಿಮ್ಮಲ್ಲಿ ಯಾವುದೇ ಕೆಟ್ಟ ಗುಣ ಇಲ್ಲ ಎಂದು ಭಾವಿಸುವುದಾದರೆ ನಿಮಗೆ ಅಭಿನಂದನೆಗಳು ಮತ್ತು ನಿಮ್ಮ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು.

ಆದರೆ ಇಂದಿನ ಸಮಾಜ ನೋಡಿದರೆ ಬಹುತೇಕ ಕೆಟ್ಟ ನಡವಳಿಕೆಯ ಜನರೇ ಹೆಚ್ಚಾಗಿ ಕಾಣುತ್ತಾರೆ. ಆದ್ದರಿಂದ ನಮ್ಮ ನಮ್ಮ ವಿಲ್ ಪವರ್ ಉಪಯೋಗಿಸಿ ಈ ಮಾನಸಿಕ ನಿಯಂತ್ರಣ ಸಾಧಿಸೋಣ.

ಕರ್ನಾಟಕದ ಮಟ್ಟಿಗೆ ಇದೊಂದು ಚಳವಳಿಯ ರೂಪ ನೀಡಲು ಪ್ರಯತ್ನಿಸೋಣ. ಒಮ್ಮೆ ವ್ಯಕ್ತಿ ಆತ್ಮಸಾಕ್ಷಿಗೆ ಅನುಗುಣವಾಗಿ ಜೀವಿಸಲು ಪ್ರಾರಂಭಿಸಿದರೆ ನಮ್ಮ ಇಂದಿನ ಬಹುತೇಕ ಸಮಸ್ಯೆಗಳು ತನ್ನಿಂದ ತಾನೇ ಕಡಿಮೆಯಾಗಿ ಜನರ ನೆಮ್ಮದಿಯ ಮಟ್ಟ ಹೆಚ್ಚಾಗುತ್ತದೆ. ವೈಯಕ್ತಿಕ ಸಮಸ್ಯೆಗಳು ಸೇರಿ ಅನೇಕ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ.

ವ್ಯಕ್ತಿ ಒಳ್ಳೆಯವನಾಗದೆ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಯಾವುದೇ ಕಾನೂನು, ಯಾವುದೇ ಶಿಕ್ಷೆಯ ಭಯ ಜನರನ್ನು ಬದಲಾಯಿಸಲಾರದು. ರೈತರ, ಕಾರ್ಮಿಕರ, ಮಹಿಳೆಯರ, ಜಾತಿ ವ್ಯವಸ್ಥೆಯ, ಭ್ರಷ್ಟಾಚಾರದ ಎಲ್ಲಾ ಸಮಸ್ಯೆಗಳಿಗೂ ಮದ್ದಾಗಬಲ್ಲ ಈ
” ಒಳ್ಳೆಯವರಾಗೋಣ ” ಬದಲಾಗುವ ಚಳವಳಿಗೆ ನಿಮ್ಮನ್ನು ಸ್ವಾಗತಿಸುತ್ತಾ,
ನಿಮ್ಮ ಸಹಕಾರ ನಿರೀಕ್ಷಿಸುತ್ತಾ…..

ಇದಕ್ಕೆ ಆ… ಓ…. ಎಂಬ ಪ್ರಚಾರದ ಅವಶ್ಯಕತೆ ಇಲ್ಲ. ನಿಂತ ನೆಲೆಯಲ್ಲೇ ಒಂದು ಪ್ರತಿಜ್ಞಾ ನಿರ್ಧಾರ ಕೈಗೊಂಡು ಸಾಮೂಹಿಕವಾಗಿ ಇದನ್ನು ಪಾಲಿಸೋಣ.
ಧನ್ಯವಾದಗಳು.

ಇಂದಿನಿಂದ
” ಒಳ್ಳೆಯವರಾಗೋಣ “………

ಒಳ್ಳೆಯತನಕ್ಕಾಗಿ ಪ್ರಯತ್ನಿಸೋಣ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

Документ_9

Effektives Schreiben von Hausarbeiten Das Schreiben von Hausarbeiten kann für viele Studierende eine große Herausforderung…

15 minutes ago

ನಾನು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಕೇಳಿದ್ದೇನೆ- ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ- ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ

ನಾನು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಕೇಳಿದ್ದೇನೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಪಕ್ಷದ ವರಿಷ್ಠರು ಯಾವುದೇ…

8 hours ago

ಹೆಣ್ಣಿನ‌ ಹಿತರಕ್ಷಣೆಗಾಗಿ ಮಹಿಳಾ ಪೊಲೀಸ್ ಠಾಣೆ ಸದಾ ಸನ್ನದ್ಧ- ಮಹಿಳಾ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಪಂಕಜಾ

ಹೆಣ್ಣಿನ‌ ಹಿತರಕ್ಷಣೆಗಾಗಿ ದೊಡ್ಡಬಳ್ಳಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಲಾಗಿದೆ..ಈ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ವರದಕ್ಷಿಣೆ ನಿಷೇಧ ಕಾಯ್ದೆ, ಮಕ್ಕಳ…

11 hours ago

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಸಾಧನೆ

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಮುನ್ನ ( ಏಪ್ರಿಲ್ ‌14 ) ಅವರ ವ್ಯಕ್ತಿತ್ವ ಮತ್ತು…

22 hours ago

Документ_12

In der heutigen akademischen Welt steht die Qualität der schriftlichen Arbeiten im Mittelpunkt des Interesses.…

1 day ago

‘ಆಸರೆ’ ಯೋಜನೆ: ಒಂಟಿ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಭದ್ರತೆ, ಆರೋಗ್ಯ ನೆರವು ಹಾಗೂ ಯೋಗಕ್ಷೇಮ ವಿಚಾರಣೆ

'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…

1 day ago