ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ಗಡಿಭಾಗದಲ್ಲಿರುವ ಜಕ್ಕಲಮಡಗು ಜಲಾಶಯ ಅವಳಿ ನಗರಗಳಿಗೆ ಕುಡಿಯುವ ನೀರು ಪೂರೈಸುವ ನೀರಿನ ಸೆಲೆಯಾಗಿದ್ದು, ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಇಂದು ಮುಂಜಾನೆ ಜಕ್ಕಲಮಡುಗು ಜಲಾಶಯ ಸಂಪೂರ್ಣ ಭರ್ತಿಯಾಗಿ ಕೋಡಿಬಿದ್ದಿದೆ, ಜಲಾಶಯದ ನೀರನ್ನೇ ನಂಬಿರುವ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಜನರ ಮುಖದಲ್ಲಿ ಮಂದಹಾಸ ಮೂಡಿದೆ.
ಈ ಹಿನ್ನೆಲೆ ಜಕ್ಕಲಮಡಗು ಜಲಾಶಯಕ್ಕೆ ಇಂದು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್, ನಗರಸಭೆ ಸದಸ್ಯರು ಭೇಟಿ ನೀಡಿ ಕೋಡಿ ಬಿದ್ದಿರುವ ದೃಶ್ಯ ಕಣ್ತುಂಬಿಕೊಂಡರು.
ನಾಳೆ ಬೆಳಗ್ಗೆ 11ಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಹಾಗೂ ಶಾಸಕ ಧೀರಜ್ ಮುನಿರಾಜ್ ಅವರು ಜಕ್ಕಲಮಡಗು ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಜಕ್ಕಲಮಡು ಜಲಾಶಯ 4390 ದಶಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯ, 51.25 ಚ.ಮೀ. ಶೇಖರಣಾ ವಿಸ್ತಿರ್ಣ ಹೊಂದಿದೆ. ಈ ಜಲಾಶಯದಿಂದ ಚಿಕ್ಕಬಳ್ಳಾಪುರ ನಗರ ಶೇ.68 ಪಾಲು ಪಡೆದರೆ, ದೊಡ್ಡಬಳ್ಳಾಪುರ ನಗರಕ್ಕೆ ಶೇ.32 ಪಾಲಿದೆ.
ಈ ಬಾರಿ ಜಲಾಶಯ ತುಂಬಿ ಹರಿಯಲಿದೆ ಎಂಬ ಜನರ ಆಶಾಭಾವನೆಗೆ ತಕ್ಕಂತೆ ಉತ್ತಮ ಮಳೆಯಾಗಿ ಜಲಾಶಯ ತುಂಬಿರುವುದು ಎರಡು ನಗರಗಳ ಜನತೆಗೆ ಅತ್ಯಂತ ಸಂತಸದ ವಿಷಯವಾಗಿದೆ.