ಮೈತ್ರಿಕೂಟದಿಂದ ಜೆಡಿಎಸ್‌ ಅಭ್ಯರ್ಥಿ ಘೋಷಣೆಗೆ ಜಿ.ಸುನಿಲ್ ಕುಮಾರ್ ಒತ್ತಾಯ

ಕೋಲಾರ: ಮುಂಬರುವ ಕೋಲಾರ ಮೀಸಲು ಲೋಕಸಭಾ ಚುನಾವಣೆಗೆ ಜೆಡಿಎಸ್‌-ಬಿಜೆಪಿ ಮೈತ್ರಿಕೂಟದಿಂದ ಜೆಡಿಎಸ್ ಅಭ್ಯರ್ಥಿಯನ್ನು ಕೂಡಲೇ ವರಿಷ್ಠರು ಘೋಷಣೆ ಮಾಡಿದರೆ ಗೆಲ್ಲಲು ಸುಲಭವಾಗುತ್ತದೆ ಎಂದು ಜೆಡಿಎಸ್ ಎಸ್ಸಿ ಘಟಕದ ತಾಲೂಕ ಅಧ್ಯಕ್ಷ ಲಕ್ಷ್ಮೀಸಾಗರ ಜಿ.ಸುನಿಲ್ ಕುಮಾರ್ ಅವರು ಜೆಡಿಎಸ್‌ ವರಿಷ್ಠರನ್ನು ಒತ್ತಾಯಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ ಅವರು, ಈಗಾಗಲೇ ರಾಜ್ಯದಲ್ಲಿ ಜೆಡಿಎಸ್‌-ಬಿಜೆಪಿ ಪಕ್ಷಗಳು ಮೈತ್ರಿಯಾಗಿ ಚುನಾವಣೆಯನ್ನು ಎದುರಿಸಲು ಸಿದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ‌ ಪ್ರಧಾನಿ ಎಚ್.ಡಿ ದೇವೇಗೌಡರ ನಿರ್ಧಾರವು ಒಳ್ಳೆಯ ಬೆಳವಣಿಗೆಯಾಗಿದೆ. ಈಗಾಗಲೇ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ.‌ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಜೆಡಿಎಸ್‌ ಪಕ್ಷದಿಂದಲ್ಲೇ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಕಾರ್ಯಕ್ರಮ ಒಂದರಲ್ಲಿ ಹೇಳಿದ್ದಾರೆ. ಅದರಂತೆ ಕೂಡಲೇ ಅಭ್ಯರ್ಥಿಯನ್ನು ಘೋಷಣೆ ಮಾಡಿದರೆ ಮೈತ್ರಿಕೂಟದಿಂದ ಮತದಾರರನ್ನು ಸಂಪರ್ಕಿಸಲು ಸಹಕಾರಿಯಾಗುತ್ತದೆ ಎಂದರು.

ಈಗಾಗಲೇ ಮೈತ್ರಿಕೂಟದಲ್ಲಿ ಬಿಜೆಪಿಯ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ ಕೋಲಾರ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡದಿದರೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಗೆ ನರೇಂದ್ರ ಮೋದಿ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರ ಆಡಳಿತದ ಜನಪರ, ರೈತ ಮಹಿಳೆಯರ ಪರವಾದ ಯೋಜನೆಗಳ ಬಗ್ಗೆ ಮನವರಿಕೆ ಮಾಡಿ ಎರಡು ಪಕ್ಷಗಳ ಕಾರ್ಯಕರ್ತರಲ್ಲಿ ಸಮನ್ವಯತೆ ಸಾಧಿಸಿಕೊಂಡು ಮತ ಪಡೆಯಲು ಸಾಧ್ಯವಾಗುತ್ತದೆ.  ಆ ನಿಟ್ಟಿನಲ್ಲಿ ಕೂಡಲೇ ಮೈತ್ರಿಕೂಟದ ಜೆಡಿಎಸ್‌ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕು ಎಂದು ಜಿ.ಸುನಿಲ್ ಕುಮಾರ್ ವರಿಷ್ಠರನ್ನು ಒತ್ತಾಯಿಸಿದರು.

Leave a Reply

Your email address will not be published. Required fields are marked *